ಸಾರಾಂಶ
ನವದೆಹಲಿ : ಕೆಲ ದಿನ ಹಿಂದಷ್ಟೇ ಕಾಂಗ್ರೆಸ್ ದೆಹಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅರವಿಂದರ್ ಸಿಂಗ್ ಲವ್ಲಿ ಅವರು ಶನಿವಾರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಗಾಯದ ಮೇಲೆ ಉಪ್ಪುಸುರಿದಂತಾಗಿದೆ.
ಲವ್ಲಿ ಅವರ ಜೊತೆಗೆ ದೆಹಲಿಯ ಮಾಜಿ ಸಚಿವ ರಾಜ್‌ಕುಮಾರ್ ಚೌಹಾಣ್ ಹಾಗೂ ಮಾಜಿ ಶಾಸಕ ನೀರಜ್ ಬಸೋಯಾ ಹಾಗೂ ನಸೀಬ್ ಸಿಂಗ್ ಸಹ ಬಿಜೆಪಿ ಸೇರಿದ್ದಾರೆ.
ಲವ್ಲಿ 2018ರಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಒಂದೇ ವರ್ಷದಲ್ಲಿ ಕಾಂಗ್ರೆಸ್‌ಗೆ ಮರಳಿದ್ದರು. ಅಷ್ಟರಲ್ಲಿ ಮತ್ತೆ ಬಿಜೆಪಿ ಸೇರಿದ್ದಾರೆ. ಶನಿವಾರ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಸಮ್ಮುಖದಲ್ಲಿ ಎಲ್ಲರೂ ಬಿಜೆಪಿ ಸೇರಿದರು.
ಮೋದಿ ನಾಯಕತ್ವಕ್ಕೆಲವ್ಲಿ ಶ್ಲಾಘನೆ: ಈ ಬಳಿಕ ಮಾತನಾಡಿದ ಲವ್ಲಿ,‘ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈ ಬಾರಿಯೂ ಅತಿ ಹೆಚ್ಚು ಬಹುಮತದಿಂದ ಗೆಲುವು ಸಾಧಿಸುತ್ತದೆ. ಕಾಂಗ್ರೆಸ್‌ನಲ್ಲಿ ಕಡೆಗಣಿಸಲ್ಪಟ್ಟಿದ್ದ ನಮ್ಮನ್ನು ಬಿಜೆಪಿ ಸೇರಿಸಿಕೊಂಡಿದ್ದಕ್ಕೆ ಮೋದಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ’ ಎಂದರು.
ಲವ್ಲಿ ಕಾಂಗ್ರೆಸ್ ತೊರೆಯಲು ಮೂಲ ಕಾರಣ ಲೋಕಸಭೆ ಚುನಾವಣೆ ಅಂಗವಾಗಿ ಕಾಂಗ್ರೆಸ್ ಪಕ್ಷ ಆಪ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಮತ್ತು ಕನ್ಹಯ್ಯ ಕುಮಾರ್, ಉದಿತ್ ರಾಜ್‌ರಂಥವರಿಗೆ ದೆಹಲಿಯಲ್ಲಿ ಟಿಕೆಟ್ ನೀಡಿದ್ದು ಎನ್ನಲಾಗಿದೆ.