ಸಾರಾಂಶ
ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿಯಲ್ಲಿದ್ದ ಬಣ ರಾಜಕೀಯ ಕೊನೆಗೂ ಬಹಿರಂಗವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರನ್ನಾಗಿ ಸಂದೀಪ್.ಬಿ.ರೆಡ್ಡಿಯವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದ್ದಾರೆ.
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿಯಲ್ಲಿದ್ದ ಬಣ ರಾಜಕೀಯ ಕೊನೆಗೂ ಬಹಿರಂಗವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರನ್ನಾಗಿ ಸಂದೀಪ್.ಬಿ.ರೆಡ್ಡಿಯವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದ್ದಾರೆ.
ರಾಜ್ಯಾಧ್ಯಕ್ಷರಿಂದ ಆಯ್ಕೆ ಆದೇಶ ಹೊರಬೀಳುತಿದ್ದಂತೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಹೈಡ್ರಾಮಾವೇ ನಡೆದು ಹೋಯಿತು. ರಾಜ್ಯಾಧ್ಯಕ್ಷರ ವಿರುದ್ಧ ಸಂಸದ ಡಾ.ಕೆ.ಸುಧಾಕರ್ ಬಣ ಕೆರಳಿ ಕೆಂಡವಾಗಿದೆ. ಜಿಲ್ಲಾ ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ನುಗ್ಗಿದ ಬಿಜೆಪಿ ಜಿಲ್ಲಾಧ್ಯಕ್ಷ ಆಕಾಂಕ್ಷಿ ಹಾಗೂ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ನೂತನ ಜಿಲ್ಲಾಧ್ಯಕ್ಷ ಸಂದೀಪ್.ಬಿ.ರೆಡ್ಡಿಯ ವಿರುದ್ಧವೇ ಘೋಷಣೆ ಕೂಗಿ ಮುಜುಗರ ಉಂಟಾಗುವಂತೆ ಮಾಡಿದರು.
ಈ ಸಂಧರ್ಭದಲ್ಲಿ ಮರಳುಕುಂಟೆ ಕೃಷ್ಣಮೂರ್ತಿ ಹಾಗೂ ಸಂದೀಪ್.ಬಿ.ರೆಡ್ಡಿ ಬೆಂಬಲಿಗರ ನಡುವೆ ಭಾರೀ ವಾಗ್ವಾದ ನಡೆದು, ಪರ ವಿರೋಧದ ಘೋಷಣೆಗಳ ಮೂಲಕ ಗಲಾಟೆ, ಗದ್ದಲ ಉಂಟಾಯಿತು. ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಘೋಷಣೆಯಿಂದ ರಾಜ್ಯ ಬಿಜೆಪಿಯಲ್ಲಿ ಹೊತ್ತಿಕೊಂಡ ಬೆಂಕಿ ಭುಗಿಲೆದ್ದು, ಭಿನ್ನಮತ ಸ್ಫೋಟಗೊಂಡಿದೆ.
ಡಾ.ಸುಧಾಕರ್ ಕಡೆಗಣನೆ
ಈ ವೇಳೆ ಸುದ್ದಿಗಾರರೊಂದಿಗೆ ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿ, ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ತಾವು ಆಕಾಂಕ್ಷಿಯಾಗಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಂದ ಬಿಜೆಪಿ ಸರ್ವನಾಶ ಆಗಲಿದೆ. ಈಗಾಗಲೇ ರಮೇಶ್ ಜಾರಕಿ ಹೊಳಿ, ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕ ನಾಯಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ನಮ್ಮ ನಾಯಕ ಸಂಸದ ಡಾ,ಕೆ. ಸುಧಾಕರ್ ಅವರು ಬಯಲು ಸೀಮೆಯಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದ ಸಮಯದಲ್ಲಿ ಬಿಜೆಪಿ ಸಂಘಟನೆ ಮಾಡಿ ಶಾಸಕ ಹಾಗೂ ಸಂಸದರಾಗಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಅವರನ್ನ ಕಡೆಗಣಿಸಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ರನ್ನು ಬದಲಾವವಣೆ ಮಾಡಬೇಕು. ಮತ್ತು ಈಗ ಆಯ್ಕೆಯಾಗಿರುವ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಮಾಡುವಂತೆ ಆಗ್ರಹಿಸಿದರು.
ಕಚೇರಿಗೆ ನೂತನ ಅಧ್ಯಕ್ಷರ ಭೇಟಿನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಸಂದೀಪ್.ಬಿ.ರೆಡ್ಡಿ ಇಷ್ಟೆಲ್ಲ ಗೊಂದಲಗಳ ನಡುವೆ ಪಕ್ಷದ ಕಚೇರಿಗೆ ಭೇಟಿಕೊಟ್ಟು ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿ ನಡೆಸಿ ನನ್ನನ್ನು ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿದ ವಿಜಯೇಂದ್ರಣ್ಣ ಮತ್ತು ಅದಕ್ಕೆ ಸಹಕಾರ ನೀಡಿದ ನನ್ನ ಎಲ್ಲಾ ಹಿತೈಷಿಗಳಿಗೆ ಧನ್ಯವಾದ ತಿಳಿಸುತ್ತೇನೆ. ನಾನೂ ಪಕ್ಷಕ್ಕೆ ದುಡಿದುಕೊಂಡು ಬಂದಿದ್ದೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದ ಡಾ.ಕೆ.ಸುಧಾಕರ್ ಗೆಲುವಿಗೆ ಸಾಕಷ್ಟು ಶ್ರಮ ಹಾಕಿದ್ದೇನೆ. ಈಗಲೂ ಯಾರ ವಿರುದ್ಧವೂ ದ್ವೇಷ ಸಾಧಿಸದೆ ಎಲ್ಲರನ್ನೂ ಒಟ್ಟಾಗಿ ಜತೆಯಲ್ಲಿ ತೆಗೆದುಕೊಂಡು ಹೋಗುತ್ತೇನೆ ಎಂದರು.
ಯಾರನ್ನೂ ಕಡೆಗಣಿಸಿಲ್ಲ
ಮಾಜಿ ಎಂ ಎಲ್ ಸಿ ಬಿಜೆಪಿ ಜಿಲ್ಲಾ ಉಸ್ತುವಾರಿ ಅಶ್ವಥನಾರಾಯಣ ಸಂದೀಪ್ ರೆಡ್ಡಿ ಆಯ್ಕೆಗೆ ಸ್ಪಷ್ಟೀಕರಣ ನೀಡಿ, ಯಾರನ್ನು ಕಡೆಗಣಿಸಿಲ್ಲ ಪಕ್ಷದ ಹಿರಿಯರು, ಕಿರಿಯರು, ಸಂಸದರು,ಹಾಲಿ ಮಾಜಿ ಅಧ್ಯಕ್ಷರುಗಳ ಅಭಿಪ್ರಾಯ ಪಡೆದೆ ಸಂದೀಪ್.ಬಿ.ರೆಡ್ಡಿ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂದೀಪರೆಡ್ಡಿ ಎಲ್ಲರನ್ನೂ ಒಟ್ಟಿಗೆ ಸಮನ್ವಯ ಸಾಧಿಸಿ ಕರೆದೊಯ್ಯಬೇಕು ನೂತನ ಅಧ್ಯಕ್ಷ ಸಂದೀಪರೆಡ್ಡಿಯವರಿಗೆ ಶುಭವಾಗಲಿ ಎಂದರು.
ನಂತರ ಬಿಜೆಪಿ ಜಿಲ್ಲಾ ಕಚೇರಿಯಿಂದ ನಗರದ ಅಂಬೇಡ್ಕರ್ ವೃತ್ತದವರೆಗೂ ಮೆರವಣಿಗೆ ಮಾಡಲಾಯಿತು ಅಂಬೇಡ್ಕರ್ ವೃತ್ತದಲ್ಲಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಸೇಬಿನ ಹಾರ ಹಾಕಿ ಶುಭ ಕೋರಿದರು. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂದೀಪ್ ರೆಡ್ಡಿ ಹಾಗು ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಜಯಘೋಷ ಹಾಕಿ ಸಂಭ್ರಮಿಸಿದರು. ಈ ವೇಳೆ ಮಾಜಿ ಅಧ್ಯಕ್ಷ ರಾಮಲಿಂಗಪ್ಪ, ಅಶೋಕ್, ಚುನಾವಣಾ ಉಸ್ತುವಾರಿ ರಾಜಣ್ಣ, ಮುರುಳಿ, ಲಕ್ಷ್ಮೀಪತಿ, ಮುರುಳಿಧರ್, ಮಧುಸೂರ್ಯನಾರಾಯರೆಡ್ಡಿ, ಲಕ್ಷ್ಮೀನಾರಾಯಣ ಗುಪ್ತ, ಮಧುಚಂದ್ರ ಇತರರು ಇದ್ದರು.