ಸಾರಾಂಶ
ಬಂಗಾರಪೇಟೆ : ಸಂಸದರಾಗಿ ಆಯ್ಕೆಯಾಗುವ ಯೋಗವಿರುವುದರಿಂದ ಎಂ.ಮಲ್ಲೇಶಬಾಬು ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು, ಸೋತ ಕ್ಷೇತ್ರದಲ್ಲೆ 28 ಸಾವಿರ ಮತಗಳ ಅಂತರ ಸೇರಿದಂತೆ 68 ಸಾವಿರ ಮತಗಳ ಅಂತರದಿಂದ ಜಯಗಳಿಸುವ ಮೂಲಕ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಎನ್‌ಡಿಎ ಅಲೆ ಶುರುವಾಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ಅಭಿಪ್ರಾಯಪಟ್ಟರು.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್,ಬಿಜೆಪಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶಬಾಬು ಜಯಭೇರಿ ಭಾರಿಸಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಗಲ್ಲಿ ಗಲ್ಲಿಯಲ್ಲಿಯೂ ಪಟಾಕಿಗಳನ್ನು ಸಿಡಿಸಿ ವಿಜಯೋತ್ಸವ ಆಚರಿಸಿದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಂಗಾರಪೇಟೆಯಲ್ಲಿ ಲೀಡ್
ಬಂಗಾರಪೇಟೆ ಕ್ಷೇತ್ರದಲ್ಲಿ ಮಲ್ಲೇಶಬಾಬುಗೆ ಲೀಡ್ ಬರುವುದೇ ಇಲ್ಲವೆಂದು ಕಾಂಗ್ರೆಸ್ ನವರು ಟೀಕೆ ಮಾಡುತ್ತಿದ್ದರು. ಆದರೆ ಇಲ್ಲಿ 28 ಸಾವಿರ ಮತಗಳು ಲೀಡ್ ಬರುವ ಮೂಲಕ ಟೀಕಾಕಾರರಿಗೆ ಉತ್ತರ ಕೊಡಲಾಗಿದೆ. ಅಲ್ಲದೆ 8 ವಿಧಾನಸಭೆ ಕ್ಷೇತ್ರಗಳಲ್ಲಿ5 ರಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಬಿಜೆಪಿ ಜೆಡಿಎಸ್ ಮೈತ್ರಿ ಕೆಲಸ ಮಾಡಿದೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸಚಿವರಾಗುವ ಸಾಧ್ಯತೆ ಇರುವ ಕಾರಣ ಅವರ ಸಹಕಾರದೊಂದಿಗೆ ಮಲ್ಲೇಶಬಾಬು ಕೋಲಾರ ಲೋಕಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ರೂಪಿಸಲು ಶ್ರಮಿಸಲು ಎಂದರು.
ಮೈತ್ರಿ ಮುಂದುವರಿಕೆ
ಮುಂದೆ ನಡೆಯುವ ಜಿಪಂ ತಾಪಂ ಚುನಾವಣೆಗಳಲ್ಲಿಯೂ ಸಹ ಈ ಮೈತ್ರಿ ಮುಂದುವರೆಯಲಿದ್ದು ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಚುನಾವಣೆ ಎದುರಿಸಲು ಮತ್ತಷ್ಟು ಚೈತನ್ಯ ಬರಲಿದೆ ಎಂದರು.ಈ ವೇಳೆ ಮುಖಂಡರಾದ ಬಿ.ಸಿ.ಶ್ರೀನಿವಾಸಮೂರ್ತಿ,ಬಿ.ಪಿ.ಮಹೇಶ್,ಎಸ್.ನಾರಾಯಣ್,ರಾಜಾರೆಡ್ಡಿ,ವೈ.ವಿ.ರಮೇಶ್,ರಾಮಚಂದ್ರ,ಕರವೇ ಚಲಪತಿ,ನರಸಾರೆಡ್ಡಿ,ಅಮರಾವತಿ ಮಂಜುನಾಥ್,ವಿನೋದ್ ಮತ್ತಿತರರು ಇದ್ದರು.