ಸಾರಾಂಶ
ಪಿಟಿಐ ನವದೆಹಲಿಕೇಂದ್ರ ಬಜೆಟ್‌ನಲ್ಲಿ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಮಾತ್ರ ಹೆಚ್ಚು ಕೊಡುಗೆ ನೀಡಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ. ಮಧ್ಯಂತರ ಬಜೆಟ್‌ನಲ್ಲಾಗಲೀ ಅಥವಾ ಮಂಗಳವಾರದ ಪೂರ್ಣ ಪ್ರಮಾಣದ ಬಜೆಟ್‌ನಲ್ಲಾಗಲೀ ಎಲ್ಲ ರಾಜ್ಯಗಳ ಹೆಸರನ್ನು ಹೇಳಿಲ್ಲ ಎಂದಾಕ್ಷಣ ಕೇಂದ್ರ ಸರ್ಕಾರದ ಯೋಜನೆಗಳು ಆ ರಾಜ್ಯದಲ್ಲಿ ಇರುವುದಿಲ್ಲ ಎಂದರ್ಥವಲ್ಲ ಎಂದು ಹೇಳಿದ್ದಾರೆ.ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಮಂಡಿಸಿದ ಯಾವುದೇ ಬಜೆಟ್‌ನಲ್ಲೂ ಎಲ್ಲ ರಾಜ್ಯಗಳ ಹೆಸರು ಉಲ್ಲೇಖವಾಗಿಲ್ಲ. ಮಧ್ಯಂತರ ಅಥವಾ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ನಾನು ಮಹಾರಾಷ್ಟ್ರದ ಹೆಸರನ್ನು ಹೇಳಿಯೇ ಇಲ್ಲ. ಹಾಗಂತ ಕಳೆದ ತಿಂಗಳು ಆ ರಾಜ್ಯಕ್ಕೆ 76 ಸಾವಿರ ಕೋಟಿ ರು. ವೆಚ್ಚದ ಬಂದರು ಯೋಜನೆಯನ್ನು ನೀಡಲಾಗಿದೆ. ಅದಕ್ಕೆ ಯಾವುದೇ ತಡೆಯಾಗಿಲ್ಲ ಎಂದು ಹೇಳಿದರು.ಎರಡು ರಾಜ್ಯಗಳನ್ನು ಬಿಟ್ಟು ಉಳಿದ ಯಾವ ರಾಜ್ಯಕ್ಕೂ ಏನನ್ನೂ ಬಜೆಟ್‌ನಲ್ಲಿ ನೀಡಿಲ್ಲ ಎಂಬ ಭಾವನೆಯನ್ನು ಸೃಷ್ಟಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಯತ್ನಿಸುತ್ತಿವೆ. ಕಾಂಗ್ರೆಸ್ ಪಕ್ಷ ಈವರೆಗೆ ಮಂಡಿಸಿರುವ ಬಜೆಟ್‌ನಲ್ಲಿ ಎಲ್ಲ ರಾಜ್ಯಗಳ ಹೆಸರನ್ನು ಹೇಳಿದೆಯೇ ಎಂಬುದನ್ನು ತಿಳಿಸಲಿ. ಇದು ನನ್ನ ಸವಾಲು ಎಂದು ಹೇಳಿದರು.