ಸಾರಾಂಶ
ಕೇರಳದಲ್ಲಿ ನಾಯಕರೊಬ್ಬರು ಶತ್ರುಸಂಹಾರ ಯಾಗ ಮಾಡಿಸಿದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯನವರಿಗೆ ಕಾಲು ನೋವು ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು
ಹುಬ್ಬಳ್ಳಿ : ಕೇರಳದಲ್ಲಿ ನಾಯಕರೊಬ್ಬರು ಶತ್ರುಸಂಹಾರ ಯಾಗ ಮಾಡಿಸಿದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯನವರಿಗೆ ಕಾಲು ನೋವು ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಭಾನುವಾರ ಇಲ್ಲಿನ ಮೂರುಸಾವಿರ ಮಠದ ಡಾ.ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಕೇರಳದ ಶತ್ರುಸಂಹಾರ ಯಾಗಕ್ಕೂ, ಸಿದ್ದರಾಮಯ್ಯನವರ ಕಾಲಿನ ಸಮಸ್ಯೆಗೂ ಸಂಬಂಧವಿದೆ. ನನ್ನ ಮೇಲೆ ಕೂಡ ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಯತ್ನಾಳ ಸಂಹಾರ ಪೂಜೆ ನಡೆದಿದೆ. ಆದರೆ, ಅದರಿಂದ ನನಗೆ ಏನೂ ಆಗಲ್ಲ. ಏಕೆಂದರೆ ಮಾಟ, ಮಂತ್ರ ನನ್ನ ಮೇಲೆ ಪ್ರಭಾವ ಬೀರಲ್ಲ ಎಂದು ನನ್ನ ಜಾತಕದಲ್ಲಿದೆ’ ಎಂದು ಹೇಳಿದರು.
‘ಈ ಹಿಂದೆ ಕೇವಲ ಕೇರಳದಲ್ಲಿ ಅಷ್ಟೇ ಅಲ್ಲ, ಹುಬ್ಬಳ್ಳಿಯಲ್ಲಿಯೂ ಕೂಡ ನನ್ನ ಸಂಹಾರ ಪೂಜೆ ಆಗಿದೆ. ಪೂಜೆ ಮಾಡಿಸಿದ್ದು ಯಾರೆಂಬುದು ನನಗೆ ಗೊತ್ತಿದೆ’ ಎಂದು ಯತ್ನಾಳ್ ಹೇಳಿದರು.
ಶ್ರೀಗಳು ನನ್ನ ಪರವಾಗಿ ಮಾತಾಡಿದ್ದರಲ್ಲಿ ತಪ್ಪೇನಿದೆ?
ಸಮಾಜದ ಶ್ರೀಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವ ಸಂಸ್ಕೃತಿ ನನ್ನದಲ್ಲ ಎಂದಿರುವ ಯತ್ನಾಳ್, ಕೂಡಲಸಂಗಮ ಶ್ರೀ ವಿರುದ್ಧ ಪಂಚಮಸಾಲಿ ಟ್ರಸ್ಟ್‌ನವರ ಆಕ್ರೋಶ ಕುರಿತು ಪ್ರತಿಕ್ರಿಯಿಸಿ, ಬಸವಜಯ ಮೃತ್ಯುಂಜಯ ಶ್ರೀಗಳು ನನ್ನ ಪರವಾಗಿ ಮಾತನಾಡಿರುವುದರಲ್ಲಿ ತಪ್ಪೇನಿದೆ?. ಇಡೀ ಹಿಂದೂ ಸಮಾಜ ನನ್ನ ಪರವಾಗಿ ಹೋರಾಟ ಮಾಡುತ್ತಿದೆ. ನಾನು ಕೂಡಲಸಂಗಮದ ಶ್ರೀಗಳಿಗೆ ಹೋರಾಟ ಮಾಡಿ ಎಂದು ಹೇಳಿಲ್ಲ. ಸಮಾಜದ ವ್ಯಕ್ತಿಗಳಿಗೆ ಅನ್ಯಾಯ ಆದಾಗ ಶ್ರೀಗಳು ಹೋರಾಟ ಮಾಡಿದ್ದಾರೆ. ಶ್ರೀಗಳು ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್, ವಿನಯ ಕುಲಕರ್ಣಿ ಸೇರಿದಂತೆ ಹಲವರ ಪರ ಮಾತನಾಡಿದ್ದಾರೆ ಎಂದರು.
ಶ್ರೀಗಳ ವಿರುದ್ಧ ಮಾತನಾಡಿರುವುದು ಯಾವ ಟ್ರಸ್ಟ್?. ಆ ಟ್ರಸ್ಟ್‌ನಲ್ಲಿರುವವರು ಪಂಚಮಸಾಲಿ ಪೀಠದ ಆಸ್ತಿಯನ್ನು ತಮ್ಮ ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಮರಳುವ ಕುರಿತು ಪ್ರತಿಕ್ರಿಯಿಸಿ, ಎಲ್ಲಿಯವರೆಗೆ ಬಿಜೆಪಿ ಒಂದು ಕುಟುಂಬದಿಂದ ಮುಕ್ತಿ ಹೊಂದುವುದಿಲ್ಲವೋ ಅಲ್ಲಿಯವರೆಗೆ ನಾನು ಪಕ್ಷಕ್ಕೆ ಮರಳಿ ಹೋಗುವ ಪ್ರಶ್ನೆ ಉದ್ಭವಿಸಲ್ಲ. ಕುಟುಂಬದಿಂದ ಪಕ್ಷ ಮುಕ್ತವಾದರೆ ಬಿಜೆಪಿಗೆ ಹೋಗುತ್ತೇನೆ. ಆದರೆ, ನನ್ನ ಹೆಣ ಸಹ ಕಾಂಗ್ರೆಸ್ಸಿಗೆ ಹೋಗುವುದಿಲ್ಲ. ವಿಜಯದಶಮಿಯವರೆಗೆ ಕಾದು ನೋಡುವೆ. ಹೊಸ ಪಕ್ಷ ಕಟ್ಟೊದು ಸುಲಭವಲ್ಲ. ಆದರೆ, ನನ್ನ ಅಜೆಂಡಾ ಬೇರೆಯೇ ಇದೆ ಎಂದರು.
ಶೀಘ್ರದಲ್ಲಿ ಹಿಂದೂ ಕಾರ್ಯಕರ್ತರ ರಕ್ಷಣೆ, ಅವರ ಪರ ಹೋರಾಟಕ್ಕೆ ಕಾನೂನು ಘಟಕ ತೆರೆಯಲಾಗುತ್ತಿದೆ. ಹಿಂದೂಗಳಿಗೆ ಅನ್ಯಾಯವಾದಾಗ ಅವರ ಪರ ವಾದ ಮಾಡಲು, ಅವರಿಗೆ ನ್ಯಾಯ ಕೊಡಿಸಲು ಕಾನೂನು ಘಟಕ ಕೆಲಸ ಮಾಡಲಿದೆ ಎಂದರು.
ವಿಜಯೇಂದ್ರ ರಾಜೀನಾಮೆ ನೀಡಲಿ:
ಯತ್ನಾಳ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾತನಾಡಲಿ ಎಂಬ ಎಂ.ಪಿ.ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಮೊದಲು ಬಿ.ವೈ.ವಿಜಯೇಂದ್ರ ರಾಜೀನಾಮೆ ನೀಡಲಿ. ನಾನು ನನ್ನ ಕ್ಷೇತ್ರಕ್ಕೆ ರಾಜೀನಾಮೆ ನೀಡುವೆ, ವಿಜಯೇಂದ್ರ ಶಿಕಾರಿಪುರ ಕ್ಷೇತ್ರಕ್ಕೆ ರಾಜಿನಾಮೆ ನೀಡಲಿ. ನನಗೆ ಮುಸ್ಲಿಮರ ಮತಗಳು ಬೇಕಿಲ್ಲ, ಕೇವಲ ಭಗವಾಧ್ವಜದ ಮೇಲೆ ಚುನಾವಣೆ ಎದುರಿಸುವೆ. ಅವರಿಗೆ ಧಮ್ ಇದ್ದರೆ ರಾಜೀನಾಮೆ ನೀಡಿ, ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.