ರೈತರ ವಿರುದ್ಧ ಹೇಳಿಕೆ: ಸಚಿವ ಶಿವಾನಂದ್‌ ಪಾಟೀಲ ವಜಾಕ್ಕಾಗಿ ಪ್ರತಿಭಟನೆ

| Published : Dec 27 2023, 01:31 AM IST / Updated: Dec 27 2023, 01:32 AM IST

ಸಾರಾಂಶ

ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಶಿವಾನಂದ ಪಾಟೀಲರನ್ನು ವಜಾಗೊಳಿಸುವಂತೆ ಆಗ್ರಹಿಸಿ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಮೇಲಿಂದ ಮೇಲೆ ಬರ ಬರಲಿ, ಬರಗಾಲ ಬಂದರೆ ಸಾಲ ಮನ್ನಾ ಆಗುತ್ತದೆ ಎಂದು ರೈತರು ನಿರೀಕ್ಷೆ ಮಾಡುತ್ತಾರೆ’ ಎಂಬ ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿಕೆ ವಿರೋಧಿಸಿ ಮಂಗಳವಾರವೂ ರಾಜ್ಯದ ಹಲವೆಡೆ ರೈತರು ಪ್ರತಿಭಟನೆ ನಡೆಸಿದರು. ಸಚಿವರ ಪ್ರತಿಕೃತಿ ದಹಿಸಿ, ಅವರ ವಿರುದ್ಧ ಘೋಷಣೆ ಕೂಗಿ, ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ಬೆಳಗಾವಿಯಲ್ಲಿ ಗಣೇಶಪುರದಲ್ಲಿರುವ ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ರೈತರು, ಕಚೇರಿಗೆ ಭಂಡಾರ ತೂರಿದರು. ರೈತರ ಕೈಯಲ್ಲಿರುವ ಭಂಡಾರದ ಚೀಲಗಳನ್ನು ಕಸಿದುಕೊಳ್ಳಲು ಪೊಲೀಸರು ಮುಂದಾದಾಗ ಪೊಲೀಸರು ಮತ್ತು ಪ್ರತಿಭಟನಾನಿರತ ರೈತರ ನಡುವೆ ವಾಗ್ವಾದ, ತಳ್ಳಾಟ, ನೂಕಾಟ ನಡೆಯಿತು. ರೈತರು ಸಕ್ಕರೆ ಸಂಸ್ಥೆಗೆ ಬೀಗ ಜಡಿಯಲು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಬಳಿಕ, ಸಚಿವರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಅವರನ್ನು ವಜಾಗೊಳಿಸುವಂತೆ ಮುಖ್ಯಮಂತ್ರಿಯನ್ನು ಆಗ್ರಹಿಸಿದರು.

ಚಿಕ್ಕಬಳ್ಳಾಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಮಂಡ್ಯದ ಸಂಜಯ್‌ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು, ಹಳೆ ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಸಚಿವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ನಂತರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಧಿಕ್ಕಾರ ಕೂಗಿದರು. ಸಚಿವರೇ, ನೀವೇ ಆತ್ಮಹತ್ಯೆ ಮಾಡಿಕೊಳ್ಳಿ, ಭಿಕ್ಷೆ ಬೇಡಿ ನಿಮ್ಮ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ ಎಂದು ಟವೆಲ್‌ ಒಡ್ಡಿ ಅಣಕು ಪ್ರದರ್ಶನ ನಡೆಸಿದರು.

ರಾಮನಗರ ಜಿಲ್ಲೆ ಕನಕಪುರದ ತಾಲೂಕು ಕಚೇರಿ ಮುಂಭಾಗ ವಿವಿಧ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಪ್ರವಾಸಿ ಮಂದಿರದ ಬಳಿ ಪ್ರತಿಭಟನೆ ನಡೆಸಿದ ರೈತ ಮುಖಂಡರು, ಮೈಸೂರು-ಊಟಿ ರಸ್ತೆ ತಡೆ ನಡೆಸಿದರು. ಇದೇ ವೇಳೆ, ಮೈಸೂರು, ರಾಯಚೂರು ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದ ಬಗ್ಗೆ ವರದಿಯಾಗಿದೆ.