ಸಾರಾಂಶ
ಬೆಂಗಳೂರು : ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆಗೆ ಆದ್ಯತೆ ನೀಡಬೇಕು. ಸಬ್ಸಿಡಿಗೆ ಮಾತ್ರ ಸೀಮಿತ ಆಗಬಾರದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.
‘ಕೇಂದ್ರ ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟ’ ಸಹಯೋಗದಲ್ಲಿ ರಾಜ್ಯ ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರವು ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ರೈತ ಉತ್ಪಾದಕ ಸಂಸ್ಥೆಗಳ ಮೇಳ’ಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
₹1073 ಕೋಟಿ ವಹಿವಾಟು:
ವಿವಿಧ ಯೋಜನೆಯಡಿ ರಾಜ್ಯದಲ್ಲಿ 1472 ಕೃಷಿ ಉತ್ಪಾದಕ ಸಂಸ್ಥೆಗಳನ್ನು ರಚಿಸಲಾಗಿದ್ದು, 8.26 ಲಕ್ಷ ರೈತರು ಷೇರುದಾರರಾಗಿದ್ದಾರೆ. ಒಟ್ಟಾರೆ ₹1073 ಕೋಟಿ ವಹಿವಾಟು ನಡೆಸಲಾಗಿದೆ. ಪ್ರತಿ ಎಫ್‌ಪಿಒಗಳ ನಿರ್ವಹಣಾ ವೆಚ್ಚಕ್ಕಾಗಿ ಮೂರು ವರ್ಷಕ್ಕೆ ಗರಿಷ್ಠ ₹18 ಲಕ್ಷ ನೀಡಲಾಗುತ್ತಿದೆ. ಸಮುದಾಯ ಆಧಾರಿತ ವ್ಯವಹಾರ ಸಂಸ್ಥೆಗಳಿಗೆ 5 ವರ್ಷಕ್ಕೆ ಗರಿಷ್ಠ ₹25 ಲಕ್ಷ ಸಂದಾಯ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ 10 ಸಾವಿರ ಎಫ್‌ಪಿಒಗಳನ್ನು ರಚಿಸಲು ಯೋಜನೆ ರೂಪಿಸಿದ್ದು, ರಾಜ್ಯದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ 100 ಸೇರಿದಂತೆ 351 ಎಫ್‌ಪಿಒಗಳನ್ನು ರಚಿಸಲಾಗಿದೆ. ಅಮೃತ ಯೋಜನೆಯಡಿ ಎಫ್‌ಪಿಒಗಳಿಗೆ ರಾಜ್ಯ ಸರ್ಕಾರ ₹20 ಕೋಟಿ ಅನುದಾನ ಒದಗಿಸಿದೆ. ಈ ಎಫ್‌ಪಿಒಗಳು ಕೃಷಿ ಪರಿಕರ ವ್ಯವಹಾರದ ಜೊತೆಗೆ ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಿ ಮಾರಾಟ ಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಚಲುವರಾಯಸ್ವಾಮಿ ಅವರು ಎಫ್‌ಪಿಒಗಳಿಗೆ ಸರ್ಕಾರದ ಸಹಾಯಧನ ವಿತರಿಸಿ, ಮಳಿಗೆಗಳಿಗೆ ಚಾಲನೆ ನೀಡಿದರು. ತೋಟಗಾರಿಕೆ ವಿವಿ ಉಪಕುಲಪತಿ ಡಾ। ವಿಷ್ಣುವರ್ಧನ್, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಮಹೇಶ್ ಶಿರೂರು, ನಿರ್ದೇಶಕ ಬಂಥನಾಳ್ ಉಪಸ್ಥಿತರಿದ್ದರು.
ರೈತ ಆತ್ಮಹತ್ಯೆಯನ್ನು ಶೂನ್ಯಕ್ಕಿಳಿಸಲು ಯತ್ನ
ಹಿಂದಿನ ಅವಧಿಗೆ ಹೋಲಿಸಿದರೆ ಈಗ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಿದೆ. ಕೋಲಾರ ಜಿಲ್ಲೆಯ ರೀತಿ ಆತ್ಮಹತ್ಯೆಯನ್ನು ಶೂನ್ಯಕ್ಕಿಳಿಸಬೇಕು ಎಂಬ ಉದ್ದೇಶ ರಾಜ್ಯ ಸರ್ಕಾರದ್ದಾಗಿದೆ. ಪ್ರತಿ ಜಿಲ್ಲೆಯಲ್ಲೂ ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿದರೆ ರೈತರ ಆದಾಯ ಹೆಚ್ಚಾಗುತ್ತದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
)
;Resize=(128,128))
;Resize=(128,128))
;Resize=(128,128))
;Resize=(128,128))