ಪ್ರಿಯಾಂಕಾ ನಾಮಪತ್ರ ವೇಳೆ ರಾಷ್ಟ್ರಾಧ್ಯಕ್ಷ ಖರ್ಗೆಯವರನ್ನೇ ಹೊರ ನಿಲ್ಲಿಸಿದ ಕಾಂಗ್ರೆಸ್‌!

| Published : Oct 25 2024, 12:52 AM IST / Updated: Oct 25 2024, 04:36 AM IST

ಸಾರಾಂಶ

ಕೇರಳದ ವಯನಾಡು ಕ್ಷೇತ್ರದ ಲೋಕಸಭೆ ಉಪ ಚುನಾವಣೆಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಬುಧವಾರ ನಾಮಪತ್ರ ಸಲ್ಲಿಸುವ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗೆ ನಿಲ್ಲಿಸಿ ಗಾಂಧಿ ಕುಟುಂಬ ಅವಮಾನ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ವಯನಾಡು: ಕೇರಳದ ವಯನಾಡು ಕ್ಷೇತ್ರದ ಲೋಕಸಭೆ ಉಪ ಚುನಾವಣೆಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಬುಧವಾರ ನಾಮಪತ್ರ ಸಲ್ಲಿಸುವ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗೆ ನಿಲ್ಲಿಸಿ ಗಾಂಧಿ ಕುಟುಂಬ ಅವಮಾನ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ಮುಕ್ಕಾಲು ಭಾಗ ಮುಚ್ಚಿದ ಬಾಗಿಲಿನ ಸಂಧಿಯಿಂದ ಖರ್ಗೆ ಒಳಗೆ ನೋಡುತ್ತಿರುವ ವಿಡಿಯೋವೊಂದನ್ನು ಬಿಜೆಪಿ ನಾಯಕ ರಾಜೀವ್‌ ಚಂದ್ರಶೇಖರ್‌ ‘ಎಕ್ಸ್‌’ ಮಾಡಿ, ‘ಖರ್ಗೆ ಗಾಂಧಿ ಕುಟುಂಬದವರಲ್ಲ. ಹೀಗಾಗಿ ಅವರನ್ನು ಹೊರಗೆ ನಿಲ್ಲಿಸಲಾಗಿತ್ತು’ ಎಂದು ವ್ಯಂಗ್ಯವಾಡಿದ್ದಾರೆ.

ಈ ಆರೋಪ ನಿರಾಕರಿಸಿರುವ ಎಐಸಿಸಿ ಕಾರ್ಯದರ್ಶಿ ಪ್ರಣವ್‌ ಝಾ, ‘ನಾಮಪತ್ರ ಸಲ್ಲಿಕೆ ವೇಳೆ ಚೇಂಬರ್‌ನಲ್ಲಿ 5 ಜನರು ಮಾತ್ರ ಇರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಅವರ ಸೂಚನೆಯನ್ನು ಪಾಲಿಸಲು ಖರ್ಗೆ ನೆರವಾದರು’ ಎಂದು ಸ್ಪಷ್ಟನೆ ನೀಡಿದ್ದಾರೆ.

ಘನತೆ ತ್ಯಾಗ ಮಾಡಿದ ಖರ್ಗೆ- ಆರ್‌ಸಿ:

ಖರ್ಗೆ ಅವರಿಗೆ ಅವಮಾನ ಮಾಡಲಾಗಿದೆ ಎಂಬ ‘ಎಕ್ಸ್‌’ ಪೋಸ್ಟ್‌ನಲ್ಲಿ ರಾಜೀವ್‌ ಚಂದ್ರಶೇಖರ್‌, ‘ಖರ್ಗೆ ಸಾಹೇಬರೇ, ನೀವು ಎಲ್ಲಿದ್ದಿರಿ? ಪ್ರಿಯಾಂಕಾಜೀ ಮೊದಲ ಬಾರಿ ನಾಮಪತ್ರ ಸಲ್ಲಿಸುವ ವೇಳೆ ನಿಮ್ಮನ್ನು ಹೊರಗೆ ನಿಲ್ಲಿಸಲಾಗಿತ್ತು. ಏಕೆಂದರೆ ನೀವು ಅವರ ಕುಟುಂಬದವರಲ್ಲ. ಗಾಂಧಿ ಕುಟುಂಬದ ದುರಹಂಕಾರವನ್ನು ಪೋಷಿಸಲು ನೀವು ನಿಮ್ಮ ಆತ್ಮಗೌರವ ಹಾಗೂ ಘನತೆಯನ್ನು ತ್ಯಾಗ ಮಾಡಿದಿರಿ. ಒಬ್ಬ ಹಿರಿಯ ದಲಿತ ನಾಯಕ ಹಾಗೂ ಪಕ್ಷದ ಅಧ್ಯಕ್ಷನಿಗೇ ಹೀಗೆ ಮಾಡುವ ಗಾಂಧಿ ಕುಟುಂಬ ವಯನಾಡಿನ ಜನರನ್ನು ಹೇಗೆ ನಡೆಸಿಕೊಳ್ಳಬಹುದು ಎಂದು ಊಹಿಸಿ’ ಎಂದು ಕಿಡಿಕಾರಿದ್ದಾರೆ.