ಸಾರಾಂಶ
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈಗಲೂ ನಮ್ಮ ಟೀಮ್‌ನಲ್ಲಿದ್ದಾರೆ. ಬಿಜೆಪಿಯಿಂದ ಯತ್ನಾಳ್ ತಾಂತ್ರಿಕವಾಗಿ ಉಚ್ಚಾಟನೆಯಾಗಿದ್ದರೂ ನಮ್ಮ ಜೊತೆಗಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ : ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈಗಲೂ ನಮ್ಮ ಟೀಮ್‌ನಲ್ಲಿದ್ದಾರೆ. ಬಿಜೆಪಿಯಿಂದ ಯತ್ನಾಳ್ ತಾಂತ್ರಿಕವಾಗಿ ಉಚ್ಚಾಟನೆಯಾಗಿದ್ದರೂ ನಮ್ಮ ಜೊತೆಗಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾರನ್ನೂ ನಿಂದಿಸಬೇಡಿ. ಪಕ್ಷಕ್ಕೆ ಮುಜುಗರ ಆಗುವಂತೆ ಹೇಳಿಕೆ ನೀಡಬೇಡಿ ಎಂದು ಮನವಿ ಮಾಡಿದ್ದೇನೆ. ಅದಕ್ಕೆ ಅವರು ಸ್ಪಂದಿಸುವ ವಿಶ್ವಾಸವಿದೆ ಎಂದರು.
ಯತ್ನಾಳ್ ಬಾಯಿ ಮುಚ್ಚಿಸಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ. ಸಂಘಟನೆ ಮಾಡುವುದನ್ನು ಬಿಟ್ಟು ಬೇರೆ ವಿಚಾರದ ಬಗ್ಗೆ ಮಾತನಾಡಬೇಡಿ ಎಂದು ಮನವಿ ಮಾಡಿದ್ದೇನೆ. ಯತ್ನಾಳ್ ಜೊತೆಗೆ ನಾನು, ಕುಮಾರ ಬಂಗಾರಪ್ಪ ಸೇರಿ ಹಲವರು ಮಾತನಾಡಿದ್ದೇವೆ. ಬಿಜೆಪಿ ರಾಷ್ಟ್ರೀಯ ಪಕ್ಷ, ಬಡವರ ಪಕ್ಷ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವ ಪಕ್ಷ. ಇಲ್ಲೆ ನಮಗೆ ನ್ಯಾಯ ಸಿಗುತ್ತದೆ. ರಾಷ್ಟ್ರೀಯ ನಾಯಕರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಯತ್ನಾಳ ಅವರನ್ನು ನಮ್ಮ ಪಕ್ಷದಿಂದ ಬಿಟ್ಟು ಕೊಡುವುದಿಲ್ಲ. ಅವರು ಬೇರೆ ಪಕ್ಷ ಕಟ್ಟುವುದಿಲ್ಲ. ನಾವು ಈಗಾಗಲೇ ಪಕ್ಷಕ್ಕೆ ಅವರನ್ನು ಕರೆಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಪೂಜ್ಯ ತಂದೆ ಮತ್ತು ಅವರ ಮಗನಿಗೆ ಬೈಯೋದಕ್ಕೆ ಹೋಗಬೇಡಿ ಎಂದು ತಿಳಿ ಹೇಳಿದ್ದೇನೆ. ಅವರು ಬಿಜೆಪಿ ನಾಯಕರನ್ನು ಬೈಯ್ಯುತ್ತಿಲ್ಲ. ಒಂದೇ ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.