ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ತಾರಕಕ್ಕೇ - ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆವುದೇ ಡೌಟ್‌!

| N/A | Published : Feb 21 2025, 11:49 PM IST / Updated: Feb 22 2025, 04:14 AM IST

ಸಾರಾಂಶ

ಪಕ್ಷದ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ತಾರಕಕ್ಕೇರಿರುವ ಮಧ್ಯೆಯೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಕುರಿತೇ ಇದೀಗ ಅನುಮಾನ ವ್ಯಕ್ತವಾಗಿದೆ.

 ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ತಾರಕಕ್ಕೇರಿರುವ ಮಧ್ಯೆಯೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಕುರಿತೇ ಇದೀಗ ಅನುಮಾನ ವ್ಯಕ್ತವಾಗಿದೆ.

ಇದುವರೆಗೆ ನಡೆದಿರುವ ಬೆಳವಣಿಗೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವ ಬಿಜೆಪಿ ವರಿಷ್ಠರು ರಾಜ್ಯ ಘಟಕದ ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಹಮತದೊಂದಿಗೆ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸುವ ಸಾಧ್ಯತೆ ಹೆಚ್ಚಾಗಿದ್ದು, ಔಪಚಾರಿಕವಾಗಿ ಚುನಾವಣಾ ಪ್ರಕ್ರಿಯೆ ಮಾತ್ರ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.

ಹಾಗೊಂದು ವೇಳೆ ವಿಜಯೇಂದ್ರ ಅವರನ್ನೇ ಮುಂದುವರೆಸುವ ಅಂತಿಮ ನಿರ್ಧಾರ ಕೈಗೊಂಡಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳ ನೇಮಕದಲ್ಲಿ ವರಿಷ್ಠರೇ ಪ್ರಮುಖ ಪಾತ್ರ ವಹಿಸಿ ಯಾವುದೇ ಬಣಕ್ಕೂ ಬೇಸರವಾಗದಂತೆ ಎಚ್ಚರಿಕೆ ವಹಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಹೀಗಾಗಿ ಇತ್ತೀಚೆಗೆ ವಿಜಯೇಂದ್ರ ಅವರು ಏಕಾಏಕಿ ಮೊದಲಿಗಿಂತ ಸಕ್ರಿಯರಾಗಿದ್ದು, ಪಕ್ಷದ ಸಂಘಟನೆಗೆ ಸಂಬಂಧಿಸಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಜತೆಗೆ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಆತ್ಮವಿಶ್ವಾಸದ ನಡೆ ಮತ್ತು ನುಡಿ ತೋರುತ್ತಿದ್ದಾರೆ ಎನ್ನಲಾಗಿದೆ.

ತರಾತುರಿಯಲ್ಲಿ ನಿರ್ಧಾರ ಇಲ್ಲ:

ದೆಹಲಿ ವಿಧಾನಸಭೆ ಚುನಾವಣೆ ಮತ್ತು ಸರ್ಕಾರ ರಚನೆ ಪ್ರಕ್ರಿಯೆ ಎಲ್ಲವೂ ಮುಗಿದಿರುವುದರಿಂದ ಇನ್ನು ಮೇಲಷ್ಟೇ ವರಿಷ್ಠರು ಕರ್ನಾಟಕ ರಾಜಕಾರಣದತ್ತ ಗಮನಹರಿಸಬಹುದು. ಆದರೆ, ಬರುವ ಮಾ.3ರಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗುವುದರಿಂದ ತರಾತುರಿಯಲ್ಲಿ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಸುವ ಬಗ್ಗೆ ವರಿಷ್ಠರಿಗೆ ಒಲವು ಇಲ್ಲ ಎಂಬ ಮಾತು ಕೇಳಿಬರುತ್ತಿದೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇರ ಚುನಾವಣೆ ನಡೆಸಿದಲ್ಲಿ ಅದು ಪಕ್ಷದಲ್ಲಿ ಭಾರೀ ಪ್ರಮಾಣದಲ್ಲಿ ಭಿನ್ನಮತ ಹುಟ್ಟು ಹಾಕಲಿದೆ ಎಂಬುದು ವರಿಷ್ಠರಿಗೆ ಮನವರಿಕೆಯಾಗಿದೆ. ಹೀಗಾಗಿಯೇ, ದೆಹಲಿ ಮಟ್ಟದಲ್ಲೇ ನಿರ್ಧಾರ ಕೈಗೊಂಡು ಅದನ್ನು ಅನುಷ್ಠಾನಗೊಳಿಸಲು ಮತ್ತು ರಾಜ್ಯ ಘಟಕದ ಇತರ ನಾಯಕರಿಗೆ ತಲುಪಿಸಲು ಚುನಾವಣೆಯ ಉಸ್ತುವಾರಿಯಾಗಿ ನೇಮಕಗೊಂಡಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಕ್ಕೆ ಆಗಮಿಸಬಹುದು ಎಂದು ಮೂಲಗಳು ಮಾಹಿತಿ ನೀಡಿವೆ.

ಆದರೆ, ಈವರೆಗೆ ಚೌಹಾಣ್ ಅವರ ಪ್ರವಾಸ ನಿಗದಿಯಾಗದೇ ಇರುವುದರಿಂದ ಒಟ್ಟಾರೆ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಲಕ್ಷಣ ಕಂಡು ಬರುತ್ತಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕಡೆಗಣಿಸಿ ಅವರ ಪುತ್ರ ವಿಜಯೇಂದ್ರ ಬದಲು ಬೇರೊಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದಲ್ಲಿ ಮುಂದೆ ಎದುರಾಗಬಹುದಾದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ಬೀಳಬಹುದು ಎಂಬ ಆತಂಕವೂ ಬಿಜೆಪಿ ವರಿಷ್ಠರಿಗಿದೆ. ಹಾಗೆ ಬದಲಾವಣೆ ಮಾಡಬೇಕಾದಲ್ಲಿ ಯಡಿಯೂರಪ್ಪ ಅವರ ಮನವೊಲಿಸಬೇಕು. ಸದ್ಯದ ಸನ್ನಿವೇಶದಲ್ಲಿ ಯಡಿಯೂರಪ್ಪ ಅವರು ಬದಲಾವಣೆಗೆ ಒಪ್ಪಿಕೊಳ್ಳುವುದು ಅಸಾಧ್ಯ ಎಂಬ ಎನ್ನಲಾಗಿದೆ.