ಸಾರಾಂಶ
ಕಾಂಗ್ರೆಸ್‌ನ ರಾಜ್ಯ ನಾಯಕರು 20 ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರೂ ಕನಿಷ್ಠ 14 ಗೆಲ್ಲುವ ವಿಶ್ವಾಸ ಹೊಂದಿದ್ದರು. ಗೆಲುವು ಕೈತಪ್ಪಲು ಸೂಕ್ತ ಅಭ್ಯರ್ಥಿ ಆಯ್ಕೆ ಮಾಡದಿರುವುದು ಹಾಗೂ ಒಳ ಜಗಳ ಕಾರಣವಾಗಿದೆ.
ಬೆಂಗಳೂರು : ಲೋಕಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ನ ರಾಜ್ಯ ನಾಯಕರು ಮಾಧ್ಯಮಗಳ ಮುಂದೆ 20 ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರೂ ಕನಿಷ್ಠ 14 ಗೆಲ್ಲುವ ವಿಶ್ವಾಸ ಹೊಂದಿದ್ದರು. ಆದರೆ, ಪಕ್ಷ ಗೆಲ್ಲಬಹುದಾಗಿದ್ದ ಕ್ಷೇತ್ರಗಳಾದ ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಉತ್ತರದಲ್ಲಿ ಗೆಲುವು ಕೈತಪ್ಪಲು ಸೂಕ್ತ ಅಭ್ಯರ್ಥಿ ಆಯ್ಕೆ ಮಾಡದಿರುವುದು ಹಾಗೂ ಒಳ ಜಗಳ ಕಾರಣವಾಗಿದೆ.
ಕೋಲಾರದಲ್ಲಿ ರಮೇಶ್ ಕುಮಾರ್ ಬಣ ಹಾಗೂ ಸಚಿವ ಮುನಿಯಪ್ಪ ಬಣದ ಒಳ ಜಗಳ ಸ್ಪಷ್ಟವಾಗಿ ಹಿನ್ನಡೆಗೆ ಕಾರಣವಾಗಿದ್ದರೆ, ಗೆಲ್ಲಬಹುದಾಗಿದ್ದ ಚಿತ್ರದುರ್ಗದಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಕೇಳಿದ್ದ ಸಚಿವ ತಿಮ್ಮಾಪುರ ಅವರಿಗೆ ಅವಕಾಶ ನೀಡದ್ದು ಕೂಡ ಕಾರಣವಾಗಿದೆ. ಬೆಂ.ಉತ್ತರದಲ್ಲಿ ಶಾಸಕ ಪ್ರಿಯಕೃಷ್ಣ ಅವರನ್ನು ಕಣಕ್ಕೆ ಇಳಿಸಲು ತೀವ್ರ ಪ್ರಯತ್ನ ನಡೆಸಿ ವಿಫಲರಾದ ನಾಯಕತ್ವ ಅನಿವಾರ್ಯವಾಗಿ ಬೇರು ಮಟ್ಟದ ರಾಜಕಾರಣದಲ್ಲಿ ಅನುಭವವಿಲ್ಲದ ಪ್ರೊ.ರಾಜೀವ್ ಗೌಡ ಅವರಿಗೆ ಟಿಕೆಟ್ ನೀಡಬೇಕಾಗಿ ಬಂತು. ಇದು ವಿಫಲವಾಗಿದ್ದು ಫಲಿತಾಂಶದಲ್ಲಿ ಎದ್ದು ಕಾಣುತ್ತಿದೆ.
ಇನ್ನು ಮುಂಬೈ ಕರ್ನಾಟಕದಲ್ಲಿ ಪಕ್ಷ ಹಾವೇರಿ, ಬೆಳಗಾವಿಯಂತಹ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಲು ನೇಹಾ ಪ್ರಕರಣವು ಕಾರಣವಾಗಿದೆ.