2025ರ ಮೇ ತಿಂಗಳೊಳಗೆ ಬಿಬಿಎಂಪಿಗೆ ಚುನಾವಣೆ?

| Published : Nov 05 2024, 01:32 AM IST

ಸಾರಾಂಶ

ಕಳೆದ ನಾಲ್ಕು ವರ್ಷಗಳಿಂದ ಪುರಪಿತೃಗಳಿಲ್ಲದ ಬಿಬಿಎಂಪಿಗೆ ಚುನಾವಣೆ 2025ರ ಮೇ ತಿಂಗಳೊಳಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ನಾಲ್ಕು ವರ್ಷಗಳಿಂದ ಪುರಪಿತೃಗಳಿಲ್ಲದ ಬಿಬಿಎಂಪಿಗೆ ಚುನಾವಣೆ 2025ರ ಮೇ ತಿಂಗಳೊಳಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

2020ರ ಸೆಪ್ಟೆಂಬರ್‌ ತಿಂಗಳಲ್ಲೇ ಬಿಬಿಎಂಪಿ ಸದಸ್ಯರ ಅವಧಿ ಅಂತ್ಯವಾಗಿದ್ದರೂ, ಬಿಬಿಎಂಪಿ ವಾರ್ಡ್‌ಗಳು ಮರುವಿಂಗಡಣೆ, ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಈವರೆಗೆ ಚುನಾವಣೆ ನಡೆದಿಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಬಿಬಿಎಂಪಿ ಚುನಾವಣೆ ನಡೆಸುವುದಾಗಿ ತಿಳಿಸಲಾಗಿತ್ತಾದರೂ, ವಾರ್ಡ್‌ ಮರುವಿಂಗಡಣೆ ನೆಪವೊಡ್ಡಿ ಚುನಾವಣೆ ನಡೆಸಿರಲಿಲ್ಲ.

ಇದೀಗ 2025ರ ಮೇ ತಿಂಗಳೊಳಗೆ ಚುನಾವಣೆ ನಡೆಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ಆರಂಭವಾಗಿದ್ದು, ಇನ್ನೆರಡು ತಿಂಗಳಲ್ಲಿ ಚುನಾವಣೆಗೆ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಗಳಿವೆ.

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಯಿದೆ. ಕಳೆದೆರಡು ವರ್ಷಗಳ ಹಿಂದೆಯೇ ಸುಪ್ರೀಂಕೋರ್ಟ್‌ ಚುನಾವಣೆ ನಡೆಸಲು ಗಡುವು ನೀಡಿತ್ತಾದರೂ, ಸರ್ಕಾರ ಸುಪ್ರೀಂಕೋರ್ಟ್‌ ಮುಂದೆ ವಾರ್ಡ್‌ ಮೀಸಲಾತಿ ನೆಪವೊಡ್ಡು ಚುನಾವಣೆ ಮುಂದೂಡುವಂತೆ ಮಾಡಿತ್ತು. ಇದೀಗ ಸರ್ಕಾರ ವಾರ್ಡ್‌ ಮರುವಿಂಗಡಣೆಯನ್ನೂ ಮಾಡಿದೆ, ಮೀಸಲಾತಿ ನಿಗದಿ ಮಾಡುವುದು ಬಾಕಿಯಿದೆ.

ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯಗಳು ವಾರ್ಡ್‌ ಮರುವಿಂಗಡಣೆಯನ್ನು ಒಪ್ಪಿದರೆ ಮೀಸಲಾತಿ ನಿಗದಿ ಸುಲಭವಾಗಲಿದೆ. ಇನ್ನೆರಡು ತಿಂಗಳಲ್ಲಿ ನ್ಯಾಯಾಲಯಗಳು ಬಿಬಿಎಂಪಿ ಚುನಾವಣೆ ಕುರಿತಂತೆ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ. ಆನಂತರ ಬಿಬಿಎಂಪಿ ಚುನಾವಣೆ ನಡೆಸುವುದು ಸರ್ಕಾರಕ್ಕೆ ಅನಿವಾರ್ಯವಾಗಲಿದೆ. ಅದಕ್ಕೂ ಮುನ್ನವೇ ಚುನಾವಣೆ ಸಿದ್ಧತೆ ನಡೆಸಿ, ಮೇ ತಿಂಗಳೊಳಗೆ ಚುನಾವಣೆ ನಡೆಸುವುದಾಗಿ ನ್ಯಾಯಾಲಯಗಳಿಗೆ ತಿಳಿಸುವುದು ಸರ್ಕಾರದ ಯೋಜನೆಯಾಗಿದೆ.

ಮರುವಿಂಗಡಣೆಯಲ್ಲೇ ಕಾಲಹರಣ: ಬಿಜೆಪಿ ಸರ್ಕಾರದ ಅವಧಿಯಲ್ಲಿ 198 ವಾರ್ಡ್‌ಗಳನ್ನು 243 ವಾರ್ಡ್‌ಗಳನ್ನಾಗಿ ಮರುವಿಂಗಡಣೆ ಮಾಡಲಾಗಿತ್ತು. ಅದೇ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ 243 ವಾರ್ಡ್‌ಗಳನ್ನು 225ಕ್ಕೆ ಇಳಿಕೆ ಮಾಡಿ ಹೊಸ ಪಟ್ಟಿ ಪ್ರಕಟಿಸಲಾಗಿತ್ತು. ಈ ಕುರಿತಂತೆ ಕರಡು ಪಟ್ಟಿ ಹೊರಡಿಸಿ, ಸಾರ್ವಜನಿಕರಿಂದ ಅಭಿಪ್ರಾಯ ಪಡೆದ ನಂತರ ಅಂತಿಮ ಪಟ್ಟಿಯನ್ನೂ ಹೊರಡಿಸಲಾಗಿದೆ. ಹೀಗೆ ಕಳೆದ ನಾಲ್ಕು ವರ್ಷಗಳಿಂದ ಎರಡೆರಡು ಬಾರಿ ವಾರ್ಡ್‌ಗಳ ಮರುವಿಂಗಡಣೆ ಮಾಡುವುದರಲ್ಲೇ ಸರ್ಕಾರ ಕಾಲಹರಣ ಮಾಡಿದ ಕಾರಣ, ಚುನಾವಣೆ ವಿಳಂಬವಾಗುವಂತಾಗಿದೆ.