ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಸಂಬಂಧ ಕಳೆದ 10 ತಿಂಗಳಿಂದ ಭೂ ಮಂಜೂರಾತಿ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರು : ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಸಂಬಂಧ ಕಳೆದ 10 ತಿಂಗಳಿಂದ ಭೂ ಮಂಜೂರಾತಿ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ. ಕೈಗಾರಿಕೆ ಸ್ಥಾಪನೆ ಕುರಿತು ನಡೆದಿರುವ ಸಭೆಗಳು, ರಾಜ್ಯ ಮತ್ತು ಕೇಂದ್ರ ನಡುವೆ ಆಗಿರುವ ಪತ್ರ ವ್ಯವಹಾರಗಳು, ವಿವಿಧ ಸಭೆಗಳ ನಡಾವಳಿಗಳು ಹಾಗೂ ಇನ್ನಿತರ ಮಹತ್ವದ ದಾಖಲೆಗಳನ್ನು ಪತ್ರದೊಂದಿಗೆ ಲಗತ್ತಿಸಿದ್ದಾರೆ. ಆ ದಾಖಲೆಗಳನ್ನು ಮಾಧ್ಯಮಗಳಿಗೂ ಬಿಡುಗಡೆಗೊಳಿಸಿದ್ದಾರೆ.
ಸರ್ಕಾರದ ನಡೆಗೆ ಬೇಸರ:
ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್ಎಐ) ವತಿಯಿಂದ ಪ್ರಸ್ತಾಪಿಸಲಾಗಿರುವ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ (ಸಿಐಇ ಟೆಸ್ಟ್ ಸೆಂಟರ್) ಹಾಗೂ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ (ಇವಿ ಟೆಸ್ಟ್ ಸೆಂಟರ್) ಸ್ಥಾಪನೆಗಾಗಿ ಮಂಡ್ಯ ಜಿಲ್ಲೆಯಲ್ಲಿ ಭೂಮಿ ಮಂಜೂರು ಮಾಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ.
ಕಳೆದ 10 ತಿಂಗಳುಗಳಿಂದ ನಾವು ನಿರಂತರವಾಗಿ ಈ ಬಗ್ಗೆ ರಾಜ್ಯ ಸರ್ಕಾರದ ಸಕಾರಾತ್ಮಕ ನಿರ್ಧಾರದ ನಿರೀಕ್ಷೆಯಲ್ಲಿದ್ದೇವೆ. ಸ್ಥಳ ಪರಿಶೀಲನೆ, ತಾಂತ್ರಿಕ ಮೌಲ್ಯಮಾಪನ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸುವ ಮೂಲಕ ಈ ಪ್ರಕ್ರಿಯೆಯನ್ನು ಸಕ್ರಿಯವಾಗಿ ಮುಂದುವರಿಸುತ್ತಿದ್ದೇವೆ. ಈ ಎಲ್ಲ ನಿರಂತರ ಪ್ರಯತ್ನಗಳ ಹೊರತಾಗಿಯೂ ಜಿಲ್ಲಾಡಳಿತ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಇನ್ನೂ ಭೂಮಿ ಮಂಜೂರಾತಿ ಇತ್ಯರ್ಥಗೊಂಡಿಲ್ಲ ಎಂದು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ.
ಕೈಗಾರಿಕಾ ವಲಯದಲ್ಲಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ
ಈಗಾಗಲೇ ಎಆರ್ಎಐ ಸಂಸ್ಥೆಯ ತಂಡವು ಮಂಡ್ಯ ತಾಲೂಕಿನ ಬಸರಾಳು, ಮಂಡ್ಯ ಸಕ್ಕರೆ ಕಾರ್ಖಾನೆ ಮತ್ತು ಕೆ.ಆರ್.ಪೇಟೆ ಕೈಗಾರಿಕಾ ವಲಯದಲ್ಲಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಬಳಿಕ ಸಂಬಂಧಿತ ಸರ್ಕಾರದ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸಭೆ ನಡೆಸಿ ಯೋಜನೆಯ ವಿಸ್ತೃತ ವಿವರ ಹಾಗೂ ಭೂಮಿ ಅಗತ್ಯತೆಯ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದೊಂದಿಗೆ ಸುಮಾರು 10 ತಿಂಗಳ ಕಾಲ ಅನೇಕ ಸಭೆಗಳನ್ನು ನಡೆಸಿ, ಚರ್ಚಿಸಿ ಹಾಗೂ ಪತ್ರ ವ್ಯವಹಾರಗಳನ್ನು ನಡೆಸಿದರೂ ಸಾರ್ವಜನಿಕ ಉಪಯೋಗದ ಯೋಜನೆಗಳಿಗೆ ಮೂಲ ಅಗತ್ಯವಾದ ಭೂಮಿ ಮಂಜೂರು ಮಾಡುವ ರಾಜ್ಯ ಸರ್ಕಾರದ ಹಾಗೂ ಮಂಡ್ಯ ಜಿಲ್ಲಾಡಳಿತದ ನಿರ್ಧಾರಕ್ಕಾಗಿ ಇಂಥ ಪ್ರಮುಖ ಯೋಜನೆಯು ಕಾಯುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


