ಮೊದಲು ಸ್ಟಾಲಿನ್ ಬಳಿ ಮೇಕೆದಾಟುಗೆ ಒಪ್ಪಿಗೆ ಪಡೆಯಿರಿ: ಮಾಜಿ ಸಿಎಂ ಎಚ್ಡಿಕೆ

| Published : Apr 23 2024, 12:53 AM IST / Updated: Apr 23 2024, 04:33 AM IST

ಮೊದಲು ಸ್ಟಾಲಿನ್ ಬಳಿ ಮೇಕೆದಾಟುಗೆ ಒಪ್ಪಿಗೆ ಪಡೆಯಿರಿ: ಮಾಜಿ ಸಿಎಂ ಎಚ್ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಜನರು ತಮಗೆ ಲೋಕಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡಿದರೆ, ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಕೆಲವೇ ತಿಂಗಳಲ್ಲಿ ಮೇಕೆದಾಟು ಯೋಜನೆಯನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಬಗೆ ಹರಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು.

 ನಾಗಮಂಗಲ :  ಕಾಂಗ್ರೆಸ್ ಸ್ನೇಹಿತ ಡಿಎಂಕೆ ನಾಯಕ ಸ್ಟಾಲಿನ್ ಬಳಿ ಮೇಕೆದಾಟು ಯೋಜನೆಗೆ ಒಪ್ಪಿಗೆ ಪಡೆದುಕೊಂಡು ಬಂದರೆ ನಾನು ಪ್ರಧಾನಿ ಬಳಿ ಎರಡು ಸೆಕೆಂಡ್‌ನಲ್ಲಿ ಅನುಮತಿ ಕೊಡಿಸುತ್ತೇನೆ ಎಂದು ಮಾಜಿ ಸಿಎಂ, ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಸಿಎಂ, ಡಿಸಿಎಂಗೆ ಸವಾಲು ಹಾಕಿದರು.

ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಮಂಡ್ಯ ಲೋಕಸಭಾ ಚುನಾವಣೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕಾರ್ಯಕರ್ತರ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಬಗ್ಗೆ ವೀರಾವೇಶದ ಮಾತುಗಳನ್ನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸ್ನೇಹಿತ, ತಮಿಳುನಾಡಿನ ಸಿಎಂ ಸ್ಟಾಲಿನ್ ಬಳಿ ಮೇಕೆದಾಟು ಯೋಜನೆಗೆ ಮೊದಲು ಒಪ್ಪಿಗೆ ಪಡೆಯಲಿ. ಇದು ಇವರ ಕೈಯಲ್ಲಿ ಆಗುತ್ತಾ ಎಂದು ಪ್ರಶ್ನೆ ಮಾಡಿದರು.

ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಾಣದ ವಿಷಯ ಇವತ್ತಿನದಲ್ಲ. ಸುಮಾರು 30 ವರ್ಷಗಳಷ್ಟು ಹಳೆಯದು. ತಾವು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಳಿ ಮಾತನಾಡಿದ್ದೆ. ಜತೆಗೆ ಡಿಪಿಆರ್ ಮಾಡಿಸಿದ್ದೆ. ಆ ಕಡತ ದೆಹಲಿಯಲ್ಲಿಯೇ ಇದೆ ಎಂದರು.

ಜಿಲ್ಲೆಯ ಜನರು ತಮಗೆ ಲೋಕಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡಿದರೆ, ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಕೆಲವೇ ತಿಂಗಳಲ್ಲಿ ಮೇಕೆದಾಟು ಯೋಜನೆಯನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಬಗೆ ಹರಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಹೇಳಿದರು.

ರಾಜ್ಯದಲ್ಲಿ ಪಿಕ್ ಪ್ಯಾಕೇಟ್ ಸರ್ಕಾರ ಅಧಿಕಾರದಲ್ಲಿದೆ. ಇದು ರಾಜ್ಯದ ಜನರ ಉದ್ಧಾರ ಮಾಡಲ್ಲ. ಕಳೆದ 10 ತಿಂಗಳಿಂದ ಸರ್ಕಾರದ ಖಜಾನೆಯನ್ನು ಲೋಟಿ ಮಾಡಿ ರಾಜ್ಯದ ಜನರಿಗೆ ಚೊಂಬು ತೋರುತ್ತಿದೆ ಎಂದು ಗುಡುಗಿದರು.

ನನ್ನ ರಾಜಕೀಯ ಭವಿಷ್ಯ ಇರೋದು ಮಂಡ್ಯ ಜಿಲ್ಲೆ ಜನರ ಕೈಯಲ್ಲಿ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕೈಯಲ್ಲಲ್ಲ. ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಸೋಲುವುದು ಪೂರ್ವದಲ್ಲಿ ಸೂರ್ಯ ಉದಯವಾಗುವಷ್ಟೇ ಸತ್ಯ ಅಂತ ಹೇಳ್ತಾರೆ. ಹಾಗಾಗಿ ನನ್ನ ಭವಿಷ್ಯವನ್ನು ಜಿಲ್ಲೆಯ ಜನರು ನಿರ್ಧರಿಸಿ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ನಾನು ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಬೇಕು ಅಂದು ಕೊಂಡಿರಲಿಲ್ಲ. ದೈವೇಚ್ಚೆಯಿಂದ ಆಗಿದ್ದೇನೆ. ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ಮುಗಿಸಲೇಬೇಕೆಂದು ಕಾಂಗ್ರೆಸ್ ನಾಯಕರು ಸಂಚು ರೂಪಿಸುತ್ತಿದ್ದಾರೆ. ಜಿಲ್ಲೆಯ ರೈತರು ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಉಳಿಸಿಕೊಳ್ಳದಿದ್ದರೆ ಜೀವನದಲ್ಲಿ ಸಂಪೂರ್ಣ ನೆಲಕಚ್ಚುತ್ತೇವೆಂಬ ಭಯದಲ್ಲಿ ನಾನು ಪಣತೊಟ್ಟು ನಿಮ್ಮ ಮುಂದೆ ನಿಂತಿದ್ದೇನೆ ಎಂದರು.

ನಮ್ಮ ಪಕ್ಷದ ಅಳಿವು ಉಳಿವಿನ ಪ್ರಶ್ನೆ. ಕಾವೇರಿ ಸೇರಿದಂತೆ ಜಿಲ್ಲೆಯ ಹಲವು ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಜಿಲ್ಲೆಯ ಜನತೆ ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದೆ ನನಗೆ ಆಶೀರ್ವದಿಸಬೇಕು. ಜಿಲ್ಲೆಯ ರೈತರಿಗೆ ನಾನು ನನ್ನ ರಾಜಕೀಯ ಜೀನವದಲ್ಲಿ ಅಲ್ಪಸ್ವಲ್ಪ ಕಾಣಿಕೆ ಕೊಟ್ಟಿದ್ದೇನೆ ಎನ್ನುವುದು ನಿಮ್ಮ ಹೃದಯದಲ್ಲಿದ್ದರೆ ಈ ಚುನಾವಣೆಯಲ್ಲಿ ನನಗೆ ಹಾಲನ್ನಾದರೂ ಕೊಡಿ ವಿಷವನ್ನಾದರೂ ಕೊಡಿ ಎರಡನ್ನೂ ಸಮಚಿತ್ತವಾಗಿ ಸ್ವೀಕರಿಸುತ್ತೇನೆ ಎಂದರು.

ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗೆ ಹಣ ಬೇಕಾಗಿರುವುದರಿಂದ ಅಬಕಾರಿ ಸುಂಕವನ್ನು ಹೆಚ್ಚಿಸಲಾಗಿ 1 ಕ್ವಾಟ್ರು ಎಣ್ಣೆ 150 ರು.ಗಳಾಗಿದೆ. ಇದರಿಂದ ಬಡವರ ಸುಲಿಗೆ ನಡೆಯುತ್ತಿದೆ ಎಂದು ಕಿಡಿಕಾರಿದರು.

ಗಂಡದಿರ ಬಳಿ ಇರುವ ಹಣವನ್ನು ಕಿತ್ತು ಹೆಂಡ್ತಿಗೆ ನೀಡುತ್ತಿದೆ. ಮಹಿಳೆಯರು ಸರ್ಕಾರದ ಗ್ಯಾರಂಟಿ ಯೋಜನೆಗೆ ಆಸೆ ಬೀಳದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.

ಕೃಷಿ ಮಂತ್ರಿ ಹಣ ಬಲದಿಂದ ಎಲ್ಲ ಆಟಗಳನ್ನು ಆಡುತ್ತಿದ್ದಾರೆ. ಹಣ ಬಲವೋ, ಜನ ಬಲವೋ ಎಂಬುದು ಏ.26 ರಂದು ಗೊತ್ತಾಗುತ್ತದೆ. ಕೃಷಿ ಮಂತ್ರಿ ಅವರ ದುರಂಕಾರ ಮುರಿಯಲು ಎಚ್.ಡಿಕೆಯನ್ನು ಕರೆತರಲು ನನಗೆ ಕಾಂಗ್ರೆಸ್ ನ ಕೆಲ ಮುಖಂಡರುಗಳೇ ಹೇಳಿದ್ದರು. ನಾವೆಲ್ಲಾ ಸೇರಿ ಕುಮಾರಣ್ಣನನ್ನು ಮಂಡ್ಯ ಕ್ಷೇತ್ರಕ್ಕೆ ಕರೆತದಿದ್ದೇವೆ ಎಂದರು.

ಬೃಹತ್ ಸಭೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ತಾಲೂಕಿನ ಬಿ.ಜಿ. ನಗರಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದ ಕುಮಾರಸ್ವಾಮಿ ಪಟ್ಟಣಕ್ಕೆ ಕಾರಿನಲ್ಲಿ ಬಂದು ಸಭೆಯಲ್ಲಿ ಭಾಗವಹಿಸಿದರು. ಕಾಂಗ್ರೆಸ್ ಪಕ್ಷದ ಕಂಚನಹಳ್ಳಿ ಬಾಲಕೃಷ್ಣ, ಕೊಪ್ಪ ಹೊಬಳಿಯ ಜವಹಾರ್ ಲಾಲ್ ಸೇರಿದಂತೆ ಅನೇಕರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಜಿ.ಬೊಮ್ಮನಹಳ್ಳಿ ರಾಜೇಶ್ ಕುಮಾರಣ್ಣನ ಚುನಾವಣೆ ವೆಚ್ಚಕ್ಕಾಗಿ 25 ಸಾವಿರ ರುಗಳನ್ನು ದೇಣಿಗೆ ನೀಡಿದರು.

ಡಾ.ರವೀಂದ್ರ ಮಾತನಾಡಿದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಸಮಾಜ ಸೇವಕ ಮಲ್ಲಿಕಾರ್ಜುನ್ (ಫೈಟರ್ ರವಿ), ಮನ್ಮುಲ್ ನಿರ್ದೇಶಕ ಕೋಟಿ ರವಿ, ಜಿಪಂ ಮಾಜಿ ಸದಸ್ಯರಾದ ಮುತ್ತಣ್ಣ, ಶಿವಪ್ರಕಾಶ್, ಚಂದ್ರಣ್ಣ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ನಾರಾಯಣಮೂರ್ತಿ, ಮುಖಂಡರಾದ ಡಿ.ಟಿ.ಶ್ರೀನಿವಾಸ್, ನಾಗೇಶ್, ರಾಮು ಸೇರಿದಂತೆ ಹಲವರು ಇದ್ದರು.