ನಮ್ಮ ಅವಧಿಯಲ್ಲೇ ಮೇಕೆದಾಟು ಯೋಜನೆ ಆರಂಭ: ಡಿಕೆಶಿ

| Published : Apr 18 2024, 02:24 AM IST / Updated: Apr 18 2024, 04:35 AM IST

ಸಾರಾಂಶ

  ರಾಹುಲ್ ಗಾಂಧಿ  ಕಾಲ್ಗುಣ ಬಹಳ ಶಕ್ತಿ ಶಾಲಿಯಾಗಿದೆ. ನಿಮ್ಮ ಸಮಸ್ಯೆಗಳನ್ನ ಕೇಳಲು ಅಂದು ಪಾದಯಾತ್ರೆ ಮಾಡಿದ್ದರು. ಮಂಡ್ಯ ಗೆದ್ರೆ ಇಂಡಿಯಾ ಗೆಲ್ಲುತ್ತೇನೆ ಎಂಬ ವಿಶ್ವಾಸದೊಂದಿಗೆ ಇಂದು ಇಲ್ಲಿಗೆ ಬಂದಿದ್ದಾರೆ.

 ಮಂಡ್ಯ:  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆಗೆ ಚಾಲನೆ ನೀಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸದಿಂದ ನುಡಿದರು.

ಐದು ವರ್ಷದೊಳಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವುದಾಗಿ ನಿನ್ನೆಯಷ್ಟೇ ಹೇಳಿದ್ದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರ ಕಾಲೆಳೆದ ಡಿ.ಕೆ.ಶಿವಕುಮಾರ್, ನಿಮ್ಮನ್ನು ಸಿಎಂ ಮಾಡಿದ್ದು ಇದೇ ಮಂಡ್ಯ ಜನರು. ಈಗ ಅವರ ಕಿವಿಗೆ ಹೂ ಇಡಲು ಬಂದಿದ್ದಿರಾ ಎಂದು ವ್ಯಂಗ್ಯವಾಡಿದರು.

ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಪ್ರಜಾಧ್ವನಿ-೨ ಸಮಾವೇಶ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಅವರ ಪರ ಮತ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ದೇವೇಗೌಡರು ಕಾಂಗ್ರೆಸ್ ಪಕ್ಷದಿಂದ ಪ್ರಧಾನಿ ಆದರು. ಅವರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸಲಿಲ್ಲ. ಬಿಜೆಪಿ ಡಬ್ಬಲ್ ಇಂಜಿನ್ ಸರ್ಕಾರ ಇದ್ದರೂ ಮೇಕೆದಾಟು ಯೋಜನೆ ಅವಕಾಶ ಕೊಡಲಿಲ್ಲ. ನಾನು ಮಾತು ಕೊಡುತ್ತಿದ್ದೇನೆ. ನಮ್ಮ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಆರಂಭ ಮಾಡುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

2023 ರ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಎಷ್ಟು ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ್ದರೋ ಅಷ್ಟು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಅವರ ಕಾಲ್ಗುಣ ಬಹಳ ಶಕ್ತಿಶಾಲಿಯಾಗಿದೆ. ನಿಮ್ಮ ಸಮಸ್ಯೆಗಳನ್ನ ಕೇಳಲು ಅಂದು ಪಾದಯಾತ್ರೆ ಮಾಡಿದ್ದರು. ಮಂಡ್ಯ ಗೆದ್ರೆ ಇಂಡಿಯಾ ಗೆಲ್ಲುತ್ತೇನೆ ಎಂಬ ವಿಶ್ವಾಸದೊಂದಿಗೆ ಇಂದು ಇಲ್ಲಿಗೆ ಬಂದಿದ್ದಾರೆ ಎಂದರು.

ನಾನು ಯಾವ ಅಭ್ಯರ್ಥಿ ಬಗ್ಗೆಯೂ ಮಾತನಾಡುವುದಿಲ್ಲ. ಅವರು ಮಂಡ್ಯ ಜಿಲ್ಲೆಗೆ ಏನೂ ಕೊಟ್ಟಿಲ್ಲ. ಇವತ್ತು ಭಾರತಕ್ಕೆ ರಾಹುಲ್ ಗಾಂಧಿ ನ್ಯಾಯ ಯಾತ್ರೆ ಮಾಡಿದ್ದಾರೆ. ಇವತ್ತು ಚಂದ್ರು ಅಲ್ಲ ಅಭ್ಯರ್ಥಿ, ಡಿಕೆಶಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅಭ್ಯರ್ಥಿ. ನೀವು ಪಕ್ಷದ ಮೇಲೆ ವಿಶ್ವಾಸವಿಟ್ಟು ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದರು.

ಗ್ಯಾರಂಟಿ ಯೋಜನೆ ತಾತ್ಕಾಲಿಕ ಎಂಬ ವಿಜಯೇಂದ್ರ ಹೇಳಿಕೆ ವಿರುದ್ಧ ಕಿಡಿಕಾರಿದ ಡಿಕೆಶಿ, ನಾನು ಭರವಸೆ ಕೊಡುತ್ತಿದ್ದೇನೆ. ಯಾವ ಗ್ಯಾರಂಟಿ ಯೋಜನೆಗಳನ್ನೂ ನಿಲ್ಲಿಸುವುದಿಲ್ಲ. ಚುನಾವಣೆಯ ನಂತರವೂ ಅವು ಮುಂದುವರೆಯಲಿವೆ. ಇದು ಕಾಂಗ್ರೆಸ್ ಶಕ್ತಿ. ಜನರ ಶಕ್ತಿ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಪುನರುಚ್ಛರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಶ್ರೀನಿವಾಸ್ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಸಚಿವರಾದ ಎಚ್.ಸಿ.ಮಹದೇವಪ್ಪ, ಎನ್.ಚಲುವರಾಯಸ್ವಾಮಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಸೊರಕೆ, ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು, ರೋಜಿಜಾನ್, ಶಾಸಕರಾದ ಪಿ.ರವಿಕುಮಾರ್, ಪಿ.ಎಂ.ನರೇಂದ್ರಸ್ವಾಮಿ, ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮರಿತಿಬ್ಬೇಗೌಡ ಮತ್ತಿತರರಿದ್ದರು.