ಎಚ್‌.ಡಿ.ದೇವೇಗೌಡರ ಧೃತರಾಷ್ಟ್ರ ಪ್ರೇಮ ವರ್ಕೌಟ್ ಆಗಲಿಲ್ಲ : ಶಾಸಕ ಪಿ. ರವಿಕುಮಾರ್

| Published : Nov 24 2024, 01:45 AM IST / Updated: Nov 24 2024, 04:12 AM IST

HD Devegowda birthday

ಸಾರಾಂಶ

ಮುಡಾ ವಿಚಾರಕ್ಕೂ ಬಡವನಿಗೂ ಏನು ಸಂಬಂಧ?. ಬಡವನ ಬೇಳೆ, ಅಕ್ಕಿಗೂ ಮುಡಾಗೂ ಏನು ಸಂಬಂಧ. ಮುಡಾ ರಾಜಕೀಯ ಪ್ರಕರಣ ಅಷ್ಟೇ. ಬಡವನಿಗೆ ಬೇಕಿರೋದು ಬಸ್ ಟಿಕೆಟ್ ಉಚಿತ, 2 ಸಾವಿರ ದುಡ್ಡು, ಉಚಿತ ವಿದ್ಯುತ್ತೇ ವಿನಃ ಮುಡಾ ವಿಚಾರ ಅಲ್ಲ.

 ಮಂಡ್ಯ :ಧೃತರಾಷ್ಟ್ರ ಪ್ರೇಮ ಹೆಚ್ಚು ದಿನ ವರ್ಕೌಟ್ ಆಗುವುದಿಲ್ಲ. ಧೃತರಾಷ್ಟ್ರನ ಪ್ರೇಮ ಕೌರವರನ್ನು ಕೊಂದುಹಾಕಿತು ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಗೆಲುವಿಗಾಗಿ ದೇವೇಗೌಡರ ಚುನಾವಣೆ ಹೋರಾಟದ ಕುರಿತು ಶಾಸಕ ಪಿ.ರವಿಕುಮಾರ್ ಗೌಡರ ಹೋರಾಟವನ್ನು ಧೃತರಾಷ್ಟ್ರ ಪ್ರೇಮಕ್ಕೆ ಹೋಲಿಸಿದರು.

ಉಪಚುನಾವಣೆ ಫಲಿತಾಂಶ ಕುರಿತಂತೆ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಾಂಡವರ ಪರ ಧೃತರಾಷ್ಟ್ರ ಇದ್ದಿದ್ದರೆ ಮಹಾಭಾರತ ಯುದ್ಧವೇ ನಡೆಯುತ್ತಿರಲಿಲ್ಲ. ಸತ್ಯಕ್ಕೆ ಎಂದಿಗೂ ಜಯ ಸಿಗುತ್ತದೆ ಎನ್ನುವುದಕ್ಕೆ ಚನ್ನಪಟ್ಟಣ ಗೆಲುವು ಸಾಕ್ಷಿ ಎಂದರು.

ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆ ಇತ್ತು. ಗ್ಯಾರಂಟಿ ಕೊಟ್ಟು ಬಡವರ ಪರ ಆಡಳಿತ ಮಾಡುತ್ತಿದ್ದೇವೆ. ಬೇಡದೆ ಇರುವ ವಿಚಾರ ತಗೆದುಕೊಂಡು ನಮ್ಮ ಪಕ್ಷಕ್ಕೆ ಮಸಿ ಬಳಿಯುತ್ತಿದ್ದರು. ಜನರು ಉಪ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಏಳು ವರ್ಷ ಆಡಳಿತ ಮಾಡಿದ ಕುಮಾರಣ್ಣ ಚನ್ನಪಟ್ಟಣದಲ್ಲಿ ಒಂದು ರಸ್ತೆಯನ್ನೂ ಮಾಡಿಲ್ಲ. ರಸ್ತೆಯೂ ಮಾಡೋಲ್ಲ ಅಂದ ಮೇಲೆ ರಾಜಕೀಯ ಯಾಕೆ ಮಾಡಬೇಕು?. ಜನ ಏನ್ ಹುಚ್ಚರಾ?, ಗೆಲ್ಲಿಸಿ ನೀನು ಹೋಗಿ ಮಜಾ ಮಾಡು ಅಂತ ಕಳಿಸ್ತಾರಾ ಎಂದು ಮಾರ್ಮಿಕವಾಗಿ ಹೇಳಿದರು.

ಮುಡಾ ವಿಚಾರಕ್ಕೂ ಬಡವನಿಗೂ ಏನು ಸಂಬಂಧ?. ಬಡವನ ಬೇಳೆ, ಅಕ್ಕಿಗೂ ಮುಡಾಗೂ ಏನು ಸಂಬಂಧ. ಮುಡಾ ರಾಜಕೀಯ ಪ್ರಕರಣ ಅಷ್ಟೇ. ಬಡವನಿಗೆ ಬೇಕಿರೋದು ಬಸ್ ಟಿಕೆಟ್ ಉಚಿತ, 2 ಸಾವಿರ ದುಡ್ಡು, ಉಚಿತ ವಿದ್ಯುತ್ತೇ ವಿನಃ ಮುಡಾ ವಿಚಾರ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಾತಿ ವಿಚಾರ ತಗೊಂಡು ಭಾಷಣ ಮಾಡಿದರೆ ನಡೆಯುವುದಿಲ್ಲ. ಈಗ ಜನ ಎಚ್ಚೆತ್ತುಕೊಂಡಿದ್ದಾರೆ ಎಂದು ಜಮೀರ್ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಜಮೀರ್ ಹೇಳಿಕೆ ಕೊಡುವಷ್ಟರಲ್ಲಿ ಎಲೆಕ್ಷನ್ ಮುಗಿದಿತ್ತು. ಜನ ಆಗ ಬೇರೆ ಬೇರೆ ಲೆಕ್ಕಾಚಾರದಲ್ಲಿ ತೊಡಗಿದ್ದರು. ಜಮೀರ್ ಫ್ಲಾಟ್ ಪಕ್ಕದಲ್ಲೇ ನನ್ನ ಫ್ಲಾಟ್ ಇದೆ. ಜಮೀರ್, ಕುಮಾರಸ್ವಾಮಿ ಇಬ್ಬರು ಅಂಟಿಕೊಂಡೇ ಇರುತ್ತಿದ್ದರು. ಅವರವರು ಏನು ಬೈದಾಡಿಕೊಂಡಿದ್ದಾರೋ ನನಗೆ ಗೊತ್ತಿಲ್ಲ ಎಂದರು.

ಕುಮಾರಸ್ವಾಮಿ ಅವರು ಜಮೀರ್ ಮನೆಗೆ ಬರುತ್ತಿದ್ದರು. ಅಲ್ಲಿ ಅವರಿಬ್ಬರು ಏನು ಮಾತನಾಡಿಕೊಂಡಿದ್ದಾರೋ ನಮಗೂ, ನಿಮಗೂ ಗೊತ್ತಿದೆಯಾ. ಜಮೀರ್ ತಪ್ಪೇನು ಮಾತನಾಡಿರಲಿಲ್ಲ. ಅದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿಲ್ಲ ಎಂದು ಹೇಳಿದರು.