ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ವಿವಿಧ ಮೂಲಗಳಿಂದ ಸಂಗ್ರಹವಾಗುವ ಆದಾಯದ ಶೇ.60ರಷ್ಟು ಪಾಲನ್ನು ಅಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ವಿನಿಯೋಗಿಸಬೇಕಾದ ಸನ್ನಿವೇಶ ಇರುವುದಿರಂದ 5 ಪಾಲಿಕೆಗಳು ಒಂದೇ ವರ್ಷದಲ್ಲಿ ದಿವಾಳಿಯಾಗಲಿವೆ ಎಂದ ಬಿಜೆಪಿ ಮುಖಂಡ ಎನ್.ಆರ್.ರಮೇಶ್
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ವಿವಿಧ ಮೂಲಗಳಿಂದ ಸಂಗ್ರಹವಾಗುವ ಆದಾಯದ ಶೇ.60ರಷ್ಟು ಪಾಲನ್ನು ಅಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ವಿನಿಯೋಗಿಸಬೇಕಾದ ಸನ್ನಿವೇಶ ಇರುವುದಿರಂದ 5 ಪಾಲಿಕೆಗಳು ಒಂದೇ ವರ್ಷದಲ್ಲಿ ದಿವಾಳಿಯಾಗಲಿವೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಬಹಿರಂಗ ಪತ್ರ
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಬಹಿರಂಗ ಪತ್ರ ಬರೆದಿರುವ ಅವರು, ಇಂತಹ ಅಸಮತೋಲನ ಹೋಗಲಾಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಜಿಬಿಎ ವ್ಯಾಪ್ತಿಯ 17 ಇಲಾಖೆಗಳಿಗೆ ಸಂಬಂಧಿಸಿದ ನಿರ್ವಹಣೆ ಕಾರ್ಯಗಳಿಗೆ ಅಗತ್ಯವಿರುವ ಅನುದಾನ ಕ್ರೋಢೀಕರಿಸಲು ಸಾಧ್ಯವಾಗದೆ ಕೇವಲ ಒಂದೇ ವರ್ಷದಲ್ಲಿ ಐದು ಪಾಲಿಕೆಗಳು ಆರ್ಥಿಕ ಅವನತಿಗೆ ತಲುಪಿ ದಿವಾಳಿಯಾಗುತ್ತದೆ ಎಂಬ ಅಂಕಿ-ಅಂಶಗಳ ಬಗ್ಗೆ ಸಿದ್ದರಾಮಯ್ಯನವರ ಸರ್ಕಾರ ನಿಜಕ್ಕೂ ಗಮನ ಹರಿಸಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದ್ದಾರೆ.
369 ವಾರ್ಡುಗಳನ್ನಾಗಿ ವಿಂಗಡಿಸಿರುವುದರಿಂದ ದಿವಾಳಿ
ಈ ಹಿಂದಿನ 198 ವಾರ್ಡುಗಳನ್ನು ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಿಗಿಂತಲೂ ಸಣ್ಣ ಪ್ರಮಾಣದ 369 ವಾರ್ಡುಗಳನ್ನಾಗಿ ವಿಂಗಡಿಸಿರುವುದರಿಂದ ಬೆಂಗಳೂರು ಮಹಾನಗರದ ಐದು ಪಾಲಿಕೆಗಳು ಎಲ್ಲಾ ರೀತಿಯಿಂದಲೂ ದಿವಾಳಿ ಅಂಚಿನತ್ತ ಸಾಗಿ ವಿಶ್ವದ ಮುಂದೆ ನಗೆಪಾಟಲಿಗೀಡಾಗಲಿದೆ ಎಂದು ಹೇಳಿದ್ದಾರೆ.
ಇದೀಗ ಜಿಬಿಎ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲು ಒಟ್ಟು 6,326 ಮಂದಿ ಅಧಿಕಾರಿ ಹಾಗೂ ನೌಕರರು ಬೇಕಾಗುತ್ತಾರೆ. ಇವರಿಗೆ ವರ್ಷಕ್ಕೆ 3,000 ಕೋಟಿ ರು. ಬೇಕಾಗುತ್ತದೆ. ಇದರ ಜತೆಗೆ, 17,000 ಮಂದಿ ಪೌರಕಾರ್ಮಿಕರ ವೇತನಕ್ಕೆಂದು ವರ್ಷಕ್ಕೆ 444 ಕೋಟಿ ರು, ಗುತ್ತಿಗೆ ಆಧಾರಿತ ಎಂಜಿನಿಯರ್ ಇತರರಿಗೆಂದು 48 ಕೋಟಿ ರು. ಸೇರಿ ವರ್ಷಕ್ಕೆ 3,492 ಕೋಟಿ ರು. ಅನ್ನು ವೆಚ್ಚ ಮಾಡಲೇಬೇಕಾಗುತ್ತದೆ. ಜಿಬಿಎ ಸಿಬ್ಬಂದಿಯ 3,492 ಕೋಟಿ ರು. ಖರ್ಚಿನ ಜತೆಗೆ ಇತರ ಕಾರ್ಯ ನಿರ್ವಹಣೆಗೆ ಪ್ರತಿ ವರ್ಷ 1,700 ಕೋಟಿ ರು.ಸೇರಿ ಬರೊಬ್ಬರಿ 6,300 ಕೋಟಿ ರು. ವೆಚ್ಚ ಮಾಡಬೇಕಾಗುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ನಯಾಪೈಸೆ ಉಳಿಯುವುದಿಲ್ಲ ಎಂದು ರಮೇಶ್ ತಿಳಿಸಿದ್ದಾರೆ.
ನಗರದ 1,980 ಕಿ. ಮೀ. ಉದ್ದರ ಪ್ರಮುಖ ರಸ್ತೆಗಳು, 13,400 ಕಿ.ಮೀ. ಉದ್ದದ ವಾರ್ಡ್ ಮಟ್ಟದ ರಸ್ತೆಗಳು, 842 ಕಿ.ಮೀ. ಉದ್ದದ ಬೃಹತ್ ನೀರುಗಾಲುವೆಗಳ ಅಭಿವೃದ್ಧಿ ಮತ್ತು ಹೂಳೆತ್ತಲು, 183 ಕೆರೆಗಳು, 26 ಹೆರಿಗೆ ಆಸ್ಪತ್ರೆಗಳು, ಆರು ರೆಫರಲ್ ಆಸ್ಪತ್ರೆಗಳು ಮತ್ತು 144 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅರಣ್ಯೀಕರಣ, ಮರಗಳ ತೆರವುಗೊಳಿಸುವಿಕೆ, ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಕಾರ್ಯಗಳಿಗೆ ಬೇಕಾಗುವ 6,000 ಕೋಟಿ ರು. ಎಲ್ಲಿಂದ ತರುವುದು ಎಂದು ಪ್ರಶ್ನಿಸಿದ್ದಾರೆ.

