ಸಾರಾಂಶ
ಚಿಕ್ಕಬಳ್ಳಾಪುರ : ಕಾಂಗ್ರೆಸ್ ಪಕ್ಷ ಎಚ್.ಡಿ.ದೇವೇಗೌಡರಿಗೆ ಪ್ರಧಾನಿ ಪಟ್ಟ ಮತ್ತು ಎಚ್.ಡಿ.ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿತ್ತು. ಆದರೆ ಪ್ರಧಾನಿ ಮತ್ತು ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವ ಯೋಗ್ಯತೆ ಅಪ್ಪ ಮತ್ತು ಮಗನಿಗೆ ಇರಲಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವ್ಯಂಗ್ಯವಾಡಿದರು.
ಶುಕ್ರವಾರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಏರ್ಪಡಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ನಿರ್ದೇಶಕರು ಹಾಗೂ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇಷ್ಟೆಲ್ಲಾ ಅವಕಾಶಗಳನ್ನು ಕಾಂಗ್ರೆಸ್ ಪಕ್ಷವನ್ನೇ ಅವರು ತೆಗಳುತ್ತಿದ್ದಾರೆ ಎಂದರು.
ಎತ್ತಿನಹೊಳೆಗೆ ಕೇಂದ್ರ ಹಣ ಕೊಟ್ಟಿಲ್ಲ
ಕುಡಿಯುವ ನೀರಿನ ಯೋಜನೆಯಾದ ಎತ್ತಿನ ಹೊಳೆ ಯೋಜನೆಗೆ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಯಾವುದೇ ಹಣ ನೀಡಲಿಲ್ಲಾ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯರ ಸರ್ಕಾರ ಬಂದಿದೆ ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಿ ನೀರು ನೀಡಲಾಗುವುದು ಎಂದರು.
ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯರ ಕುಟುಂಬ ಸಮಾಜಕ್ಕಾಗಿ ಸಾಕಷ್ಟು ಕೊಡುಗೆ ಕೊಟ್ಟಿದೆ. ನನ್ನ ಕ್ಷೇತ್ರದಲ್ಲೂ ಎರಡು ಕೋಟಿ ರುಪಾಯಿ ಸಮುದಾಯ ಭವನ ಕಟ್ಟಿಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅಂತಹ ಕುಟುಂಬದ ಕುಡಿ ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗೆದ್ದರೆ ಮಾತ್ರ ಈ ಬಾಗದ ಜನರಿಗೆ ಅದೊಂದು ಸೌಭಾಗ್ಯ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್‌ಗೆ 23 ಸ್ಥಾನ
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 23 ಸೀಟು ಗೆಲ್ಲೋದು ಗ್ಯಾರಂಟಿ. ಶ್ರೀರಾಮ ಬಿಜೆಪಿ ತವರು ಮನೆಯವನಲ್ಲ ನನ್ನ ಹೃದಯ ಸೀಳಿದರೆ ಶ್ರೀರಾಮನೂ ಕಾಣ್ತಾನೆ ಸಿದ್ದರಾಮಯ್ಯನೂ ಕಾಣ್ತಾನೆ. ಅಧಿಕಾರ ನಡೆಸುವುದು ಮುಖ್ಯವಲ್ಲ. ಆ ಅಧಿಕಾರದಿಂದ ಎಷ್ಟು ಜನರ ಬದುಕಿನ ಬವಣೆಯನ್ನು ನೀಗಿಸಿದೆವು ಎನ್ನುವುದು ಮುಖ್ಯ ಎಂದರು.
ಐತಿಹಾಸಿಕ ಗ್ಯಾರಂಟಿ ಜನೆಯನ್ನು ರೂಪಿಸಿ ಬಡವರ, ಶ್ರಮಿಕರ, ಕೂಲಿ ಕಾರ್ಮಿಕರ, ರೈತರ, ಮಹಿಳೆಯರ ದಿನನಿತ್ಯದ ಬೇಗೆಗೆ ಬೆನ್ನೆಲುಬಾಗಿ ನಿಂತು ಅದನ್ನು ನಿವಾರಿಸುವ ಮಹತ್ತರ ಕೆಲಸ ಮಾಡುತ್ತಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ನಿಜಕ್ಕೂ ಅಭಿನಂದನೀಯ. ಅದಕ್ಕೆ ನಿದರ್ಶನ ನಿನ್ನೆ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಜಮಖಂಡಿಯ ವೇದಾಂತ್, ತಂದೆ ಕಳೆದುಕೊಂಡ ನನಗೆ ಮತ್ತು ನನ್ನ ತಾಯಿಗೆ ಆಸರೆಯಾಗಿದ್ದು ಗೃಹಲಕ್ಷ್ಮಿ ಯೋಜನೆ ಎಂದು ಸ್ಮರಿಸಿದ್ದಾರೆ ಎಂದರು.
ಗ್ಯಾರಂಟಿ ಕೈಹಿಡಿಯಲಿದೆ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿಭಾಗ್ಯ ಎಂದವರಿಗೆ ಉತ್ತರವಾಗಿದೆ. ಅಷ್ಟೇ ಅಲ್ಲದೇ ಒಂದು ಯೋಜನೆ ಎಷ್ಟೋ ಬಡಕುಟುಂಬಗಳ ನೆಮ್ಮದಿಯ ಬದುಕಿಗೆ ಆಸರೆಯಾಗಿದೆ ಎನ್ನುವುದೂ ಕೂಡ ಖುಷಿಯ ಸಂಗತಿಯಾಗಿದೆ. ಈ ಗ್ಯಾರಂಟಿಗಳು ಈ ಬಾರಿಯ ಚುನಾವಣೆಯಲ್ಲಿ ನಮ್ಮ ಕೈ ಹಿಡಿಯಲಿವೆ ಎಂದರು.ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್, ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಎಸ್.ಎಂ.ಮುನಿಯಪ್ಪ, ಎನ್.ಸಂಪಂಗಿ, ಎ.ನಾಗರಾಜು, ಪೂರ್ಣಿಮಾ ಶ್ರೀನಿವಾಸ್, ಸ್ರೀನಿವಾಸ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ,ಡಿವಿಆರ್ ರಾಜೇಶ್, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ಜಿ.ಪಂ.ಮಾಜಿ ಸದಸ್ಯರಾದ ಕೃಷ್ಣಪ್ಪ, ಮುನೇಗೌಡ, ಲಾಯರ್ ನಾರಾಯಣಸ್ವಾಮಿ, ನಂದಿ ಎಂ.ಆಂಜಿನಪ್ಪ, ಶ್ರೀನಿವಾಸ್,ಭಾಬಾಜಾನ್, ಮತ್ತಿತರರು ಇದ್ದರು.