ಸಾರಾಂಶ
ತಾನು ಏನು ಮಾತನಾಡುತ್ತಿದ್ದೇನೆ ಎಂಬುದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೇ ಗೊತ್ತಿರುವುದಿಲ್ಲ. ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ನನ್ನನ್ನು ನೋಡಿಯೂ ಇಲ್ಲ, ಮಾತನಾಡಿಯೂ ಇಲ್ಲ- ಡಿ.ಕೆ.ಶಿವಕುಮಾರ್
ಬೆಂಗಳೂರು : ‘ತಾನು ಏನು ಮಾತನಾಡುತ್ತಿದ್ದೇನೆ ಎಂಬುದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೇ ಗೊತ್ತಿರುವುದಿಲ್ಲ. ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ನನ್ನನ್ನು ನೋಡಿಯೂ ಇಲ್ಲ, ಮಾತನಾಡಿಯೂ ಇಲ್ಲ. ಒಂದು ವೇಳೆ ಕುಮಾರಸ್ವಾಮಿ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಚಂದ್ರಶೇಖರ್ ಅವರಿಗೆ ಕೆಪಿಸಿಸಿ ಕಚೇರಿಯಿಂದ ಪತ್ರ ಬಂದಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಊರಿನಲ್ಲೇ ಇಲ್ಲ. ಸಾತನೂರು, ಕನಕಪುರದಲ್ಲಿ ಕ್ಷೇತ್ರದ ಕೆಲಸ ಕಾರ್ಯಗಳ ಕುರಿತು ಓಡಾಡುತ್ತಿದ್ದೇನೆ. ಕುಮಾರಸ್ವಾಮಿ ಅವರು ಕೆಪಿಸಿಸಿ ನೆನೆಸಿಕೊಂಡರೆ ನಾನು ಏನು ಮಾತನಾಡಲು ಸಾಧ್ಯ? ಎಂದು ಪ್ರಶ್ನಿಸಿದರು.
ಇನ್ನು ಕುಮಾರಸ್ವಾಮಿ ಅವರ ಬಳಿ ದಾಖಲೆಗಳಿವೆ ಎಂದು ಹೇಳುತ್ತಿದ್ದಾರೆ. ಅವರ ಬಳಿ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ. ಚಂದ್ರಶೇಖರ್ ಅವರು ನನ್ನ ನೋಡಿಯೂ ಇಲ್ಲ, ಮಾತನಾಡಿಯೂ ಇಲ್ಲ, ನನಗೆ ಅವರು ಸಿಕ್ಕಿಲ್ಲ, ನನಗೆ ಗೊತ್ತೇ ಇಲ್ಲ ಎಂದು ಸ್ಪಷ್ಟಪಡಿಸಿದರು.