ಬೆಂಗಳೂರು : ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು ಎಂಬ ಕಾರಣಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್‌ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚಿಸಲಾಗುವುದು. ಆ ಸಮಿತಿ ಸದಸ್ಯರು ಗ್ಯಾರಂಟಿ ಫಲಾನುಭವಿಗಳ ದಾಖಲೆ ಮರುಪರಿಶೀಲನೆ ನಡೆಸುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಕೆಪಿಸಿಸಿ ಪದಗ್ರಹಣ ಕಾರ್ಯಕ್ರಮ

ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿ.ಕೆ. ಹರಿಪ್ರಸಾದ್‌ ಅವರ ಕೆಪಿಸಿಸಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಹಲವು ಪದಾಧಿಕಾರಿಗಳು, ಶಾಸಕರು, ಮುಖಂಡರು ನನ್ನೊಂದಿಗೆ ಶ್ರಮಿಸಿದ್ದಾರೆ. ಎಷ್ಟೋ ಜನರಿಗೆ ಅಧಿಕಾರ ನೀಡಲು ಸಾಧ್ಯವಾಗಿಲ್ಲ. ಅಲ್ಲದೆ, ಗ್ಯಾರಂಟಿ ಅನುಷ್ಠಾನ ಸಮಿತಿ ಮಾಡಿ ಸಾವಿರಾರು ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ.

ಗ್ರಾಮ ಪಂಚಾಯಿತಿ ಮತ್ತು ವಾರ್ಡ್‌ ಮಟ್ಟದಲ್ಲಿ ಸಮಿತಿ ರಚನೆ

ಇದೀಗ ಗ್ರಾಮ ಪಂಚಾಯಿತಿ ಮತ್ತು ವಾರ್ಡ್‌ ಮಟ್ಟದಲ್ಲಿ ಸಮಿತಿ ರಚನೆ ಮಾಡಲು ಪಕ್ಷದ ವರಿಷ್ಠರೊಂದಿಗೆ ಚರ್ಚೆ ಮಾಡಿದ್ದೇವೆ. ಎಲ್ಲ ವರ್ಗದವರಿಗೂ ಸಮಾನವಾಗಿ ಸಮಿತಿಗಳಿಗೆ ನೇಮಕ ಮಾಡಲಾಗುವುದು. ಪ್ರತಿ ಸಮಿತಿಯಲ್ಲಿ 5 ಜನರನ್ನು ಸದಸ್ಯರನ್ನಾಗಿ ಮಾಡಲಾಗುವುದು. ರಾಜ್ಯದಲ್ಲಿ 7 ಸಾವಿರ ಗ್ರಾಪಂ, 4 ಸಾವಿರ ವಾರ್ಡ್‌ಗಳಲ್ಲಿ ಗ್ಯಾರಂಟಿ ಸಮಿತಿ ರಚಿಸಲಾಗುವುದು. ಆಮೂಲಕ ನಾವು ಸಾವಿರಾರು ನಾಯಕರನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ತಿಳಿಸಿದರು.