ಸಾರಾಂಶ
ಮಾಲೂರು : ಜಾತಿ, ಜನಾಂಗ, ಮತ, ಪಂಥವಿಲ್ಲದೆ, ಸರ್ವ ಜನಾಂಗವನ್ನು ಸಮಾನತೆಯಿಂದ ಕಾಣುವುದು ಕಾಂಗ್ರೆಸ್ ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಹೇಳಿದರು.ಅವರು ಈ ತಿಂಗಳ ೧೭ ರಂದು ರಾಹುಲ್ ಗಾಂಧಿ ಅವರು ಲೋಕಸಭೆ ಚುನಾವಣೆ ಸಂಬಂಧ ಮಾಲೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ನಗರ ಹೊರವಲಯದಲ್ಲಿ ಸಿದ್ಧಪಡಿಸುತ್ತಿರುವ ಬೃಹತ್ ಸಮಾವೇಶದ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಜಾತ್ಯತೀತ ಪಕ್ಷ ಕಾಂಗ್ರೆಸ್
ಕಾಂಗ್ರೆಸ್ ಜಾತ್ಯತೀತ ಪಕ್ಷವಾಗಿದ್ದು, ಪ್ರತಿಯೊಂದು ಜನಾಂಗವನ್ನು ಸಹೋದರತೆಯ ಭಾವನೆಯಲ್ಲಿ ಕಾಣುವಂತಹದ್ದು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜತೆಗೆ ಒಳಪಂಡಗಳನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯ ಕುರಿತು ಚಿಂತಿಸುವ ಪಕ್ಷವಾಗಿರುವ ಕಾಂಗ್ರೆಸ್ ಕುರಿತು ಅನೇಕರು ಆರೋಪಗಳ ಮಾಡುವುದು ಸಹಜ. ಯಾರೂ ಎತ್ತಿಕಟ್ಟಿದರೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬಲಾಢ್ಯವಾದ ಸರ್ಕಾರವಾಗಿದ್ದು, ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಸೇರಿ ವರ್ಷಕ್ಕೆ ೬೫ ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಮೇಲೆ ಅರೋಪ ಮಾಡಲು ಬಿಜೆಪಿ ಮತ್ತು ದಳಕ್ಕೆ ಯಾವುದೇ ನೈತಿಕ ಹಕ್ಕಿಲ್ಲ ಎಂದರು.17ಕ್ಕೆ ರಾಹುಲ್ ಪ್ರಚಾರ
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಏ.೧೭ರಂದು ಮಧ್ಯಾಹ್ನ ೩ ಕ್ಕೆ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಂಪುಟದ ಸಚಿವರು ಜಿಲ್ಲಾ ಶಾಸಕರು, ಸೇರಿ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ವಿ. ಗೌತಮ್ ಪರ ಪ್ರಚಾರ ಮಾಡಲು ಆಗಮಿಸಲಿದ್ದು, ಬೃಹತ್ ಸಮಾವೇಶವನ್ನು ಮಾಲೂರಿನಲ್ಲಿ ಆಯೋಜಿಸಲಾಗಿದೆ ಎಂದರು.
ಒಕ್ಕಲಿಗ ಸಮುದಾಯ ಕಾಂಗ್ರೆಸ್ ಮೇಲೆ ಮುನಿಸಿಕೊಂಡು, ಕುಮಾರಣ್ಣ ಪರ ಮತಚಲಾಯಿಸದ್ದೇ ಆದ್ದಲ್ಲಿ ಎಚ್‌ಡಿಕೆ ಮುಖ್ಯಮಂತ್ರಿಗಳಾಗುತ್ತಾರಾ ಎಂದು ಪ್ರಶ್ನಿಸಿದ ಶಾಸಕರು ಜಾತ್ಯತೀತ ಜನತಾದಳವೆಂದು ಎಚ್.ಡಿ. ದೇವೇಗೌಡರು ಕಟ್ಟಿದ ಪಕ್ಷದಲ್ಲಿ ಆನೇಕ ಸ್ಥಾನಮಾನ ಪಡೆದ ಕುಮಾರಣ್ಣ ಕೋಮುವಾದಿ ಪಕ್ಷದ ಜತೆ ಸೇರಿರುವುದಕ್ಕೆ ಒಕ್ಕಲಿಗ ಸಮುದಾಯ ನಂಬುವುದಿಲ್ಲ ಎಂದರು.
ಜಾತಿ ರಾಜಕೀಯ ಯಶಸ್ವಿ ಆಗೋಲ್ಲ
ಬಿಜೆಪಿ ಜಾತಿ ಹೆಸರೇಳಿಕೊಂಡು ರಾಜಕಾರಣ ಮಾಡುವುದರಿಂದ ಯಶಸ್ವಿಯಾಗುವುದಿಲ್ಲ. ರಾಜ್ಯದಿಂದ ಬಿಜೆಪಿ ಅವನತಿ ಪ್ರಾರಂಭವಾಗಲಿದ್ದು, ದೇಶದಲ್ಲಿ ಬಿಜೆಪಿ ಮೂಲೆಗುಂಪಾಗುವುದು ನಿಶ್ಚಯ. ಹೂಡಿ ವಿಜಯ್‌ಕುಮಾರ್ ಮೂಲತಃ ಆರ್.ಎಸ್.ಎಸ್. ಬಿಜೆಪಿಯಿಂದ ಬಂದವರಾಗಿದ್ದು, ಬೆಂಗಳೂರಿನಿಂದ ಬಂದು ತಾಲೂಕಿನಲ್ಲಿ ಶಾಸಕರಾಗಲು ಪ್ರಯತ್ನ ಪಟ್ಟಿದ್ದರು, ಮಾಲೂರಿನಲ್ಲಿ ಮನೆ ಮಾಡಿದಾಗ ಸಹ ಮೋದಿ ನಿವಾಸ ಎಂದು ಹೆಸರಿಟ್ಟಿದ್ದರು, ಮಸೀದಿಗಳಿಗೆ ತೆರಳಿ ಕೋಮುವಾದಿ ಪಕ್ಷದ ಜತೆ ಹೋಗುವುದಿಲ್ಲ ಎಂದಿದ್ದನ್ನು ಸಚಿವರು ನೆನಪಿಸಿದರು.
ಹೂಡಿ ವಿಜಯಕುಮಾರ್ ಮನೆಯ ಒಂದು ಮೂಲೆಯಲ್ಲಿ ಕೆಂಪೇಗೌಡ ಇನ್ನೊಂದಡೆ ಕನಕದಾಸರ ಪ್ರತಿಮೆ ನಿಲ್ಲಿಸಿ ಜಾತ್ಯತೀತದ ಫೋಸ್ ನೀಡಿದ್ದರು. ಈಗ ಅವರ ಬಣ್ಣ ಬಯಲಾಗಿದ್ದು, ಅವರ ಡ್ರಾಮ ನಡೆಯುವುದಿಲ್ಲ. ಜನತೆ ಅರಿತುಕೊಂಡು ಎಚ್ಚೆತ್ತುಕೊಂಡಿದ್ದು, ಕಾಂಗ್ರೆಸ್ ಪರ ಅಲೆಗೆ ಮತ್ತಷ್ಟು ಶಕ್ತಿ ತುಂಬುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ರವಿಶಂಕರ್, ಇನ್ಸ್‌ಪೆಕ್ಟರ್ ವಸಂತಕುಮಾರ್, ಡಿಸಿಸಿ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್, ಕೆಪಿಸಿಸಿ ಸದಸ್ಯ ಅಂಜನಿ ಸೋಮಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ಮಧುಸೂದನ್, ಎಚ್.ಎಂ.ವಿಜಯನರಸಿಂಹ, ಬಗರ್ ಹುಕುಂ ಅಧ್ಯಕ್ಷ ಆನೆಪುರ ಹನುಮಂತಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎನ್.ವಿ.ಮುರುಳೀಧರ್, ಸದಸ್ಯ ಜಾಕೀರ್, ದರಖಾಸ್ತು ಸಮಿತಿ ಸದಸ್ಯ ನಾಗಾಪುರ ನವೀನ್, ಯೋಜನಾ ಪ್ರಾಧಿಕಾರದ ಅದ್ಯಕ್ಷ ನಹೀಮ್‌ಉಲ್ಲಾ, ಕಾಂಗ್ರೆಸ್ ವೈದ್ಯಕೀಯ ಘಟಕದ ಡಾ.ಕಿರಣ್‌ಸೋಮಣ್ಣ ಇದ್ದರು.