ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ. 20 ಲಾಭಾಂಶ ನೀಡಬೇಕು : ವ್ಯಾಪಾರಿಗಳ ಸಂಘ

| N/A | Published : Apr 05 2025, 01:47 AM IST / Updated: Apr 05 2025, 04:16 AM IST

ಸಾರಾಂಶ

ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ. 20 ಲಾಭಾಂಶ ನೀಡಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘ ಸರ್ಕಾರಕ್ಕೆ ಆಗ್ರಹಿಸಿದೆ.

 ಬೆಂಗಳೂರು :  ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ. 20 ಲಾಭಾಂಶ ನೀಡಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘ ಸರ್ಕಾರಕ್ಕೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಲೋಕೇಶ್‌, ಸನ್ನದುದಾರರ ಹಿತದೃಷ್ಟಿಯಿಂದ ಲಾಭಾಂಶ ಪ್ರಮಾಣವನ್ನು ಹೆಚ್ಚಿಸಲು ಕ್ರಮವಹಿಸಬೇಕು. ಇತ್ತೀಚೆಗೆ ಸನ್ನದುಗಳ ಸಂಖ್ಯೆ ಹೆಚ್ಚಳವಾಗಿದೆ ವಿನಃ ಮದ್ಯ ಮಾರಾಟ ಪ್ರಮಾಣ ವೃದ್ಧಿಯಾಗಿಲ್ಲ. ಇದನ್ನು ಗಮನಿಸಿ ಯಾವುದೇ ಕಾರಣಕ್ಕೂ ಸರ್ಕಾರ ಸನ್ನದು ಶುಲ್ಕವನ್ನು ಹೆಚ್ಚಳ ಮಾಡಬಾರದು ಹಾಗೂ ಸನ್ನದುಗಳನ್ನು ಹರಾಜು ಪ್ರಕ್ರಿಯೆ ಮಾಡಬಾರದು ಎಂದು ಒತ್ತಾಯಿಸಿದರು.

ಸಿ.ಎಲ್‌.-2ಗಳಲ್ಲಿ ಮದ್ಯಪಾನ ಮಾಡಲು ಅವಕಾಶ ಕೊಡಬೇಕು. ಮಧ್ಯಮ ವರ್ಗದವರಿಗೆ ಹೋಟೆಲ್‌ಗಳಿಗೆ ತೆರಳಿ ಸ್ನ್ಯಾಕ್ಸ್‌, ಆಹಾರ ಸೇವಿಸುತ್ತ ಮದ್ಯ ಸೇವಿಸುವುದು ದುಬಾರಿಯಾಗಿದೆ. ಹೀಗಾಗಿ ಮದ್ಯದಂಗಡಿಯ ಆವರಣದಲ್ಲಿ ಮೊದಲೇ ಸಿದ್ಧಪಡಿಸಿಟ್ಟ (ಪ್ಯಾಕ್ಡ್‌ ಸ್ನ್ಯಾಕ್ಸ್‌) ಸೇವಿಸಲು ಅವಕಾಶ ಕೊಡಲು ಸನ್ನದು ಷರತ್ತು ಸಡಿಲಿಸಬೇಕು. ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗುವ ಸನ್ನದುದಾರರಿಗೆ ಹೆಚ್ಚುವರಿ ಶುಲ್ಕ ವಿಧಿಸುವುದರಿಂದ ಸರ್ಕಾರಕ್ಕೂ ಆದಾಯ ಬರಲಿದೆ ಎಂದು ಹೇಳಿದರು.

ಮಿಲಿಟರಿ ಕ್ಯಾಂಟೀನ್‌ ಸ್ಟೋರ್‌, ಡ್ಯೂಟಿ ಫ್ರೀ ಹೆಸರಿನಲ್ಲಿ ಹೊರಗೆ ಬರುವ ನಕಲಿ ಮದ್ಯ ಮಾರಾಟವನ್ನು ತಡೆಯಬೇಕು. ಗೋವಾ ರಾಜ್ಯದಿಂದ ಕಡಿಮೆ ದರದ ಮದ್ಯ ರಾಜ್ಯಕ್ಕೆ ಅಕ್ರಮವಾಗಿ ಪ್ರವೇಶಿಸುವುದನ್ನು ತಡೆಯಬೇಕು. ಲೈಸನ್ಸ್‌ ರಹಿತವಾಗಿ ಮದ್ಯ ಮಾರಾಟ ಮಾಡುವ ಡಾಬಾ, ಮಾಂಸಾಹಾರಿ ಹೋಟೆಲ್‌, ಹಳ್ಳಿಗಳಲ್ಲಿ ಮದ್ಯ ಮಾರಾಟವನ್ನು ತಡೆಯಲು ಕಠಿಣ ಕಾನೂನು ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದರು.

ಖಜಾಂಚಿ ಲಕ್ಷ್ಮಣಮೂರ್ತಿ, ಪ್ರಧಾನ ಕಾರ್ಯದರ್ಶಿ ಕರುಣಾಕರ ಹೆಗ್ಡೆ ಇದ್ದರು.