ಸಾರಾಂಶ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಎರಡನೇ ದಿನವಾದ ಮಂಗಳವಾರ ತುಮಕೂರು ಜಿಲ್ಲೆಯ ಕೊರಟೆಗೆರೆ ಮತ್ತು ಮಧುಗಿರಿಯಲ್ಲಿ ಬರ ಅಧ್ಯಯನ ನಡೆಸಿದರು. ಈ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
- ಕೊರಟಗೆರೆ, ಮಧುಗಿರಿಯಲ್ಲಿ ಬಿಎಸ್‌ವೈ ಬರ ಪರಿಶೀಲನೆ
ಕನ್ನಡಪ್ರಭವಾರ್ತೆ,ಮಧುಗಿರಿ/ಕೊರಟಗೆರೆಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎರಡನೇ ದಿನವಾದ ಮಂಗಳವಾರ ತುಮಕೂರು ಜಿಲ್ಲೆಯ ಕೊರಟೆಗೆರೆ ಮತ್ತು ಮಧುಗಿರಿಯಲ್ಲಿ ಬರ ಅಧ್ಯಯನ ನಡೆಸಿದರು. ಸೋಮವಾರದಿಂದ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ನಡೆಸುತ್ತಿರುವ ಅವರು ರೈತರ ಹೊಲಗಳಿಗೆ ತೆರಳಿ ಬೆಳೆ ಹಾನಿ ಪರಿಶೀಲಿಸಿದರು. ಸರ್ಕಾರದಿಂದ ಶೀಘ್ರ ಬೆಳೆಹಾನಿ ಕೊಡಿಸುವ ಭರವಸೆ ನೀಡಿದರು.ಮಧುಗಿರಿ ತಾಲೂಕಿನಲ್ಲಿ ಕೋಡ್ಲಾಪುರ, ಚಿನ್ನೇನಹಳ್ಳಿ, ಬಡವನಹಳ್ಳಿ ಮತ್ತಿತರ ಕಡೆ ಹಾಗೂ ಕೊರಟಗೆರೆಯ ಬೋಡಬಂಡೇನಹಳ್ಳಿಯಲ್ಲಿ ರೈತರ ಜಮೀನಿಗೆ ತೆರಳಿ ಬೆಳೆ ಸ್ಥಿತಿ ಅವಲೋಕನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬರ ನಿರ್ವಹಣೆ ಮಾಡುವಲ್ಲಿ ಮತ್ತು ರೈತರ ಕಷ್ಟಗಳಿಗೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ರೈತರಲ್ಲಿ ಆತಂಕ ಮನೆ ಮಾಡಿದೆ ಎಂದರು.ಈ ಭಾಗದಲ್ಲಿ ಮುಸುಕಿನ ಜೋಳ, ಮೆಕ್ಕೆ ಜೋಳ, ರಾಗಿ, ನೆಲಕಡಲೆ, ತೊಗರಿ ಸೇರಿ ಎಲ್ಲಾ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ರೈತರು ಬೆಳೆ ಕಳೆದುಕೊಂಡು ಮೇವು ದೊರೆಯದೆ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ, ಅದರೆ ಇಲ್ಲಿಯವರೆಗೆ ರಾಜ್ಯದ ಯಾವುದೇ ಮಂತ್ರಿಗಳು ರೈತರ ಜಮೀನಿಗೆ ಬಂದು ಸ್ಥಳ ಪರಿಶೀಲನೆ ಮಾಡಿಲ್ಲ, ಬರ ಪರಿಹಾರ ನೀಡಿಲ್ಲ ಎಂದು ಕಿಡಿಕಾರಿದರು.