ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ನ್ಯೂಯಾರ್ಕ್‌ನಲ್ಲೂ ಜಾರಿಗೆ ಬಂದಿದ್ದು, ಅಲ್ಲಿನವರು ನಮ್ಮ ಯೋಜನೆಗಳನ್ನೇ ಕಾಪಿ ಮಾಡಿದ್ದು, ಗ್ಯಾರಂಟಿ ಈಗ ಜಗದ್ವಿಖ್ಯಾತಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು : ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ನ್ಯೂಯಾರ್ಕ್‌ನಲ್ಲೂ ಜಾರಿಗೆ ಬಂದಿದ್ದು, ಅಲ್ಲಿನವರು ನಮ್ಮ ಯೋಜನೆಗಳನ್ನೇ ಕಾಪಿ ಮಾಡಿದ್ದು, ಗ್ಯಾರಂಟಿ ಈಗ ಜಗದ್ವಿಖ್ಯಾತಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಾಗ ಅನೇಕ ಟೀಕೆ ಟಿಪ್ಪಣಿಗಳು ಬಂದವು. ಗ್ಯಾರಂಟಿ ಯೋಜನೆಗಳು ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರ್ಗದವರಿಗೆ ಪ್ರಯೋಜನವಾಗಿವೆ. ಕೇಂದ್ರದ ಪ್ರಧಾನಿ ಕೂಡಾ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡಿದ್ದಾರೆ, ನ್ಯೂಯಾರ್ಕ್‌ನಲ್ಲೂ ಅಲ್ಲಿನ ಮೇಯರ್ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ತಂದಿದ್ದಾರೆ. ಅಲ್ಲಿಗೆ ಗ್ಯಾರಂಟಿ ವಿಶ್ವಖ್ಯಾತಿ ಎಂದರು.
ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ಎರಡು ಭಾರತ ಸೃಷ್ಟಿ
ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ಎರಡು ಭಾರತ ಸೃಷ್ಟಿಯಾಗಿದ್ದವು. ಒಂದು ಜಮೀನ್ದಾರರು, ಉಳ್ಳವರಿಗೆ ಒಂದು ಭಾರತ, ಕೂಲಿಮಾಡುವ, ಬಡವರಾಗಿ ಇರುವ ಮತ್ತೊಂದು ಭಾರತ. ಅಂಬೇಡ್ಕರ್ ಇದಕ್ಕೆ ಈ ರೀತಿ ಭಾರತ ನಿರ್ಮಾಣ ಮಾಡುವುದನ್ನು ಒಪ್ಪಿರಲಿಲ್ಲ. ಅದಕ್ಕಾಗಿಯೇ ಸರ್ವರಿಗೂ ಸಮಾನ ಅವಕಾಶ ಸೃಷ್ಟಿ ಮಾಡುವುದು ಅವರ ಗುರಿಯಾಯಿತು ಎಂದು ಹೇಳಿದರು.
ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗ, ಹಿಂದುಳಿದ ಜಾತಿಗಳೆಲ್ಲಾ ಒಗ್ಗಟ್ಟಾಗಬೇಕು
ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗ, ಹಿಂದುಳಿದ ಜಾತಿಗಳೆಲ್ಲಾ ಒಗ್ಗಟ್ಟಾಗಬೇಕು. ಆಗ ಸಮಾನತೆ ದೊರೆಯುತ್ತಿದ್ದೆ, ಎಲ್ಲರೂ ಒಟ್ಟಾಗಿ ಇದ್ದರೆ, ಅಧಿಕಾರ ದೊರೆಯುತ್ತದೆ. ಸಿದ್ದರಾಮಯ್ಯ ಬದ್ಧತೆ ಇರುವ ರಾಜಕಾರಣಿ, ಎಲ್ಲರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಾನಮಾನಕ್ಕಾಗಿ ಹೋರಾಟ ಮಾಡಿದ ರಾಜಕಾರಣಿ, ಬಸವಣ್ಣ,ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡ ಅಪರೂಪದ ರಾಜಕಾರಣಿ ಎಂದರು.
ಸಚಿವ ಸಂತೋಷ್ ಲಾಡ್ ಮಾತನಾಡಿ, ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಮೀಸಲಾತಿ ಅಗತ್ಯ, ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿ ಜಾರಿಯಲ್ಲಿದೆ. ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಜಾರಿಗೆ ತಂದಿದ್ದಾರೆ. ಈ ರೀತಿಯಾದರೆ ಮಾತ್ರ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ರಾಜಕೀಯ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ನಮ್ಮನ್ನು ರಾಜಕೀಯವಾಗಿ ಕಾಪಾಡಬೇಕು ಅಂದರೆ ಸಿದ್ದರಾಮಯ್ಯ ರಾಜಕೀಯದಲ್ಲಿ ಮುಂದುವರಿಯಬೇಕು, ನಮ್ಮನ್ನು ಮುನ್ನಡೆಸಬೇಕು ಅಂದರೆ ಚುನಾವಣಾ ರಾಜಕೀಯದಲ್ಲಿ ಮುಂದುವರಿಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಾನತೆಯ ಸಂಕಲ್ಪ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಪದಾಧಿಕಾರಿಗಳನ್ನು ಸನ್ಮಾನಿಸಿದರು. ಅಲ್ಲದೆ, ಒಕ್ಕೂಟದ ವತಿಯಿಂದ ಬೆಳ್ಳಿಯ ಖಡ್ಗವನ್ನು ನೀಡಿ ಸಿದ್ಧರಾಮಯ್ಯ ಅವರನ್ನು ಸನ್ಮಾನಿಸಲಾಯಿತು.
