ಕೇಂದ್ರ ಸಚಿವ ಕುಮಾರಸ್ವಾಮಿ ಮಾತಿಗೂ ಕೃತಿಗೂ ಹೋಲಿಕೆಯೇ ಇಲ್ಲ : ಶಾಸಕ ಬಾಲಕೃಷ್ಣ ವಾಗ್ದಾಳಿ

| Published : Sep 14 2024, 01:54 AM IST / Updated: Sep 14 2024, 04:31 AM IST

HC Balakrishna

ಸಾರಾಂಶ

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಅಭಿವೃದ್ಧಿ ವಿಚಾರದಲ್ಲಿ ಎಂದೂ ವೋಟ್ ಕೇಳಿಲ್ಲ, ಅವರ ಮಾತಿಗೂ ಕೃತಿಗೂ ಹೋಲಿಕೆ ಇಲ್ಲ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ಟೀಕಿಸಿದ್ದಾರೆ.  

ಮಾಗಡಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಎಲ್ಲೇ ಹೋದರೂ ಬೆಂಕಿ ಕಡ್ಡಿ ಇಲ್ಲದೆಯೇ ಬೆಂಕಿ ಹಚ್ಚುತ್ತಾರೆ. ಅವರು ಯಾವತ್ತೂ ಅಭಿವೃದ್ಧಿ ವಿಚಾರದಲ್ಲಿ ವೋಟ್ ಕೇಳಿಲ್ಲ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ಟೀಕಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಅವರ ಮಾತಿಗೂ ಕೃತಿಗೂ ಹೋಲಿಕೆ ಆಗುವುದಿಲ್ಲ. ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಗಲಭೆ ಮಾಡಿದ್ದಾರೆನ್ನುವ ಕುಮಾರಸ್ವಾಮಿ ಮನಸ್ಥಿತಿ ಎಂತಹದ್ದು ಎಂಬುದು ಅವರ ಮಾತುಗಳಲ್ಲೇ ಗೊತ್ತಾಗುತ್ತದೆ. ಕಾಂಗ್ರೆಸ್ ಒಂದು ಕೋಮಿನ ಓಲೈಕೆ ಮಾಡುತ್ತಿದೆ ಎನ್ನುವ ಕುಮಾರಸ್ವಾಮಿ ಅವರನ್ನೇ ಈ ಪ್ರಕರಣದ ತನಿಖಾಧಿಕಾರಿಗಳನ್ನಾಗಿ ಮಾಡುವಂತೆ ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ. ಅವರ ತನಿಖೆಯಿಂದಲೇ ಎಲ್ಲಾ ಹೊರಗಡೆ ಬರಲಿ ಎಂದು ತಿರುಗೇಟು ನೀಡಿದರು.

ನಾಗಮಂಗಲದಲ್ಲಿ ನಡೆದಿರುವುದು ಸಣ್ಣ ಗಲಾಟೆ. ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುತ್ತಿದೆ. ಯಾವುದೇ ಒಂದು ಧರ್ಮವನ್ನು ಓಲೈಕೆ ಮಾಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ. ಧರ್ಮದ ವಿಚಾರದಲ್ಲಿ ಯಾರೇ ತೊಂದರೆ ಕೊಟ್ಟರೂ ಅವರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದರು.