ಬಿಜೆಪಿ ಸೇರಲು ಅಂತಿಮ ನಿರ್ಧಾರ: ಸಂಸದೆ ಸುಮಲತಾ

| Published : Apr 04 2024, 01:08 AM IST / Updated: Apr 04 2024, 05:04 AM IST

ಸಾರಾಂಶ

‘ನಾನು ಪಕ್ಷೇತರ ಸಂಸದೆಯಾದರೂ ಬಿಜೆಪಿ ನಾಯಕರು ನನ್ನನ್ನು ಪ್ರತಿ ಹಂತದಲ್ಲೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.  ಅವರ ಜೊತೆಯಲ್ಲಿರಬೇಕು ಎಂದು ಬಯಸಿದ್ದೇನೆ ಎಂದು ಸುಮಲತಾ ಹೇಳಿದರು

 ಮಂಡ್ಯ :  ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಾನೀಗ ಬಿಜೆಪಿ ಸೇರುವುದಕ್ಕೆ ಅಂತಿಮವಾಗಿ ನಿರ್ಧಾರ ಮಾಡಿದ್ದೇನೆ. ಈ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ ಅಷ್ಟೇ. ಆದರೆ, ಮಂಡ್ಯವನ್ನು ನಾನು ಬಿಟ್ಟು ಹೋಗುತ್ತಿಲ್ಲ. ಮಂಡ್ಯದ ಋಣ, ಮಂಡ್ಯದ ಜನರನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ನಗರದ ಶ್ರೀಕಾಳಿಕಾಂಬ ಸಮುದಾಯ ಭವನದಲ್ಲಿ ಬುಧವಾರ ನಡೆದ ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳ ಸಭೆ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ನ ನಾಯಕರೊಬ್ಬರು ಸುಮಲತಾ ಅವಶ್ಯಕತೆ ಹಿಂದೆ ಇರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ಸಿಗರು ಬೇಡ ಎಂದ ಮೇಲೆ ನಾನು ಆಲ್ಲಿಗೆ ಹೋಗುವುದಿಲ್ಲ. ನನಗೆ ಗೌರವವಿಲ್ಲದ ಕಡೆಗೆ ನಾನು ಹೋಗುವುದೂ ಇಲ್ಲ ಎಂದು ನೇರವಾಗಿ ತಿಳಿಸಿದರು.

ನಾಯಕತ್ವ ಬೆಳೆಸುವ ಗುಣ ಬಿಜೆಪಿಯಲ್ಲಿದೆ:

ನಾನು ಪಕ್ಷೇತರ ಸಂಸದೆಯಾದರೂ ಬಿಜೆಪಿ ನಾಯಕರು ನನ್ನನ್ನು ಪ್ರತಿ ಹಂತದಲ್ಲೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ನನಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜಕೀಯವಾಗಿ ಬೇರೆ ನಿರ್ಧಾರ ಮಾಡದಿರುವಂತೆ ಪ್ರಧಾನಿ ನರೇಂದ್ರ ಮೋದಿ ಅವರೇ ನನಗೆ ಹೇಳಿದ್ದಾರೆ. ಅದು ನಿಜವಾದ ನಾಯಕತ್ವ. ನಿಜವಾದ ಗೌರವ. ಅದನ್ನು ನಂಬಬೇಕು. ಅಂತಹ ನಾಯಕರನ್ನು ಮೆಚ್ಚಿಕೊಳ್ಳಬೇಕು. ಅವರ ಜೊತೆಯಲ್ಲಿರಬೇಕು ಎಂದು ಬಯಸಿದ್ದೇನೆ ಎಂದರು.

ಮೋದಿ ನಾಯಕತ್ವಕ್ಕೆ ಶಕ್ತಿಯಾಗುವೆ:

ಪಕ್ಷೇತರ ಸಂಸದೆಯಾದರೂ ಬಿಜೆಪಿ ಹೈಕಮಾಂಡ್ ನನ್ನ ಕ್ಷೇತ್ರಕ್ಕೆ ೪ ಸಾವಿರ ಕೋಟಿ ರು. ಅನುದಾನ ನೀಡಿದ್ದಾರೆ. ನಿಮ್ಮ ನಾಯಕತ್ವ ಪಕ್ಷಕ್ಕೆ ಅಗತ್ಯವಿರುವುದಾಗಿ ಮೋದಿ ನನಗೆ ಹೇಳಿದ್ದಾರೆ. ನಾಯಕತ್ವವನ್ನು ಬೆಳೆಸುವ ಗುಣ ಬಿಜೆಪಿಯಲ್ಲಿದೆ. ಪ್ರಧಾನಿ ಮೋದಿ ಅವರು ಕಳೆದ ೧೦ ವರ್ಷದಲ್ಲಿ ಇಡೀ ವಿಶ್ವವೇ ಭಾರತದ ಕಡೆ ತಿರುಗಿನೋಡುವಂತೆ ಮಾಡಿದ್ದಾರೆ. ಮೋದಿ ಅವರದ್ದು ಸದಾ ಅಭಿವೃದ್ಧಿ ಮಂತ್ರ. ಹತ್ತು ವರ್ಷದಲ್ಲಿ ಒಂದೇ ಒಂದು ಕಳಂಕಕ್ಕೆ ಒಳಗಾಗಲಿಲ್ಲ. ಅವರ ನಾಯಕತ್ವದಲ್ಲಿ ನಾನು ಮುನ್ನಡೆಯುವುದಕ್ಕೆ ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ಪಕ್ಷೇತರ ಸ್ಪರ್ಧೆ ಹುಡುಗಾಟವಲ್ಲ:

ಲೋಕಸಭೆ ಚುನಾವಣೆ ಎನ್ನುವುದು ಹುಡುಗಾಟವಲ್ಲ. ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಪಕ್ಷೇತರವಾಗಿ ಸ್ಪರ್ಧಿಸಿದರೆ ಅದರಿಂದ ಯಾರಿಗೆ ಪ್ರಯೋಜನ, ಏನು ಸಾಧಿಸಿದಂತಾಗುತ್ತದೆ. ಈಗಿನ ಸನ್ನಿವೇಶದಲ್ಲಿ ನಾವು ಕೈಗೊಳ್ಳುವ ತೀರ್ಮಾನ ಪ್ರಬುದ್ಧವಾಗಿರಬೇಕು. ನಾನು ಬೆಂಗಳೂರಿನಲ್ಲಿ ಬೆಂಬಲಿಗರ ಸಭೆ ನಡೆಸಿದ ಬಳಿಕ ನನ್ನ ಆತ್ಮೀಯರು, ಹಿತೈಷಿಗಳು, ವರಿಷ್ಠರು, ದೆಹಲಿ ಮಟ್ಟದ ನಾಯಕರೊಂದಿಗೆಲ್ಲಾ ವಿವರವಾಗಿ ಚರ್ಚಿಸಿದ್ದೇನೆ. ಅವರೆಲ್ಲ್ರ ಅಭಿಪ್ರಾಯವನ್ನು ಸಂಗ್ರಹಿಸಿ ತುಂಬಾ ಯೋಚಿಸಿ ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ ಎಂದರು.

ಸ್ವಾರ್ಥ ರಾಜಕಾರಣಿಯಲ್ಲ:

ನಾನು ಸ್ವಾರ್ಥ ರಾಜಕಾರಣಿಯಲ್ಲ. ನನ್ನಲ್ಲಿ ಸ್ವಾರ್ಥ ಇದ್ದಿದ್ದರೆ, ಅಧಿಕಾರವೇ ಮುಖ್ಯವಾಗಿದ್ದರೆ ಸಿಕ್ಕ ಅವಕಾಶಗಳನ್ನು ಬಿಡುತ್ತಿರಲಿಲ್ಲ. ನನ್ನೆದುರು ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುವಂತೆ ನನ್ನ ಮುಂದಿಟ್ಟಿದ್ದರು. ನಾನು ಅದೆಲ್ಲವನ್ನೂ ತಿರಸ್ಕರಿಸಿದ್ದೆ. ನಾನು ಮಂಡ್ಯ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ. ಇದ್ದರೂ, ನಿಂತರೂ, ಗೆದ್ದರೂ, ಸೋತರೂ ಅದು ಮಂಡ್ಯದಲ್ಲಿ ಮಾತ್ರ. ಸ್ವಾರ್ಥಕ್ಕಾಗಿ ನಾನೆಂದಿಗೂ ರಾಜಕಾರಣ ಮಾಡುವುದಿಲ್ಲ. ಅಂಬರೀಶ್ ಮಾರ್ಗದರ್ಶನ, ಅವರ ಸ್ಫೂರ್ತಿ ನನಗೆ ಶ್ರೀಕರಕ್ಷೆಯಾಗಿದೆ. ಅಧಿಕಾರಕ್ಕೆ ಅಂಟಿಕೂರುವ ಜಾಯಮಾನ ನನ್ನದಲ್ಲ ಎಂದು ನೇರವಾಗಿ ಹೇಳಿದರು.

ಮಂಡ್ಯ ಅಭಿವೃದ್ಧಿಯೇ ನನ್ನ ಸ್ವಾರ್ಥ:

ಮಂಡ್ಯ ಜಿಲ್ಲೆಯ ಅಭಿವೃದ್ಧಿಯೇ ನನ್ನ ಸ್ವಾರ್ಥ. ಕೆಲವರು ಎಂಪಿ, ಎಂಎಲ್‌ಎ ಟಿಕೆಟ್ ಸಿಗಲಿಲ್ಲವೆಂಟ ಕಾರಣಕ್ಕೆ ಪಕ್ಷ ಬಿಡುತ್ತಾರೆ. ಆದರೆ, ನಾನು ಎಂಪಿ ಸೀಟ್ ಬಿಟ್ಟುಕೊಟ್ಟು ಬಿಜೆಪಿ ಸೇರುತ್ತಿದ್ದೇನೆ. ನನ್ನನ್ನೇ ನಂಬಿರುವ ಕಾರ್ಯಕರ್ತರು, ಅಭಿಮಾನಿಗಳಿಗೆ ಶಕ್ತಿ ತುಂಬುವ ನಿರ್ಧಾರ ಮಾಡಿದ್ದೇನೆ. ನಾನು ರಾಜಕೀಯ ಮಾಡಿದರೆ ಅದು ಮಂಡ್ಯದಲ್ಲಿ ಮಾತ್ರ. ಅಂಬರೀಶ್ ಅಭಿಮಾನಿಗಳನ್ನು ಬಿಟ್ಟು ಬೇರೆಡೆಗೆ ಹೋದರೆ ನಾನು ಮಂಡ್ಯ ಸೊಸೆ ಅನ್ನಿಸಿಕೊಳ್ಳಲು ಸಾಧ್ಯವಿಲ್ಲ. ನನ್ನ ಸ್ಥಾನಕ್ಕೆ ಬೇರೆಯವರು ಬರಬಹುದು. ಆದರೆ, ಮಂಡ್ಯ ಸೊಸೆ ಎನ್ನುವ ಸ್ಥಾನ ನನಗೆ ಶಾಶ್ವತವಾಗಿದೆ. ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕೊನೆಯ ಉಸಿರಿರುವತನಕ ಮರೆಯೋಲ್ಲ:

ಮಂಡ್ಯ ಜನರು ನೀಡಿರುವ ಆಶೀರ್ವಾದವನ್ನು ನನ್ನ ಕೊನೆಯ ಉಸಿರಿರುವವರೆಗೂ ಮರೆಯುವುದಿಲ್ಲ. ಸಂಸದೆಯಾಗಿ ಐದು ವರ್ಷ ಹೇಗೆ ಕಳೆಯಿತೆಂಬುದೇ ಗೊತ್ತಿಲ್ಲ. ಈಗ ಚುನಾವಣೆ ಬಂದಿದೆ. ಮತ್ತೆ ಹೊಸ ಸವಾಲು ಎದುರಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ನನಗೆ ಬೆಂಬಲ ನೀಡಿತ್ತು. ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ನಾನು ಆ ಪಕ್ಷದ ಪರವಾಗಿ ನಿಂತು ಪ್ರಚಾರ ಮಾಡಿದ್ದೆ. ಈ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಾಗಿದೆ. ಮಂಡ್ಯ ಕ್ಷೇತ್ರವನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವುದಕ್ಕೆ ಕೊನೆಯವರೆಗೂ ಪ್ರಯತ್ನಿಸಿದೆ. ಬಂದ ಅವಕಾಶಗಳನ್ನೆಲ್ಲಾ ತಿರಸ್ಕರಿಸಿದೆ. ಈಗ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಶಕ್ತಿ ತುಂಬಲು ಬಿಜೆಪಿ ಸೇರುವ ನಿರ್ಧಾರ ಮಾಡಿರುವುದಾಗಿ ಹೇಳಿದರು.

ನಟ ದರ್ಶನ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಬೇಲೂರು ಸೋಮಶೇಖರ್, ಹನಕೆರೆ ಶಶಿಕುಮಾರ್ ಅವರಿದ್ದರು.