ಸಾರಾಂಶ
ನಾಗಮಂಗಲ ಗಲಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖ್ಯಾತಿಗೆ ಕಳಂಕ ತರಲು ಕಾಂಗ್ರೆಸ್ ನಾಯಕರಿಂದಲೇ ನಡೆದ ಕೃತ್ಯವೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ನಾಗಮಂಗಲ : ನಾಗಮಂಗಲ ಗಲಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ನಾಯಕರೇ ನಡೆಸಿದ ಕೃತ್ಯ ಎಂಬಂತೆ ಕಾಣುತ್ತಿದೆ. ಇದು ಕಾಂಗ್ರೆಸ್ ಪ್ರಾಯೋಜಿತ ಗಲಭೆ ಎಂಬ ಶಂಕೆ ಮೂಡಿದೆ ಎಂದು ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಗಣೇಶ ಮೂರ್ತಿ ಮೆರವಣಿಗೆ ವೇಳೆ ಸಂಭವಿಸಿದ ಗಲಭೆ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಕಾಂಗ್ರೆಸ್‌ನವರೇ ನಡೆಸಿದ ಕೃತ್ಯದಂತಿದೆ ಎಂದು ತಿಳಿಸಿದರು.
ನಾಗಮಂಗಲ ಗಲಭೆಗೆ ನಿಖರ ಕಾರಣ ಏನೆಂಬುದನ್ನು ಸರ್ಕಾರವೇ ಹೇಳಬೇಕು. ಕಾಂಗ್ರೆಸ್ ಪಕ್ಷದೊಳಗೆ ಸದ್ಯ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ಒಂದು ಕಡೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎನ್ನುತ್ತಾರೆ. ಮತ್ತೊಂದೆಡೆ 8-10 ಜನ ಕುರ್ಚಿಗಾಗಿ ಟವೆಲ್ ಹಾಕಿಕೊಂಡು ಕೂತಿದ್ದಾರೆ. 1990ರಲ್ಲಿ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಇದೇ ರೀತಿ ಮಾಡಿದ್ದರು. ರಾಮನಗರ, ಚನ್ನಪಟ್ಟಣದಲ್ಲಿ ಗಲಾಟೆ ಮಾಡಿಸಿದ್ದರು. ಆಗ ಕಾಂಗ್ರೆಸ್‌ನವರೇ ಬೆಂಕಿ ಹಚ್ಚಿ ಗಲಭೆ ಸೃಷ್ಟಿಸಿದ್ದರು. ಅದೇ ರೀತಿ ಇದು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ನಾಯಕರು ನಡೆಸಿದ ಕೃತ್ಯ ಎಂಬಂತೆ ಕಾಣುತ್ತಿದೆ. ಹಾಗಾಗಿ ನಾಗಮಂಗಲದ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂಬ ಅನುಮಾನ ವ್ಯಕ್ತಪಡಿಸಿದರು.
ಈ ಹಿಂದೆ ಡಿಜೆ ಹಳ್ಳಿ, ಕೆಜೆ ಹಳ್ಳಿಯ ಗಲಭೆಯ ಪ್ರಾಯೋಜಕರೂ ಕಾಂಗ್ರೆಸ್ ನಾಯಕರೇ ಆಗಿದ್ದರು. ಅಲ್ಲಿ ಜೈಲಿಗೆ ಹೋದವರು ಈಗ ಏನು ಮಾಡುತ್ತಿದ್ದಾರೆ. ಈ ರೀತಿ ನಾಗಮಂಗಲದಲ್ಲೂ ಆಗಬೇಕಾ? ಎಂದು ಕಿಡಿಕಾರಿದರು.
ಪೊಲೀಸ್ ವೈಫಲ್ಯ ಕಾರಣ:
ನಾಗಮಂಗಲ ಗಲಭೆಗೆ ಪೊಲೀಸರ ವೈಫಲ್ಯವೇ ಪ್ರಮುಖ ಕಾರಣ ಎಂದು ಕುಮಾರಸ್ವಾಮಿ ಆರೋಪಿಸಿದರು.
ಕಳೆದ ವರ್ಷ ಗಣೇಶಮೂರ್ತಿ ಮೆರವಣಿಗೆ ಸಮಯದಲ್ಲೂ ಎರಡೂ ಕೋಮಿನವರ ನಡುವೆ ಗಲಾಟೆ ಆಗಿತ್ತು. ಹಾಗಿದ್ದ ಮೇಲೆ ಈ ಬಾರಿ ಮೆರವಣಿಗೆ ನಡೆಯುವ ಸಮಯದಲ್ಲೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿತ್ತು. ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದರೆ ಈ ಘಟನೆಯನ್ನು ತಡೆಯಬಹುದಿತ್ತು ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇದೊಂದು ಸಣ್ಣ ಗಲಾಟೆ ಎಂದಿದ್ದಾರೆ. ಪ್ರಕರಣದ ಕುರಿತ ಎಫ್‌ಐಆರ್ ನೋಡಿದರೆ ಡಾ.ಪರಮೇಶ್ವರ್ ಅವರನ್ನು ಗೃಹ ಸಚಿವರು ಎಂದು ಹೇಳಲಾಗದು. ಗಲಭೆ ವೇಳೆ ಪೊಲೀಸರನ್ನೂ ಕೊಲೆ ಮಾಡಲೂ ಬಂದಿದ್ದಾರೆಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿರೋದು ಪೊಲೀಸರಿಗೇ ಭದ್ರತೆ ನೀಡಲಾಗದ ದರಿದ್ರ ಸರ್ಕಾರ ಎಂದು ಟೀಕಿಸಿದರು.ಗಣೇಶ ಕೂರಿಸಿದರನ್ನೇ ಎ-1 ಆರೋಪಿ ಮಾಡಿದ್ದಾರೆ. ಇದು ಪೊಲೀಸರ ನಡವಳಿಕೆ ತೋರಿಸುತ್ತದೆ. ಪೊಲೀಸರು ತಮ್ಮ ಲೋಪ ಮುಚ್ಚಿಕೊಳ್ಳಲು ಸಿಕ್ಕಸಿಕ್ಕವರನ್ನು ಬಂಧಿಸಿದ್ದಾರೆ. ಅಮಾಯಕರನ್ನು ಬಂಧಿಸಿರುವುದು ತಪ್ಪು ಎಂದರು.ಒಂದು ಸಮುದಾಯದ ಓಲೈಕೆಗಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ನಿಜವಾದ ಗಲಭೆಕೋರರ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಯಾರು ಗಲಭೆ ಕೆಲಸ ಮಾಡುತ್ತಿದ್ದಾರೆ ಎಂಬ ಕುರಿತು ತನಿಖೆ ಮಾಡಲಿ. ಅಮಾಯಕರ ಮೇಲೆ ಕ್ರಮ ಆಗುವುದನ್ನು ತಪ್ಪಿಸಲಿ ಎಂದರು.
ಸಿದ್ದುಗೆ ಕೆಟ್ಟ ಹೆಸರು ತರುವ ಕೃತ್ಯದಂತಿದೆ
1990ರಲ್ಲಿ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ರಾಮನಗರ, ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನವರೇ ಬೆಂಕಿ ಹಚ್ಚಿ ಗಲಭೆ ಸೃಷ್ಟಿಸಿದ್ದರು. ಅದೇ ರೀತಿ ಇದು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ನಾಯಕರು ನಡೆಸಿದ ಕೃತ್ಯ ಎಂಬಂತೆ ಕಾಣುತ್ತಿದೆ. ಹಾಗಾಗಿ ನಾಗಮಂಗಲದ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡವಿದ್ದಂತಿದೆ.
- ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ