ಸಾರಾಂಶ
ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಕುರಿತಾದ ಆದೇಶವನ್ನು ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರವಾನೆ ಮಾಡಿದ್ದಾರೆ.
ಸಿದ್ಧರಾಮಯ್ಯ ಅವರ ರಾಜಕೀಯ ಜೀವನದ ಅತಿದೊಡ್ಡ ಸಂಕಷ್ಟ ಇದು ಎಂದು ಹೇಳಲಾಗಿದೆ.ಮೂರು ದೂರುಗಳನ್ನು ಒಟ್ಟಿಗೆ ಸೇರಿಸಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ, ಮೈಸೂರು ಮೂಲದ ಸ್ನೇಹಮಯಿ ಕೃಷ್ಟ ಹಾಗೂ ಪ್ರದೀಪ್ ಎನ್ನುವವರು ಇದೇ ವಿಚಾರದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಈ ಮೂರೂ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ಕಚೇರಿಗೆ ನೋಟಿಫಿಕೇಷನ್‌ಅನ್ನೂ ಪ್ರತಿಯನ್ನೂ ನೀಡಲಾಗಿದೆ.
ಕಾಂಗ್ರೆಸ್ ಪಕ್ಷ ಏನು ಮಾಡುತ್ತೆ?
1. ಸಿದ್ದು ಕೆಳಗಿಳಿಸಿದರೆ ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮವಾಗುವ ಆತಂಕ
2. ಶೇ.4ರಿಂದ ಶೇ.5ರಷ್ಟಿರುವ ಕುರುಬ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವ ತೀವ್ರ ಭೀತಿ
3. ಬದಲಾವಣೆ ಬಗ್ಗೆ ಚರ್ಚೆ ನಡೆಸಿದರೆ ಬಣ ರಾಜಕಾರಣ ಉಲ್ಬಣಗೊಳ್ಳುವ ಭಾರಿ ಸಾಧ್ಯತೆ
4. ಹೀಗಾಗಿ ಅಧಿಕಾರದಿಂದ ಸಿದ್ದು ಕೆಳಗಿಳಿಸದೆ ಗೌರ್ನರ್ ವಿರುದ್ಧ ಕಾನೂನು ಸಮರಕ್ಕೆ ಒಲವು
5. ಮುಡಾ ಅಕ್ರಮದಲ್ಲಿ ಸಿದ್ದು ಪಾತ್ರವಿಲ್ಲ ಎಂದು ರಾಜ್ಯಪಾಲರ ವಿರುದ್ಧ ಹೋರಾಟ ನಡೆಸುವುದು
ರಾಜ್ಯಪಾಲರ ಆದೇಶದಲ್ಲೇನಿದೆ?
- ಮುಡಾ ಅಕ್ರಮ ಪ್ರಕರಣದಲ್ಲಿ ಸಿದ್ದು ವಿರುದ್ಧ ವಸ್ತುನಿಷ್ಠ, ನಿಷ್ಪಕ್ಷಪಾತ ತನಿಖೆಯನ್ನು ನಡೆಸುವ ಅಗತ್ಯವಿದೆ
- ಸಿಎಂ ಸಲಹೆ ಮೇರೆಗೆ ರಚನೆಯಾಗಿರುವ ಸಂಪುಟದ ಸಲಹೆಯನ್ನು ಈ ವಿಚಾರದಲ್ಲಿ ಪರಿಗಣಿಸಲಾಗದು
- ಸಿಎಂ ಅವರು ತನಿಖಾ ಆಯೋಗ ರಚಿಸಿದ್ದಾರೆ. ಆರೋಪ ಹೊತ್ತಿರುವವರೇ ತನಿಖಾ ಕ್ರಮ ನಿರ್ಧರಿಸಲಾಗದು
- ವಿಶೇಷ ಸಂದರ್ಭದಲ್ಲಿ ಸಚಿವ ಸಂಪುಟದ ಸಲಹೆ ಸ್ವೀಕರಿಸುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟದ್ದು
- ಮುಡಾ ಪ್ರಕರಣದಲ್ಲಿ ದಾಖಲೆಗಳು ಇವೆ. ಹೀಗಿದ್ದಾಗ ತನಿಖೆಗೆ ಅನುಮತಿ ನಿರಾಕರಿಸುವುದು ತಪ್ಪಾಗುತ್ತದೆ
ಪಾದಯಾತ್ರೆಗೆ ಸಿಕ್ಕ ಯಶಸ್ಸು
ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲರ ಅನುಮತಿ ಬಿಜೆಪಿ ಪಾದಯಾತ್ರೆಗೆ ಸಿಕ್ಕ ಯಶಸ್ಸು. ನೈತಿಕತೆಯ ಹೊಣೆ ಹೊತ್ತು ಅವರು ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಆರ್. ಅಶೋಕ್, ಪ್ರತಿಪಕ್ಷ ನಾಯಕ
--
ಭಂಡತನ ಬಿಟ್ಟು ರಾಜೀನಾಮೆ ನೀಡಿ
ರಾಜ್ಯಪಾಲರು ತಮ್ಮ ಸಂವಿಧಾನದತ್ತ ಅಧಿಕಾರ ಚಲಾಯಿಸಿ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆ. ಸಿದ್ದರಾಮಯ್ಯ ಭಂಡತನ ಬಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ