ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕ್ಷೇತ್ರ ಹಂಚಿಕೆ ಹಾಗೂ ಅಭ್ಯರ್ಥಿ ಘೋಷಣೆಗೂ ಮುನ್ನ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಜೆಡಿಎಸ್ ಮುಖಂಡರ ಸಭೆಯನ್ನು ಭಾನುವಾರ ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡೆಸಿದರು.
ಅಭ್ಯರ್ಥಿ ಯಾರೇ ಆದರೂ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮ ಪಕ್ಷದ ಮೇಲಿದೆ. ಹೀಗಾಗಿ ಮಿತ್ರಪಕ್ಷ ಬಿಜೆಪಿ ಜತೆಗೂಡಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮುಖಂಡರಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಕ್ಷೇತ್ರದಲ್ಲಿನ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಈ ವೇಳೆ, ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಮುಖಂಡರು ಮಾಡಿದ ಒತ್ತಾಯವನ್ನು ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ನಯವಾಗಿ ತಿರಸ್ಕರಿಸಿದರು.
ಈ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಬಿಜೆಪಿಯನ್ನು ಕೇಳಬೇಕು ಎಂದು ಕ್ಷೇತ್ರದ ಮುಖಂಡರು ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿದರು.
ಈ ಬಗ್ಗೆ ತಾವು ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸುವುದಾಗಿ ಮುಖಂಡರಿಗೆ ತಿಳಿಸಿದ ಹೆಚ್‌ಡಿಕೆ, ಕ್ಷೇತ್ರ ಯಾವ ಪಕ್ಷದ ಪಾಲಾದರೂ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಈ ವೇಳೆ ವಿಧಾನಸಭೆಯ ಮಾಜಿ ಶಾಸಕ ಕೆ.ಎಂ.ಕೃಷ್ಣಾರೆಡ್ಡಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕರಾದ ಇ.ಕೃಷ್ಣಪ್ಪ, ಹೆಚ್.ಎಂ.ರಮೇಶ್ ಗೌಡ, ಡಾ.ಶ್ರೀನಿವಾಸ ಮೂರ್ತಿ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮುನೇಗೌಡ, ಮತ್ತಿತರರು ಸಭೆಯಲ್ಲಿ ಇದ್ದರು.