‘ಮೇಕೆದಾಟು’ಗೆ ಡಿಎಂಕೆ ಸಮ್ಮತಿ ಪಡೆದು ಬನ್ನಿ : ಎಚ್‌ಡಿಕೆ

| Published : Apr 23 2024, 12:45 AM IST / Updated: Apr 23 2024, 04:49 AM IST

‘ಮೇಕೆದಾಟು’ಗೆ ಡಿಎಂಕೆ ಸಮ್ಮತಿ ಪಡೆದು ಬನ್ನಿ : ಎಚ್‌ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳುನಾಡಿನಲ್ಲಿ ಕಾಂಗ್ರೆಸ್‌ ಮೈತ್ರಿ ಪಕ್ಷ ಡಿಎಂಕೆಯವರು ಮೇಕೆದಾಟು ಅಣೆಕಟ್ಟು ಕಟ್ಟಲು ಬಿಡಲ್ಲ ಎಂದಿದ್ದಾರೆ, ಮೊದಲು ಡಿ.ಎಂ.ಕೆ ಯಿಂದ ಅನುಮತಿ ಪಡೆದುಕೊಂಡು ಬಂದರೆ ಮೋದಿಯವರ ಹತ್ತೇ ಸೆಕೆಂಡ್‌ಗಳಲ್ಲಿ ಅನುಮತಿ ಕೊಡಿಸುತ್ತೇವೆ ಎನ್ನುತ್ತಾರೆ ಎಚ್ಡಿಕೆ

 ಮುಳಬಾಗಿಲು :  ಖಜಾನೆಯಲ್ಲಿದ್ದ ಹಣವನ್ನು ಖಾಲಿ ಮಾಡಿ ಇದೀಗ ಖಾಲಿ ಚೆಂಬು ಹಿಡಿದು ಬೀದಿ ಬೀದಿಗಳಲ್ಲಿ ಓಡಾಡುವ ಜೊತೆಗೆ ದೊಡ್ಡ ಮಟ್ಟದಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಭಿಕ್ಷುಕರಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು. 

ಮುಳಬಾಗಿಲಿನಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರ ಸಭೆಯ ಬೃಹತ್ ರೋಡ್ ಶೋ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್‌ನವರು ಗ್ಯಾರಂಟಿಗಳ ವಿಚಾರದಲ್ಲಿ ಮತ ಕೇಳುತ್ತಿದ್ದಾರೆ, ಆದರೆ ಆ ಗ್ಯಾರಂಟಿಗಳ ವಾಸ್ತವಾಂಶ ಜನರಿಗೆ ತಿಳಿಸುತ್ತಿಲ್ಲ, ಹಿಂದಿನ ಸರ್ಕಾರದ ಯೋಜನೆಗಳೆಲ್ಲ ರದ್ದಾಗಿವೆ, ಅಷ್ಟೇ ಅಲ್ಲದೆ ಜನರ ಮೇಲೆ ಹೆಚ್ಚಿನ ತೆರಿಗೆಯ ಹೊರೆ ಹೇರಿರುವುದೇ ಈ ಸರ್ಕಾರದ ಸಾಧನೆ ಎಂದರು.

ಡಿಎಂಕೆ ಅನುಮತಿ ಪಡೆಯಲಿ

ಚುನಾವಣಾ ಪೂರ್ವದಲ್ಲಿ ಕನಕಪುರದ ಮಹಾನ್ ನಾಯಕರು ಅಧಿಕಾರ ಕೊಡಿ ಮೇಕೆದಾಟು ಯೋಜನೆ ಮಾಡುತ್ತೇವೆ ಎಂದು ಪಾದಯಾತ್ರೆ ಮಾಡಿದ ಮಹಾನುಭಾವರು ಇದೀಗ ನರೇಂದ್ರ ಮೋದಿಯವರಿಂದ ಅನುಮತಿ ಕೊಡಿಸಿ ಯೋಜನೆ ಪ್ರಾರಂಭ ಮಾಡುತ್ತೇವೆ ಎನ್ನುತ್ತಿದ್ದಾರೆ, ಆದರೆ ನಿಮ್ಮಗೆ ಪಕ್ಷದ ತಮಿಳುನಾಡಿನ ಮೈತ್ರಿ ಪಕ್ಷ ಡಿಎಂಕೆಯವರು ಯಾವುದೇ ಕಾರಣಕ್ಕೂ ಮೇಕೆದಾಟು ಅಣೆಕಟ್ಟು ಕಟ್ಟಲು ಬಿಡಲ್ಲ ಎಂದಿದ್ದಾರೆ, 

ಮೊದಲು ಡಿ.ಎಂ.ಕೆ ಯಿಂದ ಅನುಮತಿ ಪಡೆದುಕೊಂಡು ಬನ್ನಿ ನಂತರ ನಾವು ಮೋದಿಯವರ ಬಳಿ ಕೇವಲ ಹತ್ತೇ ಸೆಕೆಂಡ್‌ಗಳಲ್ಲಿ ಅನುಮತಿ ಕೊಡಿಸುತ್ತೇವೆ ಎಂದರು. ಜಿಲ್ಲೆಗೆ ಯರಗೋಳ್ ಯೋಜನೆಯನ್ನು ಕೊಟ್ಟಿದ್ದು ನಾನು ಮುಖ್ಯಮಂತ್ರಿಯಾಗಿದ್ದಾಗ. ನಮ್ಮ ಹಳೇ ಸ್ನೇಹಿತರಾದ ಶ್ರೀನಿವಾಸಗೌಡರು ಹೆಚ್ಚಿನ ಕಾಳಜಿ ವಹಿಸಿದ್ದಾರೆ, ಆ ಯೋಜನೆಯ ಉದ್ಘಾಟನೆಗೆ ಬಂದಿದ್ದ ಸಿದ್ದರಾಮಯ್ಯ ನವರು ನಾವೇ ಎಲ್ಲಾ ಮಾಡಿದ್ದು ಎಂದು ಭಾಷಣ ಮಾಡಿ ಹೋದರು, ಆದರೆ ಯೋಜನೆಗೆ ಶಕ್ತಿ ಕೊಟ್ಟ ನಮ್ಮನ್ನು ಯಾರನ್ನೂ ಸ್ಮರಿಸಲೇ ಇಲ್ಲ ಎಂದರು.

ಮಲ್ಲೇಶ್‌ಬಾಬು ಗೆದ್ದರೆ ನೀರಾವರಿ

ಕೋಲಾರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯನ್ನು ಲೋಕಸಭೆಗೆ ಕಳುಹಿಸುವ ಕೆಲಸ ನೀವು ಮಾಡಿದರೆ ಜಿಲ್ಲೆಗೆ ಶಾಶ್ವತ ಶುದ್ದ ನೀರಿನ ಯೋಜನೆಯನ್ನು ತಂದೇ ತರುತ್ತೇವೆ. ಜಿಲ್ಲೆಯಲ್ಲಿ ಒಬ್ಬ ಮಹಾನ್ ನಾಯಕರಿದ್ದು ಅವರು ನಮ್ಮ ಪಕ್ಷದ ಶಾಸಕ ವೆಂಕಟಶಿವಾರೆಡ್ಡಿಯವರ ಮೇಲಿನ ಕೋಪವನ್ನು ಇಡೀ ಒಕ್ಕಲಿಗ ಸಮುದಾಯವನ್ನು ನಿಂದಿಸುವ ಮೂಲಕ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಅವರಿಗೆ ಈಗಾಗಲೇ ಜನ ಪಾಠ ಕಲಿಸಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು.

ಜಾತಿ ಹೆಸರಿನಲ್ಲಿ ರಾಜಕೀಯ

ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಟಿದ್ದು ಜನರು ಭಯದ ಭೀತಿಯಲ್ಲಿ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ, ರಾಜ್ಯದಲ್ಲಿ ಬರ ತಾಂಡವಾಡುತ್ತಿದ್ದರೂ ಅದರ ಬಗ್ಗೆ ಗಮನ ಹರಿಸದ ರಾಜ್ಯ ಸರ್ಕಾರ ಕೇವಲ ಜಾತಿ ಜಾತಿಗಳ ಮಧ್ಯೆ ಎತ್ತಿಕಟ್ಟುವುದು ಮತ್ತು ಜಾತಿಗಳ ಹೆಸರಿನಲ್ಲಿ ರಾಜಕೀಯ ಮಾಡಿಕೊಳ್ಳುತ್ತಿದೆ ಎಂದರು.ಭ್ರಷ್ಟ ಕಾಂಗ್ರೆಸ್‌ಗೆ ಪಾಠ ಕಲಿಸಿ

ಶಾಸಕ ಸಮೃದ್ದಿ ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಅಸ್ತಿತ್ವದಲ್ಲಿದೆ, ಶಾಸಕರುಗಳು ನಾವು ಕ್ಷೇತ್ರದ ಅಭಿವೃದ್ದಿಗೆ ಅನುದಾನ ಕೇಳಿದರೆ ಲಕ್ಷಗಳ ಲೆಕ್ಕದಲ್ಲಿ ಕೊಡುತ್ತಿದ್ದಾರೆ, ಅವರು ಕೊಡುವ ಅನುದಾನ ಯಾವುದೇ ಒಂದು ಅಭಿವೃದ್ದಿ ಕೆಲಸ ಮಾಡಲು ಆಗುತ್ತಿಲ್ಲ, ಈ ಸರ್ಕಾರದಲ್ಲಿ ಶಾಸಕರು ಉಸಿರುಗಟ್ಟಿದ ಪರಿಸ್ಥಿತಿಯಲ್ಲಿದ್ದೇವೆ, ಸರ್ಕಾರಿ ಕಛೇರಿಗಳಲ್ಲಂತೂ ಭ್ರಷ್ಟಾಚಾರ ತಾಂಡವಾಡುತ್ತಿದೆ

 ಇಂತಹ ಭ್ರಷ್ಟ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕಿದೆ ಎಂದರು.ಸಂಸದ ಎಸ್.ಮುನಿಸ್ವಾಮಿ, ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಬಿ.ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಶಾಸಕರಾದ ವೈ.ಸಂಪಂಗಿ, ವರ್ತೂರು ಪ್ರಕಾಶ್, ಮಂಜುನಾಥಗೌಡ, ಜೆ.ಕೆ.ಕೃಷ್ಣಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮುಖಂಡರಾದ ಸೀಗೇಹಳ್ಳಿ ಸುಂದರ್, ಸೀಕಲ್ ರಾಮಚಂದ್ರೇಗೌಡ, ಶಿಡ್ಲಘಟ್ಟ ಶಾಸಕ ರವಿಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಮುಖಂಡರಾದ ಹೂಡಿ ವಿಜಯ್ ಕುಮಾರ್, ಬಿ.ಪಿ.ವೆಂಕಟಮುನಿಯಪ್ಪ, ಜಿ.ಇ.ರಾಮೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಮುಖಂಡರಾದ ಕೆ.ವಿ.ಶಂಕರಪ್ಪ, ಸಿಎಂಆರ್ ಶ್ರೀನಾಥ್, ಮಾಗೇರಿ ನಾರಾಯಣಸ್ವಾಮಿ, ಎಂ.ಕೆ.ವಾಸುದೇವ್ ಇದ್ದರು.