ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ರಾಯರೆಡ್ಡಿ

| N/A | Published : Jul 07 2025, 11:25 AM IST

basavaraj rayareddy

ಸಾರಾಂಶ

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಆ ಕುರಿತು ಯಾವುದೇ ಗೊಂದಲ ಬೇಡ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

 ಕೊಪ್ಪಳ :  ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಆ ಕುರಿತು ಯಾವುದೇ ಗೊಂದಲ ಬೇಡ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ರಸ್ತೆ ಬೇಕೆಂದರೆ ಗ್ಯಾರಂಟಿ ಯೋಜನೆ ಬಂದ್ ಮಾಡಲಾಗುವುದು ಎಂದು ಶನಿವಾರ ನೀಡಿದ್ದ ಹೇಳಿಕೆಗೆ ಭಾನುವಾರ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಯಾವುದೇ ರೀತಿಯ ಹಣದ ಕೊರತೆ ಉಂಟಾಗಿಲ್ಲ. ಗ್ಯಾರಂಟಿ ಯೋಜನೆಯಿಂದ ಜನರಿಗೆ ₹52 ಸಾವಿರ ಕೋಟಿ ನೀಡುತ್ತೇವೆ. ಜತೆಗೆ, ಜನರಿಗೆ ಸಬ್ಸಿಡಿಯಾಗಿ ಸಹ ಇನ್ನೂ ₹50 ಸಾವಿರ ಕೋಟಿ ನೀಡುತ್ತಿದ್ದೇವೆ ಎಂದರು.

ಗ್ಯಾರಂಟಿ ಯೋಜನೆಯಲ್ಲಿ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಹಳ್ಳಿಯಲ್ಲಿ ಸಾಮಾನ್ಯವಾಗಿ ಮಾತನಾಡುವ ಸಂದರ್ಭದಲ್ಲಿ ಒಂದೇ ವರ್ಷ ಎಲ್ಲ ಕೆಲಸ ಮಾಡಬೇಕು ಎಂದರೆ ಹೇಂಗಪ್ಪಾ, ಮುಂದಿನ ವರ್ಷ ಗ್ರಾಮೀಣ ರಸ್ತೆಗಳನ್ನು ಮಾಡಿಕೊಡುತ್ತೇನೆ ಎಂದು ಹೇಳಿದ್ದೇನೆ. ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತಗೊಂಡಿಲ್ಲ. ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಿದೆ. ಇದರ ಜತೆಗೆ ಅಭಿವೃದ್ಧಿಗೂ ಸಾಕಷ್ಟು ಹಣ ನೀಡಿದ್ದೇವೆ. ಅಭಿವೃದ್ಧಿಗೆ ಮುಖ್ಯಮಂತ್ರಿ ಸಾಕಷ್ಟು ಅನುದಾನ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂದು ವ್ಯತಿರಿಕ್ತ ಹೇಳಿಕೆ ನೀಡಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ:

 ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ. ಜನಪರ ಯೋಜನೆ ನೀಡುತ್ತಿರುವ, ಉತ್ತಮ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬಿಜೆಪಿಯವರು ಎಷ್ಟೇ ಹೇಳಿದರೂ ಸಿಎಂ ಸ್ಥಾನದಲ್ಲಿ ಬದಲಾವಣೆ ಆಗುವುದಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು. ಸಿದ್ದರಾಮಯ್ಯ ಅವರನ್ನು ಪಕ್ಷದ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದು ಡಿಮೋಷನ್ ಆಗುವುದಿಲ್ಲ. ರಾಷ್ಟ್ರದಲ್ಲಿಯೇ ಸಿದ್ದರಾಮಯ್ಯ ಅವರು ಪಾಪ್ಯುಲರ್ ಸಿಎಂ ಆಗಿದ್ದು, ಕಾಂಗ್ರೆಸ್‌ನಲ್ಲಿ ಮಾಸ್ ಲೀಡರ್ ಆಗಿದ್ದಾರೆ ಎಂದರು.

Read more Articles on