ಸಾರಾಂಶ
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿರುವಾಗಲೇ ಕೇಂದ್ರದ ಭಾರಿ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮೂಗಿನಲ್ಲಿ ರಕ್ತಸ್ರಾವ ಆದ ಘಟನೆ ಭಾನುವಾರ ನಡೆದಿದೆ. ಕೂಡಲೇ ಅವರನ್ನು ಜಯನಗರ ಅಪೊಲೋ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.
ಬೆಂಗಳೂರು: ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿರುವಾಗಲೇ ಕೇಂದ್ರದ ಭಾರಿ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮೂಗಿನಲ್ಲಿ ರಕ್ತಸ್ರಾವ ಆದ ಘಟನೆ ಭಾನುವಾರ ನಡೆದಿದೆ. ಕೂಡಲೇ ಅವರನ್ನು ಜಯನಗರ ಅಪೊಲೋ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.
ಹೃದ್ರೋಗಿಯಾಗಿರುವುದರಿಂದ ಕುಮಾರಸ್ವಾಮಿ ಅವರು ತೆಗೆದುಕೊಳ್ಳುತ್ತಿರುವ ಬ್ಲಡ್ ಥಿನ್ನರ್ ಮಾತ್ರೆಗಳಿಂದ ರಕ್ತಸ್ರಾವ ಆಗಿದೆ. ಉಳಿದಂತೆ ಅವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಆತಂಕಪಡುವ ಅಗತ್ಯವೇ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮುಡಾ ಅಕ್ರಮ ಕುರಿತು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಳ್ಳುವ ಕುರಿತಂತೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಮನ್ವಯ ಸಭೆ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಅವರು, ‘ಈ ಸರ್ಕಾರ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದೆ. ಭಂಡ ಧೈರ್ಯದಿಂದ ಅಕ್ರಮಗಳನ್ನು ನಡೆಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆಗೆ ಸರಿಯಾಗಿ ಮೂಗಿನಲ್ಲಿ ರಕ್ತಸ್ರಾವ ಆದ ಅನುಭವವಾಗಿ ಕೈನಲ್ಲಿ ಮೂಗು ಮುಟ್ಟಿಕೊಂಡಾಗ ಕೈಗೆ ರಕ್ತ ಅಂಟಿದೆ.
ತಕ್ಷಣ ಕುಮಾರಸ್ವಾಮಿ ಅವರು ಮೂಗಿನಲ್ಲಿ ರಕ್ತ ಬರುತ್ತಿದೆ ಎಂದು ಹೇಳಿ ಸಹಾಯಕರಿಂದ ಟವಲ್ ಪಡೆದು ಅಡ್ಡ ಇಟ್ಟುಕೊಂಡರೂ ರಕ್ತಸ್ರಾವ ನಿಲ್ಲಲಿಲ್ಲ. ಹೀಗಾಗಿ ತಲೆ ಮೇಲಕ್ಕೆ ಎತ್ತಿ ಹಿಡಿದು ಕುಮಾರಸ್ವಾಮಿ ಅವರನ್ನು ಕೂಡಲೇ ಅಪೊಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇಎನ್‌ಟಿ ತಜ್ಞರಿಂದ ಪರಿಶೀಲನೆ, ಆತಂಕ ಇಲ್ಲ:
ಆಸ್ಪತ್ರೆಯ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ಯತೀಶ್ ತಂಡದಿಂದ ಚಿಕಿತ್ಸೆ ನೀಡಲಾಗಿದ್ದು, ಎಲ್ಲಾ ರೀತಿಯ ಪರೀಕ್ಷೆಗಳನ್ನೂ ನಡೆಸಲಾಗಿದೆ. ರಕ್ತದೊತ್ತಡ ಸೇರಿದಂತೆ ಎಲ್ಲವೂ ಸಾಮಾನ್ಯ ಸ್ಥಿತಿಯಲ್ಲಿವೆ. ಈಗಾಗಲೇ ಕುಮಾರಸ್ವಾಮಿ ಅವರಿಗೆ ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮಾರ್ಚ್‌ನಲ್ಲಷ್ಟೇ ಮೂರನೇ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಹೀಗಾಗಿ ರಕ್ತ ಹೆಪ್ಪು ಗಟ್ಟುವುದನ್ನು ತಡೆಯಲು ಬ್ಲಡ್ ತಿನ್ನರ್ ಮಾತ್ರೆಗಳನ್ನು ಸೇವಿಸುತ್ತಿದ್ದು, ಇದರಿಂದ ಈ ರೀತಿ ಆಗಿದೆ. ಅದನ್ನು ಹೊರತುಪಡಿಸಿ ಯಾವುದೇ ಸಮಸ್ಯೆಯಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಯತೀಶ್, ‘ಕುಮಾರಸ್ವಾಮಿ ಅವರು ಹೃದ್ರೋಗಿ ಆಗಿರುವುದರಿಂದ ಬ್ಲಡ್ ಥಿನ್ನರ್ ಸೇರಿ ಕೆಲವು ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ಹಿಂದೆ ಒಮ್ಮೆ ಅವರಿಗೆ ಸ್ಟ್ರೋಕ್ ಕೂಡ ಆಗಿತ್ತು. ಇದೇ ಕಾರಣಕ್ಕೆ ದೇಹದಲ್ಲಿ ಉಷ್ಣ ಹೆಚ್ಚಾಗಿ ಮೂಗಿನಲ್ಲಿ ರಕ್ತಸ್ರಾವ ಆಗಿರಬಹುದು. ನಮ್ಮ ಬಳಿ ಬರುವಾಗ ರಕ್ತಸ್ರಾವ ನಿಂತು ಹೋಗಿತ್ತು’ ಎಂದು ಸ್ಪಷ್ಟಪಡಿಸಿದರು.
ಅವರ ರಕ್ತ ಹೆಪ್ಪುಗಟ್ಟುವ ಶಕ್ತಿ ಪರೀಕ್ಷಿಸಲಾಗಿದೆ. ಜತೆಗೆ ರಕ್ತದೊತ್ತಡ ಸೇರಿ ಎಲ್ಲ ಪರೀಕ್ಷೆಯನ್ನೂ ನಡೆಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿಲ್ಲ. ಎಲ್ಲರೂ ಸಹ ಆರೋಗ್ಯಕ್ಕೆ ಒತ್ತು ನೀಡಬೇಕು. ಅವರು ಇತ್ತೀಚೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಪ್ರಸ್ತುತ ಹೊರರೋಗಿ ಮಾದರಿಯಲ್ಲೇ ಚಿಕಿತ್ಸೆ ನೀಡಿದ್ದು, ಅವರನ್ನು ಮನೆಗೆ ಕಳುಹಿಸಲಾಗುವುದು. ಸೋಮವಾರ ದೆಹಲಿಗೆ ತೆರಳಲಿದ್ದು, ವಿಮಾನಕ್ಕೆ ಹೋಗುವ ಸಮಯ ಸ್ವಲ್ಪ ವಿಳಂಬವಾಗಬಹುದು ಎಂದರು.
ಆತಂಕ ಬೇಡ: ನಿಖಿಲ್
ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸಚಿವರಾದ ಬಳಿಕ ದೇಹಕ್ಕೆ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದು, ರಾತ್ರಿ 12ರಿಂದ 1ಗಂಟೆವರೆಗೂ ಅಧ್ಯಯನ ಮಾಡುತ್ತಿರುತ್ತಾರೆ. ಪ್ರತಿ ತಿಂಗಳೂ ಅವರ ಆರೋಗ್ಯ ಪರೀಕ್ಷೆ ಮಾಡುತ್ತೇವೆ. ಅವರ ಆರೋಗ್ಯಕ್ಕೆ ಸಮಸ್ಯೆಯಾಗಿಲ್ಲ. ದೇವೇಗೌಡರು, ಚೆನ್ನಮ್ಮ, ಈಶ್ವರ ಹಾಗೂ ರೈತರ ಆಶೀರ್ವಾದ ಅವರಿಗೆ ಇದೆ. ಹೀಗಾಗಿ ಯಾರೂ ಆತಂಕಪಡುವ ಅಗ್ಯವಿಲ್ಲ ಎಂದರು.
ಗಾಬರಿಪಡುವ ಅಗತ್ಯವಿಲ್ಲ: ಡಾ.ಮಂಜುನಾಥ್
ಕುಮಾರಸ್ವಾಮಿ ಅವರು ಹಿಂದಿನ ವರ್ಷ ಲಂಡನ್‌ನಲ್ಲಿ ಇದ್ದಾಗಲೂ ಇದೇ ರೀತಿ ಆಗಿತ್ತು. ಪ್ರತಿ ತಿಂಗಳು ಆರೋಗ್ಯ ಪರೀಕ್ಷೆ, ಪ್ರತಿ ವಾರ ರಕ್ತದೊತ್ತಡ ಪರೀಕ್ಷೆ, ನಿತ್ಯ ಸಕ್ಕರೆ ಕಾಯಿಲೆ ಪರೀಕ್ಷೆ ನಡೆಸಲಾಗುತ್ತದೆ. ಹೃದಯ ಚಿಕಿತ್ಸೆಯಿಂದ ನೀಡಿದ್ದ ಬ್ಲಡ್ ತಿನ್ನರ್‌ನಿಂದ ಈ ರೀತಿ ಆಗುತ್ತದೆ. ರಕ್ತದೊತ್ತಡ, ಮಧುಮೇಹ ಸೇರಿದಂತೆ ಎಲ್ಲವೂ ಸಹಜ ಸ್ಥಿತಿಯಲ್ಲಿವೆ. ಗಾಬರಿಪಡುವ ಅಗತ್ಯವಿಲ್ಲ.
- ಡಾ.ಸಿ.ಎನ್. ಮಂಜುನಾಥ್, ಸಂಸದರು ಮತ್ತು ಹೃದ್ರೋಗ ತಜ್ಞ