ಸಾರಾಂಶ
ಗುಂಡ್ಲುಪೇಟೆಯ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಂಘದ ಸುದ್ದಿಗೋಷ್ಠಿ । ನೂತನ ಜಿಲ್ಲಾ ಸಮಿತಿಯ ರಚನೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ ಎಂದು ರೈತಸಂಘದ ರಾಜ್ಯ ಕಾರ್ಯದರ್ಶಿ ಡಾ.ಗುರುಪ್ರಸಾದ್ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ರೈತ ಸಂಘದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿರುವ ಕೆಲ ಸೋಲಾರ್ ಫ್ಲಾಂಟ್‌ಗೆ ಸಹಭಾಗೀದಾರ ಹಾಗೂ ಮಾಲೀಕರಾಗಿದ್ದು, ಯುನಿಟ್ ವಿದ್ಯುತ್‌ಗೆ 7. 50 ರು. ಇದ್ದರೂ 12.50 ರು. ಹೆಚ್ಚಿಸಿ ವಿದ್ಯುತ್ ಖರೀದಿಸಿದ್ದಾರೆ ಎಂಬ ಗುಮಾನಿ ಇದೆ ಎಂದರು. ರಾಜ್ಯದಲ್ಲಿ ವಿದ್ಯುತ್ ಕೃತಕ ಅಭಾವ ಸೃಷ್ಟಿಸಿ ಹಣ ಮಾಡಲು ರಾಜಕೀಯ ತಂತ್ರಗಾರಿಕೆ ನಡೆಸಿದ್ದಾರೆ. ಅಲ್ಲದೆ , ರೈತರಿಗೆ ಸೋಲಾರ್ ಫ್ಲಾಂಟ್ ಮಾಡಲು ಅವಕಾಶ ಕೊಡುತ್ತಿಲ್ಲ. ರಾಜ್ಯದಲ್ಲಿ ನಿರಂತರ ಜ್ಯೋತಿಗೂ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಇಲ್ಲದಿದ್ದಲ್ಲಿ ದೀಪಾವಳಿ ಹಬ್ಬದ ಬಳಿಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಖಂಡನೆ:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರ ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ಗುಂಡು ಹಾರಿಸಿರುವುದನ್ನು ರೈತಸಂಘ ಖಂಡಿಸುತ್ತದೆ. ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದಾರೆ ಎಂದು ಅರಣ್ಯ ಇಲಾಖೆ ಹೇಳಿದೆ. ಆದರೆ, ಆ ವೇಳೆಯಲ್ಲಿ ಅರಣ್ಯ ಸಿಬ್ಬಂದಿ ಅಲ್ಲಿಗೇಕೆ ಹೋಗಿದ್ದರು. ಕಳ್ಳತನಕ್ಕೆ ಹೋಗಿದ್ದ ಅನ್ನೋಕೆ ಸಾಕ್ಷಿ ಇದೆಯಾ? ಎಂದು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.ರೈತರು ಜಮೀನಿನಲ್ಲಿ ಬೆಳೆದ ತೇಗದ ಮರ ಕಟಿಂಗ್ ಹಾಗೂ ಸಾಗಿಸಲು ಪ್ರತಿ ಹಂತದಲ್ಲೂ ಅರಣ್ಯ ಇಲಾಖೆ ಅಧಿಕಾರಿಗಳು ಹಣ ಪಡೆಯುತ್ತಿದ್ದಾರೆ. ಇದು ನಿಲ್ಲಬೇಕು ಇಲ್ಲದಿದ್ದಲ್ಲಿ ರೈತಸಂಘ ಹೋರಾಟ ನಡೆಸಲಿದೆ ಎಂದು ಅರಣ್ಯ ಇಲಾಖೆಗೆ ರೈತಸಂಘದ ರಾಜ್ಯ ಕಾರ್ಯದರ್ಶಿ ಡಾ.ಗುರುಪ್ರಸಾದ್ ಎಚ್ಚರಿಸಿದರು.
ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ,ಅರಣ್ಯದಲ್ಲಿ ಗುಂಡಿಗೆ ಯುವ ಬಲಿ ಪ್ರಕರಣ.ಅಕ್ರಮ ಗಣಿಗಾರಿಕೆ,ಕಾಡುಪ್ರಾಣಿಗಳ ಹಾವಳಿ ಜೊತೆ ಕಾಡು ಪ್ರಾಣಿಗಳು ಬಲಿಯಾಗುತ್ತಿರುವ ಬಗ್ಗೆ ಜಿಲ್ಲಾಡಳಿತ ಸಭೆ ಕರೆದು ಚರ್ಚಿಸಬೇಕು ಎಂದು ಒತ್ತಾಯಿಸಿದರು.ರೈತಸಂಘದ ನೂತನ ಅಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಮಾತನಾಡಿ, ರಾಂಪುರ ಸಾಕಾನೆ ಶಿಬಿರದಲ್ಲಿ ದೊಡ್ಡ ಗಾತ್ರದ ಆನೆ ಸಾವನ್ನಪ್ಪಿದೆ. ಈ ಆನೆಗೆ ಆಹಾರ ಕೊರತೆ ಹಾಗೂ ಆನೆ ಪಳಗಿಸುವಾಗ ನಿತ್ರಾಣಗೊಂಡು ಸಾವನ್ನಪ್ಪಿದೆ. ಈ ಬಗ್ಗೆ ಅರಣ್ಯ ಇಲಾಖೆ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಬಂಡೀಪುರ ಅರಣ್ಯದಲ್ಲಿ ರೈತರು ಹಾಗು ಕಾಡು ಪ್ರಾಣಿಗಳು ಒಂದೆರಡು ತಿಂಗಳಲ್ಲಿ ನಿರಂತವಾಗಿ ಸಾವನ್ನಪ್ಪಿದ ಘಟನೆ ಜರುಗಿವೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಸಚಿವರು, ಶಾಸಕರಿಗೂ ದೂರು ನೀಡಲಾಗಿದೆ ಎಂದರು.
ರಸ್ತೆ ಅಭಿವೃದ್ಧಿ ಪಡಿಸಲಿ:ತಾಲೂಕಿನಲ್ಲಿ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಜನರಿಗೆ ಸಂಚಾರಕ್ಕೆ ತೊಂದರೆಯಾಗಿದೆ. ಶಾಸಕರು ರಸ್ತೆ ಅಭಿವೃದ್ಧಿಗೆ ಗಮನ ಹರಿಸಲಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕುಂದಕೆರೆ ಸಂಪತ್ತು ಸೇರಿದಂತೆ ಹಲವರಿದ್ದರು.--------------
8ಜಿಪಿಟಿ1ಗುಂಡ್ಲುಪೇಟೆ ಪ್ರವಾಸಿ ಮಂದಿರದಲ್ಲಿ ರೈತಸಂಘದ ರಾಜ್ಯ ಕಾರ್ಯದರ್ಶಿ ಡಾ.ಗುರುಪ್ರಸಾದ್ ಮಾತನಾಡಿದರು.
8ಜಿಪಿಟಿ2ರೈತ ಸಂಘದ ನೂತನ ಅಧ್ಯಕ್ಷ ಮಹದೇವಪ್ಪ. ಬಾಕ್ಸ್...
ಜಿಲ್ಲಾ ಸಮಿತಿ ರಚನೆಚಾಮರಾಜನಗರ ಜಿಲ್ಲಾ ರೈತ ಸಂಘದ ಸಮಿತಿಗೆ ನೂತನ ಜಿಲ್ಲಾ ಸಮಿತಿ ರಚನೆ ಮಾಡಲಾಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ನೂತನ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ರೈತಸಂಘದ ಜಿಲ್ಲಾ ಗೌರವಾಧ್ಯಕ್ಷರಾಗಿ ಶ್ರೀ ತಂಗವೇಲು ಗೌಂಡರ್, ಜಿಲ್ಲಾಧ್ಯಕ್ಷರಾಗಿ ಮಾಡ್ರಹಳ್ಳಿ ಮಹಾದೇವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕುಂದಕೆರೆ ಸಂಪತ್ತು, ಜಿಲ್ಲಾ ಉಪಾಧ್ಯಕ್ಷರಾಗಿ ಹಾಲಹಳ್ಳಿ ಮಹೇಶ್,ಲಿಂಗಸ್ವಾಮಿ ಹೆಗ್ಗೊಠಾರ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಪುಟ್ಟರಾಜು ಬೂದಂಬಳ್ಳಿ ಮೋಳೆ, ಜಿಲ್ಲಾ ಕಾರ್ಯಧ್ಯಕ್ಷರಾಗಿ ಷಣ್ಮುಖಸ್ವಾಮಿ ಬೆಟ್ಟದ ಮಾದಹಳ್ಳಿ ಅವಿರೋಧವಾಗಿ ಆಯ್ಕೆಯಾದರು. ಗುಂಡ್ಲುಪೇಟೆ ತಾಲೂಕು ಅಧ್ಯಕ್ಷರಾಗಿ ಮಹೇಶ್ ಕಂದೆಗಾಲ ಹೊಸೂರು,ಕಾರ್ಯದರ್ಶಿ ಬೆಟ್ಟಹಳ್ಳಿ ಗುರು,ಚಾಮರಾಜನಗರ ತಾಲೂಕು ಅಧ್ಯಕ್ಷ ಸ್ವಾಮಿನಾಥನ್, ಕಾರ್ಯದರ್ಶಿಯಾಗಿ ಸುಬ್ರಮಣ್ಯ, ಖಜಾಂಚಿಯಾಗಿ ಮಲ್ಲೇಶ್ ಆಯ್ಕೆಯಾಗಿದ್ದಾರೆ. ಯಳಂದೂರು ತಾಲೂಕು ಅಧ್ಯಕ್ಷರಾಗಿ ವೃಷಬೇಂದ್ರ ಯರಗಂಬಳ್ಳಿ, ಕೊಳ್ಳೇಗಾಲ ತಾಲೂಕು ಅಧ್ಯಕ್ಷರಾಗಿ
ಸಿದ್ದರಾಜು, ಹನೂರು ಅಧ್ಯಕ್ಷರಾಗಿ ಚಂಗಡಿ ಕರಿಯಪ್ಪ, ಕಾರ್ಯದರ್ಶಿಯಾಗಿ ಶಾಂತಕುಮಾರ್ ಆಯ್ಕೆಯಾಗಿದ್ದಾರೆ.