ಗಾಂಧೀಜಿ ಚರ್ಚಿತ ವಿಷಯವಲ್ಲ, ಧ್ಯಾನಿಸಬೇಕಾದ ವ್ಯಕ್ತಿ : ಸಚಿವ ಎಚ್‌. ಕೆ. ಪಾಟೀಲ್

| N/A | Published : Jan 31 2025, 01:30 AM IST / Updated: Jan 31 2025, 04:29 AM IST

ಸಾರಾಂಶ

ದೇಶದಲ್ಲಿ ಪ್ರಸ್ತುತ ಗಾಂಧೀ ಭಾರತ ಒಂದು ಕಡೆ, ಗೋಡ್ಸೆ ಭಾರತ ಇನ್ನೊಂದು ಕಡೆಯಿದ್ದು, ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

 ಬೆಂಗಳೂರು : ದೇಶದಲ್ಲಿ ಪ್ರಸ್ತುತ ಗಾಂಧೀ ಭಾರತ ಒಂದು ಕಡೆ, ಗೋಡ್ಸೆ ಭಾರತ ಇನ್ನೊಂದು ಕಡೆಯಿದ್ದು, ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ 75ನೇ ವರ್ಷಾಚರಣೆ ಮತ್ತು ಸರ್ವೋದಯ ದಿನಾಚರಣೆಗೆ‌ ಚಾಲನೆ, ‘ಮಹಾತ್ಮಾ ಗಾಂಧಿ ಖಾಯಂ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ’ ಮತ್ತು ‘ಗಾಂಧಿ ವಿಚಾರಧಾರೆಗಳ ಹಾಗೂ ಮಹಾ ಮಾನವ ಲಿಯೋ ಟಾಲ್‌ಸ್ಟಾಯ್ ಕೃತಿಗಳ ಬಿಡುಗಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿಯನ್ನು ತಿಳಿಯದೇ ಮೌಢ್ಯತೆಯಿಂದ ಅವರ ಬಗ್ಗೆ ಲಘುವಾಗಿ ಮಾತನಾಡಲಾಗುತ್ತಿದೆ. ಗಾಂಧೀಜಿ ಚರ್ಚಿಸುವ ವಿಷಯ, ವ್ಯಕ್ತಿ ಅಲ್ಲ. ಭಾರತೀಯರು ಧ್ಯಾನಿಸಬೇಕಾದ ವ್ಯಕ್ತಿ. ಅವರು ದೇಶದ ಆತ್ಮವಾದರೆ, ಜಗತ್ತಿಗೆ ಮಹಾತ್ಮರಾಗಿದ್ದಾರೆ. ಅವರು ಸರ್ವಕಾಲಕ್ಕೂ ಜಾಗತಿಕ ಮಟ್ಟದಲ್ಲಿ ಯುವಕರಿಗೆ ರೋಲ್‌ ಮಾಡೆಲ್‌ ಆಗಿರಲಿದ್ದಾರೆ ಎಂದರು.

ಬೆಳಗಾವಿಯಲ್ಲಿ ಗಾಂಧೀಜಿ ನೇತೃತ್ವದಲ್ಲಿ 1924ರ ಡಿಸೆಂಬರ್‌ 26, 27ರಂದು ಎಐಸಿಸಿ ಅಧಿವೇಶನದಲ್ಲಿ ಜನಸಾಮಾನ್ಯರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವುದು, ಚರಕದ ಮೂಲಕ ಆರ್ಥಿಕ ಸಬಲತೆ, ಸಹಬಾಳ್ವೆ ಸೇರಿ ಹಲವು ವಿಚಾರಗಳ ಬಗ್ಗೆ ಯೋಜನೆ, ಯೋಚನೆ ಹಾಕಿಕೊಳ್ಳಲಾಗಿತ್ತು. ಜೊತೆಗೆ ಕನ್ನಡ ನಾಡು ಒಂದಾಗಬೇಕು ಎಂಬ ಏಕೀಕರಣ ಹೋರಾಟದ ಬೀಜಾಂಕುರ ಕೂಡ ಅದೇ ಸಭೆಯಲ್ಲಿ ಆಗಿತ್ತು. ಈ ಐತಿಹಾಸಿಕ ಸಭೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ‌ ನಾಡೋಜ ‌ವೂಡೆ ಪಿ.ಕೃಷ್ಣ ಮಾತನಾಡಿ, ಗಾಂಧೀಜಿ ಕಾಯಾ, ವಾಚಾ, ಮನಸ್ಸಿನಲ್ಲಿ ಒಂದೇ ಆಗಿದ್ದರು. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಬಂದಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಜನತೆಯಿಂದ ಸ್ವೀಕರಿಸಿದ ಒಂದೊಂದು ಪೈಸೆಗೂ ಸಮರ್ಪಕವಾದ ಲೆಕ್ಕ ಇಟ್ಟುಕೊಂಡಿದ್ದ ಅವರ ಬದುಕಿನ ಪ್ರತಿ ಪುಟವೂ ನಮಗೆ ಪಾಠ ಎಂದು ಹೇಳಿದರು.

ಸಾಮಾನ್ಯರಾಗಿದ್ದ ಗಾಂಧೀಜಿ ಎಲ್ಲವನ್ನೂ ಮೀರಿ ಸತ್ಯವನ್ನು ಸಂಶೋಧಿಸಿದವರು.‌ ಮೂಲಭೂತವಾದ, ಹಿಂಸೆ, ಕೋಮುವಾದಿಗಳ ವಿರುದ್ಧ ಗಾಂಧೀಜಿಯವರು ನಿಂತಿದ್ದರು.‌ ಅವುಗಳ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಗಾಂಧೀಜಿಯವರ ತತ್ವಗಳು ಸರಳ.‌ ಅವುಗಳನ್ನು‌ ಅನುಸರಣೆ ಮಾಡಿದಲ್ಲಿ ನಮ್ಮ ಜೀವನ ಪರಿವರ್ತನೆ ಆಗುತ್ತದೆ ಎಂದು ವೂಡೆ ಹೇಳಿದರು.

ಭಾರತೀಯ ವಿದ್ಯಾಭವನ ನಿರ್ದೇಶಕಿ ಪ್ರೊ.ಮೀನಾ ದೇಶಪಾಂಡೆ ಅವರು ಗಾಂಧಿ ಮತ್ತು ಸರ್ವೋದಯ ದತ್ತಿ ಉಪನ್ಯಾಸ ನೀಡಿದರು. ಭಾರತೀಯ ವಿದ್ಯಾಭವನದ ಎಚ್.ಎನ್.ಸುರೇಶ್, ಇತಿಹಾಸ ಪ್ರಾಧ್ಯಾಪಕ ಡಾ.ಬಸವರಾಜ ಎನ್. ಅಕ್ಕಿ ಸೇರಿ ಇತರರಿದ್ದರು.