ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಳೆದ ಒಂದು ವರ್ಷದಿಂದ ಮೀಸಲಾತಿ ವಿವಾದದ ಕಾರಣ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಡಳಿತ ವ್ಯವಸ್ಥೆ ಇಲ್ಲದೆ ಕೇವಲ ಅಧಿಕಾರಿಗಳ ಆಡಳಿತದಲ್ಲಿಯೇ ಇದ್ದ ಚಿಕ್ಕಬಳ್ಳಾಪುರ ನಗರಸಭೆಗೆ ಇದೀಗ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ.ನಗರಸಭೆಯ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮರ ಆರಂಭವಾಗಿದೆ. ತಮ್ಮ ಬೆಂಬಲಿಗರನ್ನೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿಸಲು ಸಂಸದ ಮತ್ತು ಕ್ಷೇತ್ರದ ಶಾಸಕರ ನಡುವೆ ತಂತ್ರ ಪ್ರತಿತಂತ್ರ ಆರಂಭವಾಗಿದೆ..
ಕಾಂಗ್ರೆಸ್‌ಗೆ ಬಹುಮತ:ನಗರ ಸಭೆಯಲ್ಲಿ ಒಟ್ಟು 31 ಸ್ಥಾನಗಳಿದ್ದು ಈ ಪೈಕಿ ಕಾಂಗ್ರೆಸ್ 16, ಬಿಜೆಪಿ 9, ಜಾತ್ಯತೀತ ಜನತಾದಳ 2, ಪಕ್ಷೇತರರು ನಾಲ್ಕುಸ್ಥಾನ ಹೊಂದಿವೆ. ಅಲ್ಲದೆ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಸಂಸದರು ಮತ್ತು ಶಾಸಕರು ಮತಚಲಾಯಿಸುವ ಅವಕಾಶ ಇದೆ. ಶಾಸಕ ಪ್ರದೀಪ್ ಈಶ್ವರ್ ಮತ್ತು ಬೆಂಬಲಿಗರ ತಂಡ ಒಂದು ಕಡೆ. ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿರುವ ಡಾ.ಕೆ.ಸುಧಾಕರ್ ಮತ್ತು ಬೆಂಬಲಿಗರ ತಂಡ ಮತ್ತೊಂದು ಕಡೆ. ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಇವರಿಬ್ಬರಿಗೂ ಸಹ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ರಾಜಕೀಯ ಆಚ್ಚರಿಯ ಬೆಳವಣಿಗೆಯಲ್ಲಿ ಮೊದಲ ಅವಧಿಯಲ್ಲಿಯೇ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದೆ ಆನಂದ್ ರೆಡ್ಡಿ ಬಾಬು ಅವರು ಈ ಹಿಂದೆ 30 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದು, ಡಾ. ಕೆ ಸುಧಾಕರ್ ಅವರ ಅಪ್ತರಾಗಿ ಜನರ ಮೆಚ್ಚುಗೆಗೂ ಪಾತ್ರರಾಗಿದ್ದರು. ಈ ಸನ್ನಿವೇಶದಲ್ಲಿ ಈ ಬಾರಿಯೂ ನಗರಸಭೆ ಅಧ್ಯಕ್ಷರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ ಮತ್ತೆ ಎರಡನೇ ಅವಧಿಗೂ ಆನಂದ್ ರೆಡ್ಡಿ ಬಾಬು ಅವರೇ ಅಭ್ಯರ್ಥಿ ಆಗುವ ನಿರೀಕ್ಷೆ ಇದೆ.
ಕಾಂಗ್ರೆಸ್‌ಗೆ ಅಧಿಕಾರ: ಶಾಸಕಶಾಸಕ ಪ್ರದೀಪ್ ಈಶ್ವರ್ ಪ್ರಕಾರ, ಕಾಂಗ್ರೆಸ್ ನ 16 ನಗರಸಭಾ ಸದಸ್ಯರಿದ್ದಾರೆ. ನಾನು ಮತ್ತು ಎಂಎಲ್ ಸಿ ಸೇರಿ 18 ಮತಗಳಿವೆ. ಕಳೆದ ಮೂರು ವರ್ಷಗಳ ಹಿಂದೆ ಅದ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದಾಗ ಪಕ್ಷೇತರ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಆದರೆ ಈ ಬಾರಿ ಹಾಗಾಗುವುದಿಲ್ಲಾ. ನಿಷ್ಠಾವಂತ ಕಾಂಗ್ರೆಸ್ ಸದಸ್ಯರೇ ಈ ಬಾರಿ ಅಧ್ಯಕ್ಷ ಉಪಾಧ್ಯಕ್ಷರಾಗುತ್ತಾರೆ. ಅಡ್ಡ ಮತದಾನ ಮಾಡಿದರೆ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ, ಆರು ವರ್ಷ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ಬಳಿ 20 ಮತ: ಸಂಸದಸಂಸದ ಡಾ.ಕೆ.ಸುಧಾಕರ್ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಬಗ್ಗೆ ಮಾತನಾಡಿ, ತಮ್ಮ ಬಳಿ 19 ಸದಸ್ಯರು ಮತ್ತು ತಮ್ಮ ಮತ ಸೇರಿ 20 ಮತಗಳಿವೆ ನಾವೇ ನಗರಸಭೆ ಚುಕ್ಕಾಣಿ ಹಿಡಿಯುತ್ತೇವೆ. ನಾವು 15 ತಿಂಗಳ ಹಿಂದೆ ನಗರಕ್ಕೆ ಬೇಕಾದ ಅಭಿವೃದ್ಧಿ ಕಾರ್ಯಗಳಿಗಾಗಿ ಸುಮಾರು 30 ರಿಂದ 40 ಕೋಟಿ ರು.ಗಳ ಅನುದಾನವನ್ನು ತಂದಿದ್ದೇವೆ. ಆದರೆ ಈ ಅನುದಾನ ಬಳಕೆ ಮಾಡದೆ, ಕೆಲವರು ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿ,
ಈ ಬಾರಿ ಚುನಾವಣೆಗಳಲ್ಲಿ, ಬಿಜೆಪಿ ಅಥವಾ ಜೆಡಿಎಸ್ ಎಂಬ ಪಕ್ಷಗಳ ಕಡೆಗಿಳಿಯದೇ, ನಿಜವಾದ ಆತ್ಮಸಾಕ್ಷಿಯನ್ನು ಕಾಯ್ದುಕೊಂಡು ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಅತ್ಯಗತ್ಯವಾಗಿದೆ. ಚಿಕ್ಕಬಳ್ಳಾಪುರದ ಅಭಿವೃದ್ಧಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಗರದ ಸಮಗ್ರ ಅಭಿವೃದ್ಧಿಗಾಗಿ ನಾವು ನೀಡಿದ ಅನುದಾನವನ್ನು ಸೂಕ್ತವಾಗಿ ಬಳಸಬೇಕು ಎಂಬ ಸಂದೇಶವನ್ನು ಡಾ.ಸುಧಾಕರ್ ನೀಡಿದ್ದಾರೆ.