ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೆಬ್ಬಾಳ ಜಂಕ್ಷನ್ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ನಿರ್ಮಿಸಲಾದ ನೂತನ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ದಿನಾಂಕ ಪಡೆದು ಆ.15ರೊಳಗೆ ಉದ್ಘಾಟಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ಮಂಗಳವಾರ ಬಿಡಿಎಯಿಂದ ನಿರ್ಮಾಣ ಮಾಡಲಾದ ಹೆಬ್ಬಾಳದ ಜಂಕ್ಷನ್‌ನ ನೂತನ ಫ್ಲೈಓವರ್ ಪರಿಶೀಲಿಸಿ ಮಾತನಾಡಿದ ಅವರು, ಸದ್ಯ ಕೆ.ಆರ್ ಪುರದಿಂದ ಮೇಖ್ರಿ ವೃತ್ತದ ಕಡೆ ಸಾಗುವ ಮಾರ್ಗವನ್ನು ಮಾತ್ರ ಲೋಕಾರ್ಪಣೆ ಮಾಡಲಾಗುವುದು. ಇನ್ನೊಂದು ಭಾಗದ ಮೇಲ್ಸೇತುವೆಯನ್ನು ಮುಂದಿನ ದಿನಗಳಲ್ಲಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
1.5 ಕಿ.ಮೀ ಉದ್ದದ ಮತ್ತೊಂದು ಟನಲ್ ರಸ್ತೆ:ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ವಿಶ್ವವಿದ್ಯಾಲಯದ ತನಕ ಹೊಸ ಟನಲ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗಿನ ಮುಖ್ಯ ಟನಲ್ ರಸ್ತೆ ಬೇರೆ ಇರಲಿದೆ. ಎಸ್ಟೀಮ್ ಮಾಲ್‌ನಿಂದ ವಿಶ್ವವಿದ್ಯಾಲಯದ ವರೆಗಿನ 1.5 ಕಿ.ಮೀ ಉದ್ದದ ಟನಲ್ ರಸ್ತೆ ಪ್ರತ್ಯೇಕವಾಗಿರಲಿದೆ. ಎರಡು ವರ್ಷದಲ್ಲಿ ಈ ಟನಲ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಈ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬಿಡಿಎ ಆಯುಕ್ತ ಮಣಿವಣ್ಣನ್, ಬಿಎಂಆರ್ ಡಿಎ ಆಯುಕ್ತ ರಾಜೇಂದ್ರ ಚೋಳನ್ ಮೊದಲಾದವರಿದ್ದರು.ಸ್ಕೂಟಿ ಓಡಿಸಿದ ಡಿ.ಕೆ.ಶಿವಕುಮಾರ್:ಕೆ.ಆರ್. ಪುರದಿಂದ ಮೇಖ್ರಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳದ ನೂತನ ಫ್ಲೈಓವರ್ ಪರಿಶೀಲನೆ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಲ್ಮೆಟ್ ಹಾಗೂ ಕಪ್ಪು ಕನ್ನಡಕ ಧರಿಸಿ ಹೋಂಡಾ ಡಿಯೋ ಸ್ಕೂಟಿ ಓಡಿಸಿದರು. ಈ ವೇಳೆ ಹಿಂಬದಿಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕುಳಿತು ಸಾತ್ ನೀಡಿದರು.