ಸಾರಾಂಶ
ಚನ್ನಪಟ್ಟಣ : ಕ್ಷೇತ್ರದಲ್ಲಿ ಕುಮಾರಸ್ವಾಮಿಯವರನ್ನು ಎರಡು ಬಾರಿ ಗೆಲ್ಲಿಸಿದಿರಿ, ಇಲ್ಲಿಂದ ಗೆದ್ದ ಅವರು ಒಮ್ಮೆ ಮುಖ್ಯಮಂತ್ರಿ ಸಹ ಆದರು. ಆದರೆ, ಗೆದ್ದ ನಂತರ ಅವರು ಒಮ್ಮೆಯೂ ರಾಷ್ಟ್ರೀಯ ಹಬ್ಬಗಳಲ್ಲಿ ಭಾಗಿಯಾಗಲಿಲ್ಲ. ನಿಮ್ಮ ಕಷ್ಟಸುಖ ಕೇಳಿಲಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ತಾಲೂಕಿನ ಬಲ್ಲಾಪಟ್ಟಣ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ನಡೆಸಿದ ಅವರು, ಚುನಾವಣೆ ಸಮಯದಲ್ಲಿ ನಾವು ಬರುತ್ತೇವೆ, ಅವರು ಬರುತ್ತಾರೆ, ಜಾತ್ರೆ ನಡೆದ ಆಗೆ ನಡೆಯುತ್ತದೆ. ನಾವೆಲ್ಲ ಏನೋನೋ ಹೇಳುತ್ತೆವೆ. ನಿಜ ಹೇಳುತ್ತೇವೋ, ಸುಳ್ಳು ಹೇಳುತ್ತೇವೋ, ಆದರೆ, ನ.13ರ ನಂತರ ನಿಮ್ಮ ಜತೆ ಯಾರು ಇರುತ್ತಾರೆ ಎಂಬುದು ಮುಖ್ಯ, ಅದನ್ನು ನೀವು ಅರಿಯಬೇಕು ಎಂದರು.
ಎಚ್‌ಡಿಕೆಯನ್ನು ನೀವು ಎರಡು ಬಾರಿ ಗೆಲ್ಲಿಸಿದಿರಿ, ಒಂದು ಬಾರಿ ನಿಮ್ಮಂದ ಸಿಎಂ ಸಹ ಆದರು. ಅವರು ಏನು ಮಾಡಿದರು ಎಂಬುದನ್ನು ನೀವು ಗಮನಿಸಬೇಕು. ಯಾವುದಾದರೂ ಒಂದು ರಾಷ್ಟ್ರೀಯ ಹಬ್ಬಗಳಿಗೆ ಅವರ ಬಂದರೆ, ತಾಲೂಕಿನ ಪ್ರಮುಖ ಹಳ್ಳಿಗೆ ಬಂದ ನಿಮ್ಮ ಕಷ್ಟ ಸುಖ ಕೇಳಲಿಲ್ಲ. ಅವರು ರಾಜ್ಯಮಟ್ಟ ನಾಯಕರಿರಬಹುದು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ರಾಜ್ಯ ನಾಯಕರು. ಹಾಗಂತ ಸಿದ್ದರಾಮಯ್ಯ ಮೈಸೂರಿಗೆ ಹೋಗುವುದು ಬಿಟ್ಟಿದ್ದಾರಾ?. ಡಿಕೆಶಿ ಕನಕಪುರಕ್ಕೆ ಹೋಗುವುದು ಬಿಟ್ಟಿದ್ದಾರಾ. ಚನ್ನಪಟ್ಟಣಕ್ಕೆ ಬರುವುದು ಬಿಟ್ಟಿದ್ದಾರಾ ಎಂದು ಪ್ರಶ್ನಿಸಿದರು.
ಪ್ರತಿಬಾರಿ ತಪ್ಪು ಸರಿಯಲ್ಲ:
ಕುಮಾರಸ್ವಾಮಿ ಇಲ್ಲಿಂದ ಆಯ್ಕೆಯಾದ ಮೇಲೆ ಅವರಿಂದ ನಿಮಗೆ ಏನಾದರೂ ನ್ಯಾಯ ಸಿಕ್ಕಿದ್ದರೆ ಅದನ್ನು ತಿಳಿಸಿ, ನಾವು ಇಲ್ಲಿಂದಲೇ ವಾಪಸ್ ಹೋಗಿಬಿಡುತ್ತೇವೆ. ನೀರಾವರಿ ಯೋಜನೆ ನೀಡಿ ಸಿಪಿವೈ ಅನ್ನು ಸೋಲಿಸಿದಿರಿ, ನೀವು ಬುದ್ಧಿವಂತರು ಎಂದುಕೊಂಡಿದ್ದೆವು. ಆದರೆ, ತಪ್ಪು ಮಾಡಿದಿರಿ, ಒಂದು ಸಾರಿ ತಪ್ಪಾಗುತ್ತದೆ ಆದರೆ. ಪ್ರತಿ ಬಾರಿ ತಪ್ಪು ಮಾಡುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರೆಂಟಿ ನೀಡಿದ್ದೇವೆ. ಇದರ ಜತೆಗೆ ಸಾಕಷ್ಟು ಯೋಜನೆ ನೀಡಿದ್ದೇವೆ. ಒಂದು ಕಾರ್ಯಕ್ರಮವನ್ನು ನಿಲ್ಲಿಸದೇ ಕೊಡುತ್ತಿದ್ದೇವೆ. ಎಚ್‌ಡಿಕೆ ಮಂಡ್ಯಕ್ಕೆ ಹೋದ ನಂತರ ಡಿಕೆಶಿ ಯಾರೂ ಮಾಡದಷ್ಟು ಅಭಿವೃದ್ಧಿಗೆ ಮಾಡಲು ಇಲ್ಲಿ ಮುಂದಾಗಿದ್ದಾರೆ. ಯಾರು ಮಾಡದಷ್ಟು ಕೆಲಸ ಮಾಡಿದ್ದಾರೆ. ನಮ್ಮ ಅಭಿವೃದ್ಧಿ ಜತೆ ಕೈಜೋಡಿಸಲು ಸಿಪಿವೈ ಬಂದಿದ್ದಾರೆ ಎಂದರು.
ಚುನಾವಣೆ ವೇಳೆ ಎಚ್‌ಡಿಕೆ ಕಣ್ಣೀರಿನ ಗಿಮಿಕ್
ಚನ್ನಪಟ್ಟಣ : ಚುನಾವಣೆ ಪ್ರಚಾರದ ವೇಳೆ ಕುಮಾರಸ್ವಾಮಿ ಕಣ್ಣಲ್ಲಿ ನೀರು ಹಾಕಿ ಸಾಕಷ್ಟು ಗಿಮಿಕ್ ಮಾಡುತ್ತಾರೆ. ಆದರೆ, ಜನ ಅದಕ್ಕೆ ಮಣೆ ಹಾಕಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಬಲ್ಲಾಪಟ್ಟಣ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯ ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲು ಉಸ್ತುವಾರಿ ಮಾಡಿದ್ದರು. ಸದ್ಯ ಅಭ್ಯರ್ಥಿ ಆಯ್ಕೆ ಆಗಿದೆ, ಉತ್ತಮ ಅಭ್ಯರ್ಥಿ ಕಣದಲ್ಲಿದ್ದಾರೆ. ಸದ್ಯ ಈ ಚುನಾವಣೆ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇನೆ. ಈ ಚುನಾವಣೆ ಯೋಗೇಶ್ವರ್ ಅವರ ಪರವಾಗಿದೆ ಎಂದರು.
ಗ್ಯಾರಂಟಿ ಮರುಪರಿಶೀಲನೆ ಬಗ್ಗೆ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರಕ್ಕೆ, ಐದು ಗ್ಯಾರಂಟಿಗಳೂ ಮುಂದುವರಿಯುತ್ತವೆ. ಮರುಪರಿಶೀಲನೆ ಅಂದರೆ ಕೆಲವರು ಬೇಡ ಅಂದಿದ್ದಾರಲ್ಲ, ಅದರ ಬಗ್ಗೆ ಪರಿಶೀಲನೆ. ಯಾವುದನ್ನೂ ನಿಲ್ಲಿಸಲ್ಲ ಎಂದರು.
ಸೋತ ತಕ್ಷಣ ಮತ್ತೆ ಚುನಾವಣೆ ನಿಂತು ಗೆಲ್ಲಲೇ ಬೇಕೆಂಬುದು ಅಲ್ಲ. ರವೀಂದ್ರ ಶ್ರೀಕಂಠಗೌಡ ಅವರ ತಂದೆ 7 ಬಾರಿ ಸೋತಿದ್ದರು. ಅವರು ಒಂದೂ ಬಾರಿಯೂ ಗೆದ್ದಿಲ್ಲ. ಹಾಗಾಗಿ ಇಲ್ಲಿ ಸೋಲು-ಗೆಲುವಿನ ವಿಚಾರ ಇಲ್ಲ. ಯಾರು ಅಭಿವೃದ್ಧಿ ಮಾಡಿದ್ದಾರೆ ಅವರಿಗೆ ಮತ ನೀಡಿ. ಡಿಕೆಶಿ, ಡಿ.ಕೆ ಸುರೇಶ್ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಯೋಗೇಶ್ವರ್ ಸಹ ಸಾಕಷ್ಟು ನೀರಾವರಿ ಯೋಜನೆ ತಂದಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಜನ ಬೆಂಬಲ ಕೊಡುತ್ತಾರೆ ಎಂದರು.