ಪ್ರಧಾನಿ ಮೋದಿ ಭಾವಚಿತ್ರಕ್ಕೆ ಪುಷ್ಪಾರ್ಚನೆ

| Published : Jun 10 2024, 12:30 AM IST / Updated: Jun 10 2024, 04:29 AM IST

ಸಾರಾಂಶ

ಬಿಜೆಪಿ- ಜೆಡಿಎಸ್‌ ಒಂದಾಗಿ ಲೋಕಸಮರ ಎದುರಿಸಿದ್ದಕ್ಕೆ ಕೋಲಾರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬುಗೆ ವಿಜಯ ಮಾಲೆ ದಕ್ಕಿದೆ, ಮುಂಬರುವ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಕ್ಷೇತ್ರದಲ್ಲಿ ಧೂಳಿಪಟ ಮಾಡಲಾಗುವುದು

 ಬಂಗಾರಪೇಟೆ :  ಅತ್ತ ದೆಹಲಿಯಲ್ಲಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಇತ್ತ ಪಟ್ಟಣದಲ್ಲಿ ಬಿಜೆಪಿ,ಜೆಡಿಎಸ್ ಕಾರ್ಯಕರ್ತರು ಜಂಟಿಯಾಗಿ ಮೋದಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಪಟ್ಟಣದ ಕುವೆಂಪು ವೃತ್ತದಲ್ಲಿ ಜಮಾಯಿಸಿದ್ದ ಎರಡೂ ಪಕ್ಷಗಳ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಮೋದಿ ಹ್ಯಾಟ್ರಿಕ್ ಪ್ರಧಾನಿಯಾಗಿ ಪ್ರಮಾಣ ವಚನ ಮಾಡುತ್ತಿದ್ದಂತೆ ಮೋದಿ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ಮೈತ್ರಿಯಿಂದಾಗಿ ಗೆಲುವು

ನಂತರ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಕ್ಷೇತ್ರದಲ್ಲಿ ಎರಡೂ ಪಕ್ಷಗಳು ಒಂದಾಗಿ ಲೋಕಸಮರ ಎದುರಿಸಿದ್ದಕ್ಕೆ ಕೋಲಾರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬುಗೆ ವಿಜಯ ಮಾಲೆ ದಕ್ಕಿದೆ, ಮುಂಬರುವ ಜಿಪಂ,ತಾಪಂ ಚುನಾವಣೆಯಲ್ಲಿಯೂ ಮುಂದುವರೆಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಕ್ಷೇತ್ರದಲ್ಲಿ ನೆಲೆಯಿಲ್ಲದಂತೆ ಧೂಳಿಪಟ ಮಾಡಲಾಗುವುದು ಎಂದರು.

ಕಾಂಗ್ರೆಸ್‌ ಕೊಚ್ಚಿಹೋಗಲಿದೆ

ಬಿಜೆಪಿ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ಮಾತನಾಡಿ, ಬಿಜೆಪಿ ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿದರೆ ಎದುರಾಳಿ ಪಕ್ಷಕ್ಕೆ ಠೇವಣಿ ಸಿಗುವುದಿಲ್ಲ ಎಂಬುದು ಲೋಕಸಭೆ ಚುನಾವಣೆಯಲ್ಲಿ ಸಾಭಿತಾಗಿದೆ, ಮುಂದಿನ ಎಲ್ಲಾ ಸ್ಥಳಿಯ ಸಂಸ್ಥೆಗಳಲ್ಲಿ ನಾವಿಬ್ಬರೂ ಜಂಟಿಯಾಗಿ ಚುನಾವಣೆ ಮಾಡುತ್ತೇವೆ. ಕಾಂಗ್ರೆಸ್ ನಮ್ಮ ಸುಂಟರ ಗಾಳಿಯಲ್ಲಿ ಕೊಚ್ಚಿ ಹೋಗುವುದರಲ್ಲಿ ಅನುಮಾನವಿಲ್ಲ ಎಂದರು.ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ,ಬಿ.ಪಿ.ವೆಂಕಟಮುನಿಯಪ್ಪ,ಜೆಡಿಎಸ್ ತಾಲೂಕು ಅಧ್ಯಕ್ಷ ಮುನಿರಾಜು,ಬಿಜೆಪಿ ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ,ಮುಖಂಡರಾದ ರಾಮಚಂದ್ರ, ಪಲ್ಲವಿಮಣಿ, ಶಿವಕುಮಾರ್, ಮಾರ್ಕಂಡೇಗೌಡ, ವೈ.ವಿ.ರಮೇಶ್, ದೇವರಾಜ್, ಮಂಜುನಾಥ್, ಚಿನ್ನಪ್ಪ, ಬಿ.ಸಿ.ಶ್ರೀನಿವಾಸಮೂರ್ತಿ, ಕರವೇ ಚಲಪತಿ, ವಿನೋದ್, ಮತ್ತಿತರರು ಇದ್ದರು.