ಮಂಡ್ಯ ಜಿಲ್ಲಾ ಕಾಂಗ್ರೆಸ್ ಹೊಸ ಅಧ್ಯಕ್ಷರ ಆಯ್ಕೆ ಶುರು..!

| Published : Jul 09 2025, 12:17 AM IST / Updated: Jul 09 2025, 12:18 AM IST

ಸಾರಾಂಶ

ಒಂದು ಹಾಗೂ ಒಂದಕ್ಕಿಂತ ಹೆಚ್ಚು ಅವಧಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರನ್ನು ಬದಲಾವಣೆ ಮಾಡಬೇಕೆಂಬ ಎಐಸಿಸಿ ಸೂಚನೆ ಮೇರೆಗೆ ಶುಕ್ರವಾರ (ಜು.೧೧)ರಂದು ಮಂಡ್ಯ ಜಿಲ್ಲೆಗೆ ವೀಕ್ಷಕರು ಭೇಟಿ ನೀಡುತ್ತಿದ್ದಾರೆ. ಇದರೊಂದಿಗೆ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆಯಲಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಒಂದು ಹಾಗೂ ಒಂದಕ್ಕಿಂತ ಹೆಚ್ಚು ಅವಧಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರನ್ನು ಬದಲಾವಣೆ ಮಾಡಬೇಕೆಂಬ ಎಐಸಿಸಿ ಸೂಚನೆ ಮೇರೆಗೆ ಶುಕ್ರವಾರ (ಜು.೧೧)ರಂದು ಮಂಡ್ಯ ಜಿಲ್ಲೆಗೆ ವೀಕ್ಷಕರು ಭೇಟಿ ನೀಡುತ್ತಿದ್ದಾರೆ. ಇದರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಅಧಿಕೃತ ಚಾಲನೆ ದೊರಕಲಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಜಿಲ್ಲೆಗೆ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಭಾರತೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್‌ಕುಮಾರ್ ಅವರನ್ನು ಜಿಲ್ಲೆಗೆ ವೀಕ್ಷಕರನ್ನಾಗಿ ನೇಮಕ ಮಾಡಿದ್ದು, ಶುಕ್ರವಾರ ಭೇಟಿ ನೀಡಲಿರುವ ವೀಕ್ಷಕರು ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು, ೨೦೨೩ರ ವಿಧಾನಸಭೆ ಚುನಾವಣಾ ಅಭ್ಯರ್ಥಿಗಳು, ಲೋಕಸಭೆ ಚುನಾವಣೆ ಅಭ್ಯರ್ಥಿಗಳು, ಎಐಸಿಸಿ, ಕೆಪಿಸಿಸಿ ಸದಸ್ಯರು, ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಸದಸ್ಯರೊಂದಿಗೆ ಹೊಸ ಅಧ್ಯಕ್ಷರ ಆಯ್ಕೆ ಕುರಿತು ಸಮಾಲೋಚನೆ ನಡೆಸಿ, ಹೊಸ ಆಕಾಂಕ್ಷಿಗಳ ಕುರಿತು ಮಾಹಿತಿ ಸಂಗ್ರಹಿಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಏಳೂವರೆ ವರ್ಷ ಪೂರೈಸಿದ ಗಂಗಾಧರ್:

ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಸಿ.ಡಿ.ಗಂಗಾಧರ್ ಏಳೂವರೆ ವರ್ಷ ಅಧಿಕಾರ ಪೂರೈಸಿದ್ದಾರೆ. ೨೦೧೭ರ ಡಿಸೆಂಬರ್ ೨೭ರಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಎಲ್ಲಾ ಹಿರಿಯ-ಕಿರಿಯ ನಾಯಕರು, ಸಚಿವರು, ಶಾಸಕರನ್ನು ವಿಶ್ವಾಸದಲ್ಲಿರಿಸಿಕೊಂಡು ಬಣ ರಾಜಕೀಯಕ್ಕೆ ಅವಕಾಶವಾಗದಂತೆ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಇವರ ಅಧಿಕಾರವಧಿಯಲ್ಲಿ ೨೦೧೮ರ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ಏಳೂ ಸ್ಥಾನಗಳನ್ನೂ ಕಳೆದುಕೊಂಡು ತೀವ್ರ ಮುಖಭಂಗಕ್ಕೊಳಗಾಗಿತ್ತು. ಕಾಂಗ್ರೆಸ್ ಅಸ್ತಿತ್ವದಲ್ಲಿಲ್ಲದಿದ್ದರೂ ಆನಂತರ ಜಿಲ್ಲೆಯಲ್ಲಿ ನಡೆದ ಎರಡು ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸುವುದರೊಂದಿಗೆ ಅಧ್ಯಕ್ಷರಾಗಿ ಸಿ.ಡಿ.ಗಂಗಾಧರ್ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿತ್ತು.

ಅಧ್ಯಕ್ಷರ ಬದಲಾವಣೆ ಪ್ರಯತ್ನ ಫಲಿಸಿರಲಿಲ್ಲ:

ಇದರ ನಡುವೆ ೨೦೨೧ರ ಫೆಬ್ರವರಿ ತಿಂಗಳಲ್ಲಿ ಸಿ.ಡಿ.ಗಂಗಾಧರ್ ಅಧ್ಯಕ್ಷರಾಗಿ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಅವರನ್ನು ಬದಲಾಯಿಸಬೇಕೆಂಬ ಕೂಗು ಸ್ಥಳೀಯ ಮುಖಂಡರಿಂದ ಕೇಳಿಬಂದಿತ್ತು. ಹೊಸ ನೇಮಕಾತಿಗೆ ವೀಕ್ಷಕರನ್ನು ನೇಮಕ ಮಾಡುವುದು, ಆಕಾಂಕ್ಷಿಗಳ ಮನವಿ ಸ್ವೀಕರಿಸಿ ಕೆಪಿಸಿಸಿ ಕಚೇರಿಗೆ ವರದಿ ಸಲ್ಲಿಸಿ ಹೊಸ ಹೆಸರನ್ನು ಘೋಷಣೆ ಮಾಡಬೇಕು. ಒಂದು ವೇಳೆ ಹೊಸ ನೇಮಕಾತಿ ಪ್ರಕ್ರಿಯೆ ಸಾಧ್ಯವಾಗದಿದ್ದರೆ ಜಿಲ್ಲಾ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂದು ರಾಜ್ಯ ನಾಯಕರ ಮೇಲೆ ಒತ್ತಡ ಹಾಕಿದ್ದರು.

ಆದರೆ, ಅಧ್ಯಕ್ಷರ ಬದಲಾವಣೆಗಾಗಿ ಸ್ಥಳೀಯ ಮುಖಂಡರು ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಕಾಂಗ್ರೆಸ್ ನಾಯಕರಾಗಿದ್ದ ಎನ್.ಚಲುವರಾಯಸ್ವಾಮಿ ಹಾಗೂ ಮಾಜಿ ಶಾಸಕರಾಗಿದ್ದವರು ಸಿ.ಡಿ.ಗಂಗಾಧರ್ ಬೆನ್ನಿಗೆ ನಿಂತು ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಿಕೊಂಡು ಬಂದಿದ್ದರು. ೨೦೨೩ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ೬ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸಿದ್ದರಿಂದ ಅಧ್ಯಕ್ಷರ ಬದಲಾವಣೆಯ ಔಚಿತ್ಯ ಕಂಡುಬರಲಿಲ್ಲ.

ಒಲಿದ ಮೈಷುಗರ್ ಅಧ್ಯಕ್ಷ ಸ್ಥಾನ:

ಸಿ.ಡಿ.ಗಂಗಾಧರ್ ಅವರಿಗೆ ಅದೃಷ್ಟವೆಂಬಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದ ಜೊತೆಗೆ ೧ ಮಾರ್ಚ್ ೨೦೨೪ರಂದು ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸ್ಥಾನವೂ ಒಲಿದುಬಂದಿತು. ಇದೀಗ ಎಐಸಿಸಿ ಜಿಲ್ಲಾಧ್ಯಕ್ಷರ ಬದಲಾವಣೆಗೆ ಸೂಚನೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷರು ವೀಕ್ಷಕರನ್ನೂ ನೇಮಿಸಿರುವುದರಿಂದ ಈ ಬಾರಿ ಸಿ.ಡಿ.ಗಂಗಾಧರ್ ಬದಲಾವಣೆ ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ಕಾಂಗ್ರೆಸ್‌ನ ದೀರ್ಘಾವಧಿ ಅಧ್ಯಕ್ಷ:

ಏಳೂವರೆ ವರ್ಷ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಅಧಿಕಾರ ನಡೆಸಿರುವ ಸಿ.ಡಿ.ಗಂಗಾಧರ್ ದೀರ್ಘಾವಧಿ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅವರು ಏಳು ವರ್ಷ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಸಿ.ಡಿ.ಗಂಗಾಧರ್ ತಮ್ಮ ಅವಧಿಯಲ್ಲಿ ಎರಡು ವಿಧಾನಸಭೆ, ಎರಡು ಲೋಕಸಭೆ, ಒಂದು ಲೋಕಸಭೆ ಉಪಚುನಾವಣೆ, ನಾಲ್ಕು ವಿಧಾನಪರಿಷತ್ ಚುನಾವಣೆಗಳಲ್ಲಿ ಪಕ್ಷದ ಪರ ಶ್ರಮವಹಿಸಿ ಕೆಲಸ ಮಾಡಿದ್ದಾರೆ.ರೇಸ್‌ನಲ್ಲಿ ಎಂ.ಎಸ್.ಚಿದಂಬರ್, ಸಿ.ಎಂ.ದ್ಯಾವಪ್ಪ

ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಎಂ.ಚಿದಂಬರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ವಕ್ತಾರ ಸಿ.ಎಂ.ದ್ಯಾವಪ್ಪ ಅವರು ಪ್ರಮುಖವಾಗಿ ರೇಸ್‌ನಲ್ಲಿದ್ದಾರೆ. ಜಿಲ್ಲಾಧ್ಯಕ್ಷ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಎಂ.ಎಸ್.ಚಿದಂಬರ್ ಅವರು ಕಾಂಗ್ರೆಸ್ ಪಕ್ಷದೊಂದಿಗೆ ಅವರ ಕುಟುಂಬ ಸದಸ್ಯರ ಒಡನಾಟದ ಹಿನ್ನೆಲೆಯಲ್ಲಿ ಹುದ್ದೆಯನ್ನು ಕೇಳುತ್ತಿದ್ದಾರೆ. ಕಳೆದ ೨೦ ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಕ್ಷೇತ್ರಗಳ ಯುವ ಮುಖಂಡರೊಂದಿಗೆ ಒಡನಾಟವಿದೆ. ಯೂತ್ ಕಾಂಗ್ರೆಸ್ ಅಧ್ಯಕ್ಷ, ಪ್ರಚಾರ ಸಮಿತಿ ಅಧ್ಯಕ್ಷ, ಕೆಪಿಸಿಸಿ ಕೋ-ಆರ್ಡಿನೇಟರ್ ಆಗಿ ಮತ್ತು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಪಕ್ಷ ಸಂಘಟನೆ ಗುರಿಯೊಂದಿಗೆ ಹುದ್ದೆ ಆಕಾಂಕ್ಷಿಯಾಗಿದ್ದೇನೆ ಎಂದು ಎಂ.ಎಸ್.ಚಿದಂಬರ್ ಹೇಳಿದ್ದಾರೆ.

೨೦೨೪ರ ಲೋಕಸಭಾ ಚುನಾವಣೆ ಸಮಯದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಎಂ.ಎಸ್.ಚಿದಂಬರ್ ಹೆಸರನ್ನು ಸೂಚಿಸಿದ್ದರು. ಡಿ.ಕೆ.ಶಿವಕುಮಾರ್ ಜೊತೆಗಿನ ಉತ್ತಮ ಬಾಂಧವ್ಯ ಹೊಂದಿದ್ದ ಕಾರಣದಿಂದಲೇ ಎಂ.ಎಸ್.ಚಿದಂಬರ್‌ಗೆ ಜಿಲ್ಲಾ ಕಾಂಗ್ರೆಸ್‌ನೊಳಗೆ ಕಾರ್ಯಾಧ್ಯಕ್ಷ ಹುದ್ದೆಯನ್ನು ಸೃಷ್ಟಿಸಿ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿರುವ ಯುವ ಮುಖಂಡ ಸಿ.ಎಂ.ದ್ಯಾವಪ್ಪ, ವಿದ್ಯಾರ್ಥಿ ದಿಸೆಯಿಂದಲೂ ಸಂಘಟನೆಯಲ್ಲಿದ್ದೇನೆ. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ಪಕ್ಷದ ವಕ್ತಾರನಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಜೊತೆಗೆ ಕಾಂಗ್ರೆಸ್ ರಾಹುಲ್‌ ಗಾಂಧಿ ಅವರೊಂದಿಗೆ ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಮಂಡ್ಯದಿಂದ ಕಾಶ್ಮೀರದವರೆಗೆ ಹೆಜ್ಜೆ ಹಾಕಿದ ಜಿಲ್ಲೆಯ ಏಕೈಕ ಕಾಂಗ್ರೆಸ್ ಮುಖಂಡನಾಗಿದ್ದೇನೆ. ರಾಜ್ಯ ಮುಖಂಡರು ಅವಕಾಶ ಕೊಟ್ಟರೆ ಪಕ್ಷ ಕಟ್ಟುವ ಕೆಲಸ ಮಾಡುವೆ ಎಂಬ ಅದಮ್ಯ ಉತ್ಸಾಹದೊಂದಿಗೆ ನಾಯಕರೆದುರು ಬೇಡಿಕೆ ಇಟ್ಟಿದ್ದಾರೆ.ಪಕ್ಷಕ್ಕೆ ನಿಷ್ಠನಾಗಿ ಏಳೂವರೆ ವರ್ಷ ಕೆಲಸ ನಿರ್ವಹಿಸಿದ ತೃಪ್ತಿ ಇದೆ. ಅಧ್ಯಕ್ಷರ ಆಯ್ಕೆ ವಿಚಾರವಾಗಿ ವೀಕ್ಷಕರು ಶುಕ್ರವಾರ ಬರುತ್ತಿದ್ದಾರೆ. ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬಹುದು ಅಥವಾ ಹಳೇ ಅಧ್ಯಕ್ಷರನ್ನು ಮುಂದುವರೆಸಲೂಬಹುದು.-ಸಿ.ಡಿ.ಗಂಗಾಧರ್, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ