ಸಾರಾಂಶ
ನವದೆಹಲಿ: ಯಮುನಾ ನದಿಗೆ ವಿಷ ಹಾಕಲಾಗಿದೆ ಎಂಬ ಆರೋಪದ ಪ್ರಕರಣ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಬಿಜೆಪಿ ನಡುವೆ ಯುದ್ಧಕ್ಕೆ ಕಾರಣವಾದ ಬಳಿಕ ಇದೀಗ ಕೇಜ್ರಿ ಮತ್ತು ಚುನಾವಣಾ ಆಯೋಗದ ನಡುವೆ ಸಮರ ಶುರುವಾಗಿದೆ.
ಯಮುನಾ ನದಿಗೆ ಹರ್ಯಾಣ ಬಿಜೆಪಿಗರು ವಿಷ ಬೆರೆಸಿದ್ದಾರೆ ಎಂಬ ತಮ್ಮ ಆರೋಪ ಸಂಬಂಧ ಕೇಜ್ರಿವಾಲ್ ಬುಧವಾರ ಆಯೋಗಕ್ಕೆ ಉತ್ತರ ನೀಡಿದ್ದರು. ಆದರೆ ಉತ್ತರ ಸಮರ್ಪಕವಾಗಿಲ್ಲ. ದೆಹಲಿ ಜಲ ಮಂಡಳಿಯವರು ಎಲ್ಲಿ? ಯಾವಾಗ? ಹೇಗೆ ನೀರಿನ ಪರೀಕ್ಷೆ ಮಾಡಿದ್ದರು. ಪರೀಕ್ಷೆ ಮಾಡಿದ್ದ ಎಂಜಿನಿಯರ್ ಯಾರು? ನೀರಿನಲ್ಲಿ ಯಾವ ರೀತಿ ವಿಷಯ ಇತ್ತು? ಅದರ ಪ್ರಮಾಣವೇನು? ಅದರ ಗುಣಲಕ್ಷಣಗಳೇನು? ಯಮುನೆಯನ್ನು ವಿಷಯುಕ್ತಗೊಳಿಸಿದ್ದು ಹೇಗೆ? ಅದನ್ನು ಕುಡಿದರೆ ಸಾಮೂಹಿಕ ಹತ್ಯಾಕಾಂಡ ಆಗಿ ಹೋದೀತು ಎಂಬ ಆರೋಪಕ್ಕೆ ನಿರ್ದಿಷ್ಟ ಉತ್ತರ ನೀಡಿ ಎಂದು ಆಯೋಗ ಮತ್ತೆ ಕೇಜ್ರಿವಾಲ್‌ಗೆ ನೋಟಿಸ್ ನೀಡಿದೆ.
ಜೊತೆಗೆ ಈ ನೋಟಿಸ್‌ಗೆ ಉತ್ತರಿಸಲು ಜ.31ರ ಗಡುವು ನೀಡಿದ್ದು, ಸೂಕ್ತ ಉತ್ತರ ನೀಡದೇ ಹೋದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಕೇಜ್ರಿ ಕಿಡಿ:
ಆಯೋಗದ ಮರು ನೋಟಿಸ್ ಬಗ್ಗೆ ಕಿಡಿಕಾರಿರುವ ಕೇಜ್ರಿವಾಲ್, ‘ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ರಾಜಕೀಯ ಮಾಡುತ್ತಿದ್ದಾರೆ. ನಿವೃತ್ತಿ ನಂತರದ ಆಯಕಟ್ಟಿನ ಹುದ್ದೆಗಳಿಗಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಅವರಷ್ಟು ಹಾಳು ಮಾಡಿದವರು ಇನ್ನೊಬ್ಬರಿಲ್ಲ. ಅವರು ಬೇಕಾದರೆ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿ. ಆದರೆ ನಾನು ಬದುಕಿರುವವರೆಗೂ ದೆಹಲಿಯ ಜನರು ವಿಷಯುಕ್ತ ನೀರನ್ನು ಕುಡಿಯಲು ಬಿಡುವುದಿಲ್ಲ. ಇನ್ನು ಎರಡು ದಿನಗಳಲ್ಲಿ ಅವರು ನನ್ನನ್ನು ಬಂಧಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಆದರೆ ಅದಕ್ಕೆಲ್ಲಾ ನಾನು ಹೆದರುವುದಿಲ್ಲ ಎಂದು ಕೇಜ್ರಿವಾಲ್ ಸವಾಲು ಹಾಕಿದ್ದಾರೆ.
ವಿವಾದಕ್ಕೆ ಕಾರಣವೇನು?ಚುನಾವಣೆ ಹೊತ್ತಿನಲ್ಲಿ ಆಪ್‌ಗೆ ಕಳಂಕ ಹೊರಿಸಲು ಬಿಜೆಪಿ ಸಂಚು ರೂಪಿಸಿದೆ. ಇದಕ್ಕಾಗಿಯೇ ಯಮುನಾ ನದಿಗೆ ವಿಷಪೂರಿತ ಕೈಗಾರಿಕಾ ತ್ಯಾಜ್ಯವನ್ನು ಉದ್ದೇಶಪೂರ್ವಕವಾಗಿ ಸೇರಿಸುತ್ತಿದೆ. ಈ ಮೂಲಕ ನದಿಯನ್ನು ವಿಷಪೂರಿತವಾಗಿ ಮಾಡುತ್ತಿದೆ ಎಂದು ಚುನಾವಣಾ ಪ್ರಚಾರದ ವೇಳೆ ಆರೋಪಿಸಿದ್ದರು.
- ಯುಮನೆಗೆ ವಿಷ ಆರೋಪಕ್ಕೆ ನಿರ್ದಿಷ್ಟ ಉತ್ತರ ಕೊಡಿ: ಆಯೋಗ । ಆಯೋಗದ್ದು ರಾಜಕೀಯ: ಕೇಜ್ರಿ
ಸರಿಯಾದ ಉತ್ತರ ಕೊಡಿಆರೋಪ ಸಂಬಂಧ ನೀಡಿದ್ದ ನೋಟಿಸ್‌ಗೆ ಕೇಜ್ರಿವಾಲ್ ಉತ್ತರ ಸಮರ್ಪಕವಾಗಿಲ್ಲ. ನಿರ್ದಿಷ್ಟ ಉತ್ತರ ಕೊಡದಿದ್ದರೆ ಕ್ರಮ ಕೈಗೊಳ್ಳುತ್ತೇವೆ.- ಚುನಾವಣೆ ಆಯೋಗ-ಸಿಇಸಿ ಚುನಾವಣೆಗೆ ಸ್ಪರ್ಧಿಸಲಿಮುಖ್ಯ ಚುನಾವಣಾ ಆಯುಕ್ತರು ನಿವೃತ್ತಿ ನಂತರ ಹುದ್ದೆ ಪಡೆಯಲು ರಾಜಕೀಯ ಮಾಡುತ್ತಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸಲಿ.
- ಅರವಿಂದ ಕೇಜ್ರಿವಾಲ್, ಆಪ್ ಮುಖ್ಯಸ್ಥ