ಸಚಿವ ಶಿವಾನಂದ ಪಾಟೇಲ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ, ರೈತರ ಆಕ್ರೋಶ

| Published : Dec 26 2023, 01:31 AM IST

ಸಾರಾಂಶ

ಸಾಲ ಮನ್ನ ಆಗುವ ನಿರೀಕ್ಷೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದ ಸಚಿವ ಶಿವಾನಂದ ಪಾಟೇಲ ಅವರ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ರೈತರ ಸಂಘ ಆಗ್ರಹಿಸಿವೆ. ಇಲ್ಲವೇ ಪ್ರತಿಭಟನೆ ನಡೆಸುವುದಾಗಿ ಹೇಳಿವೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಸಾಲ ಮನ್ನಾ ಆಗುವ ನಿರೀಕ್ಷೆಯಲ್ಲಿ ರೈತರು ಬರಗಾಲ ಬರಲಿ ಎಂದು ಕಾಯುತ್ತಾರೆ ಎಂಬ ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಹೇಳಿಕೆಗೆ ಬಿಜೆಪಿ ನಾಯಕರು ಹಾಗೂ ರೈತ ಮುಖಂಡರಿಂದ ಸೋಮವಾರ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಶಿವಾನಂದ ಪಾಟೀಲ್‌ ಕೂಡಲೇ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ. ಇದೊಂದು ರೈತ ವಿರೋಧಿ ಹೇಳಿಕೆ, ಸಚಿವರು ಇದಕ್ಕಾಗಿ ಕ್ಷಮೆ ಕೋರದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿ ಹಲವು ಮುಖಂಡರು ಎಚ್ಚರಿಸಿದ್ದಾರೆ. ಸಚಿವರ ಹೇಳಿಕೆ ಅವಿವೇಕತನದ ಪರಮಾವಧಿ. ತಕ್ಷಣ ಕ್ಷಮೆ ಕೇಳಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಒತ್ತಾಯಿಸಿದ್ದಾರೆ.

ಶಾಪ ತಟ್ಟುತ್ತೆ: ಶಿವಾನಂದ ಪಾಟೀಲರ ಹೇಳಿಕೆ ವಿರುದ್ಧ ಕಿಡಿಕಾರಿರುವ ಆರ್‌.ಅಶೋಕ್‌, ಈ ರೀತಿಯ ರೈತ ವಿರೋಧಿ ಹೇಳಿಕೆಯಿಂದಾಗಿ ರಾಜ್ಯ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ. ಶಿವಾನಂದ ಪಾಟೀಲರು ಹಿಂದೆಯೂ ಇದೇ ರೀತಿ ರೈತರ ಬಗ್ಗೆ ಹಗುರ ಹೇಳಿಕೆ ನೀಡಿದ್ದರು. ಹೆಚ್ಚಿನ ಪರಿಹಾರದ ಆಸೆಗೆ ಪ್ರೇಮ ಪ್ರಕರಣಗಳನ್ನೂ ರೈತರ ಆತ್ಮಹತ್ಯೆ ಎಂಬಂತೆ ಬಿಂಬಿಸಲಾಗುತ್ತದೆ ಎಂದಿದ್ದರು. ಆಗ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಸಚಿವರು ತಮ್ಮ ಹೇಳಿಕೆಗಾಗಿ ಕ್ಷಮೆ ಕೋರದಿದ್ದರೆ ಪಕ್ಷದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.ಸಚಿವರ ಹೇಳಿಕೆಯನ್ನು ಮಾಜಿ ಸಚಿವರಾದ ಸಿ.ಟಿ.ರವಿ ಮತ್ತು ಸುನಿಲ್‌ ಕುಮಾರ್ ಕೂಡ ಖಂಡಿಸಿದ್ದು, ಇದು ರೈತರಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿರೋದು ರೈತರ ಪರವಾದ ಸರ್ಕಾರವಲ್ಲ. ಬರಗಾಲಕ್ಕೆ ಸಂಬಂಧಿಸಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ರೈತರನ್ನು ಅಪಮಾನ ಮಾಡುವ ಕೆಲಸ ಮಾಡುತ್ತಲೇ ಬರುತ್ತಿದೆ ಎಂದು ಸುನಿಲ್‌ ಕುಮಾರ್ ಹೇಳಿದ್ದಾರೆ.

ಇನ್ನು ಹಿರಿಯರಾದ ಶಿವಾನಂದ ಪಾಟೀಲರ ಬಾಯಲ್ಲಿ ಇಂಥ ಮಾತು ಬಂದಿದ್ದು ಸರಿಯಲ್ಲ ಎಂದಿರುವ ಸಿ.ಟಿ.ರವಿ, ಪಿತ್ತ ನೆತ್ತಿಗೇರಿ ಅಹಂಕಾರದಿಂದ ಸ್ಥಿತಪ್ರಜ್ಞೆ ಕಳೆದುಕೊಂಡವರು ಮಾತ್ರ ಈ ರೀತಿಯ ಮಾತು ಆಡುತ್ತಾರೆ. ಶಿವಾನಂದ ಪಾಟೀಲರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಒಂದೋ ನೀವೇ ಅವರ ಮದ ಇಳಿಸಿ, ಇಲ್ಲಾ ಜನರೇ ನಿಮ್ಮ ಸರ್ಕಾರದ ಮದ ಇಳಿಸುತ್ತಾರೆ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ಡಿಸಿಸಿ ಬ್ಯಾಂಕ್‌ನವರಿಗಷ್ಟೇ ಖುಷಿ-ಯತ್ನಾಳ: ಶಿವಾನಂದ ಪಾಟೀಲರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಂತ್ರಿಯೊಬ್ಬರು ರೈತರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡಿರುವುದು ಸರಿ ಅಲ್ಲ ಎಂದರು. ರೈತರು ಯಾವತ್ತಿಗೂ ಬರ ಬರಲಿ ಎಂದು ಬಯಸಲ್ಲ, ಬರಗಾಲ ಬಂದರೆ ಡಿಸಿಸಿ ಬ್ಯಾಂಕ್‌ನವರಿಗೆ ಮಾತ್ರ ಖುಷಿಯಾಗುತ್ತದೆ. ಯಾಕೆಂದರೆ ಆಗ ರೈತರ ಹೆಸರಿನಲ್ಲಿ ಪಡೆದ ಸಾಲ ಮನ್ನಾ ಆಗುತ್ತದೆ ಎಂದು ಯತ್ನಾಳ ಅವರು ಡಿಸಿಸಿ ಬ್ಯಾಂಕ್‌ನೊಂದಿಗೆ ಗುರುತಿಸಿಕೊಂಡಿರುವ ಶಿವಾನಂದ ಪಾಟೀಲರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

-ಬಾಕ್ಸ್-ಓವರ್‌ ಸ್ಪೀಡ್‌ನಿಂದ ಆ್ಯಕ್ಸಿಡೆಂಟ್‌: ಜಾರಕಿಹೊಳಿ

ಬೆಳಗಾವಿ: ಒಮ್ಮೊಮ್ಮೆ ಗಾಡಿಗಳು ಓವರ್ ಸ್ಪೀಡ್ ಹೋಗುತ್ತವೆ. ಆಗ ಆ್ಯಕ್ಸಿಡೆಂಟ್‌ ಆಗುತ್ತವೆ. ಎಲ್ಲ ಪಕ್ಷಗಳಲ್ಲೂ ಇದು ಸಾಮಾನ್ಯ. ಶಿವಾನಂದ ಪಾಟೀಲರು ಏನೋ ಹೇಳಲು ಹೋಗಿದ್ದಾರೆ. ಒಮ್ಮೊಮ್ಮೆ ಈ ರೀತಿಯ ಎಡವಟ್ಟು ಆಗುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.ಶಿವಾನಂದ ಪಾಟೀಲರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬರಗಾಲ ಬರಲಿ ಎಂದು ಯಾರೂ ಬಯಸಲ್ಲ. ಬರಗಾಲ ಬಂದರೆ ರೈತರಷ್ಟೇ ಅಲ್ಲ, ಗ್ರಾಹಕರು, ವ್ಯಾಪಾರಿಗಳ ಮೇಲೂ ಅದರ ಪರಿಣಾಮ ಆಗುತ್ತದೆ ಎಂದರು.

---ಕೋಟ್‌ಬೇಜವಾಬ್ದಾರಿ ಹೇಳಿಕೆ

ಬರ ವಿಚಾರದಲ್ಲಿ ಶಿವನಾಂದ ಪಾಟೀಲ್‌ ಅವರು ಅತ್ಯಂತ ಬೇಜಾವಾಬ್ದಾರಿಯ ಮಾತು ಆಡಿದ್ದಾರೆ. ಉನ್ನತ ಸ್ಥಾನದಲ್ಲಿದ್ದವರು ಹೀಗೆ ಮಾತನಾಡಬಾರದು. ಮಳೆ ಬಂದು ಬೆಳೆ ಸಮೃದ್ಧವಾಗಿ ಬೆಳೆದರೆ ರೈತರು ಯಾರ ಬಳಿಯೂ ಕೈಚಾಚುವುದಿಲ್ಲ. ಸಚಿವ ಶಿವಾನಂದ ಪಾಟೀಲ್‌ ತಮ್ಮ ಹೇಳಿಕೆ ವಾಪಸ್‌ ಪಡೆದು ರೈತರ ಕ್ಷಮೆ ಕೇಳಬೇಕು.

- ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ--