ಸಾರಾಂಶ
ಹಾಸನ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದೆ ಬಿಡ್ತಾರೆ ಅಂತಾ ಗುಸು, ಗುಸು ಶುರುವಾಗಿದೆ. ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ದಿನೇ ದಿನೇ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು. ತಾವು ಮುಖ್ಯಮಂತ್ರಿ ಆಗಬೇಕು ಅಂತ ಅನೇಕರು ಕಾಯ್ತಾ ಇದ್ದಾರೆ. ಕಾಂಗ್ರೆಸ್ ಒಂದು ರೀತಿ ತಾಲಿಬಾನ್ ಸರ್ಕಾರ. ಹಿಂದುತ್ವಕ್ಕೆ, ಹಿಂದೂಗಳಿಗೂ ಗೌರವವಿಲ್ಲ. ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳಕ್ಕೆ ಕಾಂಗ್ರೆಸ್ ಅವರು ತಕರಾರು ಎತ್ತಿದ್ರು. ಇದರ ಮಧ್ಯೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸಮೇತ ಕುಂಭಮೇಳಕ್ಕೆ ಹೋಗಿ ಬಂದಿದ್ದಾರೆ. ನಮ್ಮ ಪ್ರಾಚೀನತೆ, ಪರಂಪರೆ ಆಧಾರದ ಮೇಲೆ ಹೋಗಿ ಬಂದಿದ್ದಾರೆ ಎಂದರು.
ಈಶ ಫೌಂಡೇಶನ್ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವರ ಜೊತೆ ಡಿ.ಕೆ ಶಿವಕುಮಾರ್ ಅವರು ಭಾಗವಹಿಸಿದ್ದರು. ಶಿವರಾತ್ರಿ ಸಂದರ್ಭದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಬಿಜೆಪಿಗೆ ಬಂದು ಬಿಡ್ತಾರೆ ಎಂಬ ಗುಸುಗುಸು ಶುರುವಾಗಿದೆ. ಇದಕ್ಕೆ ಯಾವ ರೀತಿಯೂ ಅರ್ಥವಿಲ್ಲ ಎಂದು ಹೇಳಿದರು.