ರಾಹುಲ್‌ ಜಾತಿ ಗಣತಿಗೆ ಆಗ್ರಹಿಸಿದಾಗ ನಕ್ಕ ನಿರ್ಮಲಾ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

| Published : Jul 30 2024, 12:36 AM IST / Updated: Jul 30 2024, 05:12 AM IST

ಸಾರಾಂಶ

ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಲೋಕಸಭೆಯಲ್ಲಿ ಜಾತಿಗಣತಿ ಬಗ್ಗೆ ಹಾಗೂ ಬಜೆಟ್ ಹಲ್ವಾ ತಯಾರಿಕೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ಬಗ್ಗೆ ಪ್ರಸ್ತಾಪಿಸಿದಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನಕ್ಕಿದ್ದು ವಿವಾದಕ್ಕೀಡಾಗಿದೆ.

ನವದೆಹಲಿ: ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಲೋಕಸಭೆಯಲ್ಲಿ ಜಾತಿಗಣತಿ ಬಗ್ಗೆ ಹಾಗೂ ಬಜೆಟ್ ಹಲ್ವಾ ತಯಾರಿಕೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ಬಗ್ಗೆ ಪ್ರಸ್ತಾಪಿಸಿದಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನಕ್ಕಿದ್ದು ವಿವಾದಕ್ಕೀಡಾಗಿದೆ. 

ಇದರ ವಿರುದ್ಧ ರಾಹುಲ್‌ ಹಾಗೂ ಕಾಂಗ್ರೆಸ್ಸಿಗರು ಕಿಡಿಕಾರಿದ್ದು, ಸಚಿವೆಯ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.ಸೋಮವಾರ ಲೋಕಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್‌, ‘ಜಾತಿಗಣತಿ ನಡೆಸಬೇಕು ಎಂದು ದೇಶದ ಶೇ.90ರಷ್ಟು ಜನತೆ ಒತ್ತಾಯಿಸುತ್ತಿದ್ದಾರೆ. ಜಾತಿಗಣತಿ ಪರ ದಲಿತರು, ಹಿಂದುಳಿದವರು, ಬಡವರು ಇದ್ದಾರೆ.

 ಏಕೆಂದರೆ ತಮ್ಮ ಪಾಲೆಷ್ಟು ಎಂಬ ಅರಿಯುವ ಹಂಬಲ ಅವರದು, ಆದರೆ ಶೇ.3ರಷ್ಟಿರುವ ಜನರು ‘ಬಜೆಟ್ ಹಲ್ವಾ’ ತಯಾರಿಸಿ ಶೇ.3ರಷ್ಟಿರುವ ಜನರಿಗೆ (ಮೇಲ್ವರ್ಗದವರಿಗೆ) ಮಾತ್ರ ಹಂಚುತ್ತಿದ್ದಾರೆ’ ಎಂದರು. 

ಆಗ ವಿತ್ತ ಸಚಿವೆ ನಿರ್ಮಲಾ ನಕ್ಕರು. ಇದನ್ನು ಪ್ರಶ್ನಿಸಿದ ರಾಹುಲ್‌ ಗಾಂಧಿ, ‘ಮೇಡಂ ಜೀ, ಇದು ನಗುವ ವಿಷಯವೇ’ ಎಂದು ಪ್ರಶ್ನಿಸಿದರು.ಇದಕ್ಕೂ ಮುನ್ನ ಬಜೆಟ್‌ ಹಲ್ವಾ ತಯಾರಿಕೆಯ ಸಂಪ್ರದಾಯವನ್ನು ಪ್ರಸ್ತಾಪಿಸಿದ ರಾಹುಲ್, ‘ಬಜೆಟ್‌ ಹಲ್ವಾ ಸಮಾರಂಭದಲ್ಲಿ ಇದ್ದ 20 ಅಧಿಕಾರಿಗಳಲ್ಲಿ ಒಬ್ಬನೂ ದಲಿತ, ಹಿಂದುಳಿದ ಅಧಿಕಾರಿ ಇರಲಿಲ್ಲ’ ಎಂದರು ಹಾಗೂ ಬಜೆಟ್‌ ಹಲ್ವಾ ಸಮಾರಂಭದ ಫೋಟೋ ಪ್ರದರ್ಶಿಸಲು ಯತ್ನಿಸಿದರು. ಇದಕ್ಕೆ ಸ್ಪೀಕರ್‌ ಅವಕಾಶ ನೀಡಲಿಲ್ಲ. ಆಗ ರಾಹುಲ್‌ ಅವರು ಫೋಟೋ ಪ್ರದರ್ಶನ ನಿಲ್ಲಿಸಿ ತಾವು ಆಡಿದ್ದ ಮಾತಿನಲ್ಲಿ ಕೊಂಚ ಬದಲಾವಣೆ ಮಾಡಿದರು ಹಾಗೂ ‘ಬಜೆಟ್‌ ಹಲ್ವಾ ತಯಾರಿಸಿದ 20 ಅಧಿಕಾರಿಗಳಲ್ಲಿ ದೇಶದ ಶೇ.73ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಒಬ್ಬ ಅಧಿಕಾರಿಯೂ ಇಲ್ಲ. ಕೇವಲ ಒಬ್ಬ ಅಲ್ಪಸಂಖ್ಯಾತ ಹಾಗೂ ಒಬ್ಬ ಹಿಂದುಳಿದ ಅಧಿಕಾರಿ ಇದ್ದರು. ಆದರೆ ಹಲ್ವಾ ಫೋಟೋದಲ್ಲಿ ಅವರು ಇಲ್ಲ. ಫೋಟೋದಲ್ಲಿ ಅವರು ಬರದಂತೆ ತಡೆಯಲಾಯಿತು’ ಎಂದು ಆರೋಪಿಸಿದರು. ಆಗ ನಿರ್ಮಲಾ ಮುಖ ಹಾಗೂ ಕಣ್ಣು ಮುಚ್ಚಿಕೊಂಡು ನಕ್ಕರು.

ರಾಹುಲ್‌ ಆಕ್ರೋಶ:

ಈ ನಡುವೆ ಟ್ವೀಟರ್‌ನಲ್ಲಿ ನಿರ್ಮಲಾ ನಡೆಯನ್ನು ಪ್ರಶ್ನಿಸಿರುವ ರಾಹುಲ್, ‘ಇಂದು ಸಂಸತ್ತಿನಲ್ಲಿ ನಾನು ಜಾತಿ ಗಣತಿ ವಿಷಯವನ್ನು ಪ್ರಸ್ತಾಪಿಸಿದಾಗ ಹಣಕಾಸು ಸಚಿವರು ನಗುತ್ತಾ ಈ ಗಂಭೀರ ವಿಷಯವನ್ನು ಲೇವಡಿ ಮಾಡಿದರು. ದೇಶದ 90% ಜನಸಂಖ್ಯೆಯ ಜೀವನಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ವಿಷಯಕ್ಕೆ ಇಂತಹ ತಿರಸ್ಕಾರ ಪ್ರತಿಕ್ರಿಯೆಯು ಬಿಜೆಪಿಯ ಉದ್ದೇಶಗಳು, ಮನಸ್ಥಿತಿ ಮತ್ತು ಉದ್ದೇಶಗಳನ್ನು ಬಹಿರಂಗಪಡಿಸಿದೆ. ನಾವು ಯಾವುದೇ ಬೆಲೆ ತೆತ್ತಾದರೂ ಜಾತಿ ಗಣತಿಯನ್ನು ನಿಜ ಮಾಡುತ್ತೇವೆ ಮತ್ತು ವಂಚಿತರಿಗೆ ನ್ಯಾಯ ಒದಗಿಸುತ್ತೇವೆ ಎಂದು ನಾನು ಬಿಜೆಪಿಗೆ ಹೇಳಲು ಬಯಸುತ್ತೇನೆ. ಭಾರತವು ದೇಶದ ಎಕ್ಸ್-ರೇ ಅನ್ನು ಹೊರತರಲಿದೆ’ ಎಂದಿದ್ದಾರೆ.

ಇನ್ನು ಹಲವು ಕಾಂಗ್ರೆಸ್ಸಿಗರು ಸಚಿವೆಯ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.