ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ತಾರಕಕ್ಕೇರಿರುವ ಈ ಹಂತದಲ್ಲಿ ಪರಿಸ್ಥಿತಿ ಬಿಗಡಾಯಿಸದಂತೆ ತಡೆಯಲು ವರಿಷ್ಠ ರಾಹುಲ್ ಗಾಂಧಿ ಗುರುವಾರ ನೇರ ಪ್ರವೇಶ ಮಾಡುವ ಸಾಧ್ಯತೆಯಿದ್ದು, ಅವರ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಯಲಿದೆ.
ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ತಾರಕಕ್ಕೇರಿರುವ ಈ ಹಂತದಲ್ಲಿ ಪರಿಸ್ಥಿತಿ ಬಿಗಡಾಯಿಸದಂತೆ ತಡೆಯಲು ವರಿಷ್ಠ ರಾಹುಲ್ ಗಾಂಧಿ ಗುರುವಾರ ನೇರ ಪ್ರವೇಶ ಮಾಡುವ ಸಾಧ್ಯತೆಯಿದ್ದು, ಅವರ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಯಲಿದೆ.
ಹಾಲಿ ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಬೆಳಗ್ಗೆ ದೆಹಲಿಗೆ ತಲುಪಲಿದ್ದಾರೆ. ಇನ್ನು ಕೊಚ್ಚಿಯಲ್ಲಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೂ ದೆಹಲಿಗೆ ಧಾವಿಸಿದ್ದಾರೆ. ಈ ತ್ರಿಮೂರ್ತಿ ನಾಯಕರು ಪ್ರಾಥಮಿಕ ಹಂತದ ಚರ್ಚೆ ನಡೆಸಿ, ನಂತರ ರಾಹುಲ್ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಉಲ್ಬಣಿಸಿರುವ ಪರಿಸ್ಥಿತಿ ಹತೋಟಿಗೆ ತರುವ ಕುರಿತು ಸಮಾಲೋಚನೆ ನಡೆಯುವ ಸಾಧ್ಯತೆಯಿದೆ. ಸಭೆಯಲ್ಲಿ ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರವಾಗಬೇಕು ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಿಗಿ ಪಟ್ಟು ಹಾಗೂ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ನೀಡಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗ್ರಹ ಕುರಿತು ಚರ್ಚೆ ನಡೆಯಲಿದೆ.
ಸಂಧಾನ ಸೂತ್ರ ಸಭೆ:
ನಾಯಕತ್ವ ವಿಚಾರ ಕುರಿತು ರಾಜ್ಯದ ಎರಡು ಪ್ರಮುಖ ಬಣಗಳ ಮೇಲಾಟ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಶೀಘ್ರ ಇದಕ್ಕೊಂದು ಪರಿಹಾರ ಸೂಚಿಸುವ ಅಗತ್ಯವನ್ನು ಹೈಕಮಾಂಡ್ ಮನಗಂಡಿದೆ. ಈ ವಿಚಾರದ ಬಗ್ಗೆ ರಾಹುಲ್ ಗಾಂಧಿ ಯಾವ ತೀರ್ಮಾನ ಕೈಗೊಳ್ಳುವರೋ ಅದಕ್ಕೆ ಬದ್ಧ ಎಂದು ಎರಡೂ ಬಣಗಳ ನಾಯಕರು ಬಹಿರಂಗವಾಗಿ ಘೋಷಿಸಿದ್ದಾರೆ. ಹೀಗಾಗಿ, ಸಮಸ್ಯೆ ಪರಿಹಾರಕ್ಕೆ ಈ ಸಭೆಯಲ್ಲಿ ಸಂಧಾನ ಸೂತ್ರ ರೂಪುಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಮೂಲಗಳ ಪ್ರಕಾರ ಸಭೆಯಲ್ಲಿ ನಡೆಯಲಿರುವ ಚರ್ಚೆ ಆಧರಿಸಿ ಶೀಘ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಂಡ್ ದೆಹಲಿಗೆ ಬುಲಾವ್ ನೀಡಿ ತನ್ನ ನಿಲುವು ತಿಳಿಸುವ ಸಾಧ್ಯತೆಯಿದೆ. ಹೈಕಮಾಂಡ್ ಸಿದ್ಧಪಡಿಸುವ ಸೂತ್ರಕ್ಕೆ ಉಭಯ ನಾಯಕರ ಸ್ಪಂದನೆ ಹೇಗಿರುತ್ತದೆ ಎಂಬುದು ಸದ್ಯಕ್ಕೆ ಕುತೂಹಲಕರ.
ಮಂಗಳವಾರವೂ ತೀವ್ರ ಬೆಳವಣಿಗೆ:
ಅಧಿಕಾರ ಹಸ್ತಾಂತರ ವಿಚಾರ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿಯಿಂದಲೂ ದೆಹಲಿ ಹಾಗೂ ಬೆಂಗಳೂರಿನಲ್ಲಿ ಗಮನೀಯ ಬೆಳವಣಿಗೆಗಳು ನಡೆದವು. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು, ಈ ವೇಳೆ ರಾಜ್ಯದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೆಂಬಲ:
ಇನ್ನು ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅಂತರಂಗದಲ್ಲಿ ವಿರೋಧಿಸುವ ಸಚಿವ ಸತೀಶ್ ಜಾರಕಿಹೊಳಿ ಅವರು ಮಂಗಳವಾರ ತಡರಾತ್ರಿ ಪರಸ್ಪರ ಭೇಟಿಯಾಗಿದ್ದಾರೆ. ಶಿವಕುಮಾರ್ ಆಹ್ವಾನದ ಮೇರೆಗೆ ಈ ಭೇಟಿ ನಡೆದಿದ್ದು, ಮುಖ್ಯಮಂತ್ರಿಯಾಗುವ ಸಂದರ್ಭ ಬಂದರೆ ಬೆಂಬಲಕ್ಕೆ ನಿಲ್ಲುವಂತೆ ಸತೀಶ್ ಅವರಿಗೆ ನೇರ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದಕ್ಕೆ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ. ಆದರೆ, ತಾವು ಸಿದ್ದರಾಮಯ್ಯ ಪರವಾಗಿಯೇ ಇರುವುದಾಗಿ ಸತೀಶ್ ಸ್ಪಷ್ಟ ಪಡಿಸಿದರು ಎನ್ನಲಾಗಿದೆ.
ಆದರೆ, ಮೂಲಗಳ ಪ್ರಕಾರ ತಮ್ಮ ಬೆಂಬಲಕ್ಕೆ ನಿಂತರೆ ಮುಂದಿನ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಆಯ್ಕೆಗೆ ತಾವು ಬೆಂಬಲ ನೀಡುವ ಭರವಸೆಯನ್ನು ಶಿವಕುಮಾರ್ ಅವರು ಸತೀಶ್‌ಗೆ ನೀಡಿದರು ಎನ್ನಲಾಗುತ್ತಿದೆ. ಆದರೆ, ಇದನ್ನು ಉಭಯ ನಾಯಕರ ಆಪ್ತರು ನಿರಾಕರಿಸುತ್ತಿದ್ದಾರೆ.
ಇದಕ್ಕೂ ಮುನ್ನ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಆಪ್ತರಾದ ಜಮೀರ್ ಅಹಮದ್ ಖಾನ್, ಕೆ.ಜೆ.ಜಾರ್ಜ್ ಸೇರಿ ಹಲವರೊಂದಿಗೆ ಖುದ್ದಾಗಿ ಚರ್ಚಿಸಿದ್ದಾರೆ.
ಕುತೂಹಲ ಮೂಡಿಸಿದ ಸಿದ್ದು ಮೌನ:
ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಬಿಜೆಪಿ ಒಕ್ಕಲಿಗ ನಾಯಕರು, ಶಾಸಕರು ಬಹಿರಂಗವಾಗಿ ಸಿದ್ದರಾಮಯ್ಯ ಅವರನ್ನು ಅಧಿಕಾರ ಬಿಟ್ಟುಕೊಡುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದಾರೆ. ಯಾವುದೇ ರಾಜಕೀಯ ಚಟುವಟಿಕೆಗಳಲ್ಲೂ ಬಹಿರಂಗವಾಗಿ ತೊಡಗಿಸಿಕೊಳ್ಳದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಹೈಕಮಾಂಡ್ ಹೇಳಿದಂತೆ ಕೇಳುವೆ ಎಂದು ಮೌನವಾಗಿರುವ ಸಿದ್ದರಾಮಯ್ಯ ಅವರ ಮುಂದಿನ ನಡೆ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಮತ್ತೊಂದೆಡೆ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ದಲಿತ ಸಂಘಟನೆಗಳ ಪ್ರತಿಭಟನೆ ಶುರುವಾಗಿದೆ. ಹೀಗಾಗಿ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಮೇಲಾಟ ನಿಯಂತ್ರಿಸುವ ಅನಿವಾರ್ಯತೆಗೆ ಸಿಲುಕಿರುವ ಹೈಕಮಾಂಡ್ ಗುರುವಾರ ಮಧ್ಯಾಹ್ನ ಮಹತ್ವದ ಸಭೆ ನಡೆಸಲಿದೆ ಎಂದು ತಿಳಿದುಬಂದಿದೆ.---
ಸಿದ್ದು ಬಣದಿಂದ ‘ಅಹಿಂದ ಸಂದೇಶ’
ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಒಕ್ಕಲಿಗ ನಾಯಕರು, ಮಠಾಧಿಪತಿಗಳು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಬೆಂಬಲ ಸೂಚಿಸತೊಡಗಿದ್ದರೆ, ಇತ್ತ ಅಹಿಂದ ವರ್ಗಗಳ ನಾಯಕರು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಹಿಂದ ಮತ ಹಂಚಿಕೆ ಯಾವ ಪ್ರಮಾಣದಲ್ಲಿದೆ ಎಂಬ ಮಾಹಿತಿಯನ್ನು ಅಂಕಿ-ಅಂಶ ಸಹಿತ ವರದಿಯನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ.ತನ್ಮೂಲಕ ಅಹಿಂದ ವರ್ಗಗಳ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಚ್ಯುತಿ ತಂದರೆ ಈ ವರ್ಗಗಳು ಕಂಗೆಡಬಹುದು ಎಂಬ ಸಂದೇಶವನ್ನು ಹೈಕಮಾಂಡ್‌ಗೆ ಮುಟ್ಟಿರುವ ರವಾನೆ ಮಾಡಿದ್ದಾರೆ.
ರಾಜ್ಯದ 224 ಕ್ಷೇತ್ರಗಳ ಪೈಕಿ 42 ಕ್ಷೇತ್ರಗಳ ಮತದಾರರಲ್ಲಿ ಶೇ.80ರಷ್ಟು ಮಂದಿ ಅಹಿಂದ ಮತದಾರರೇ ಇದ್ದಾರೆ. ಇನ್ನು 83ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶೇ.70ರಷ್ಟು ಮತದಾರರು ಅಂಹಿದ ವರ್ಗದವರು. 49 ಕ್ಷೇತ್ರಗಳಲ್ಲಿ ಶೇ.60ಕ್ಕಿಂತ ಹೆಚ್ಚು ಮತ್ತು 22 ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮತದಾರರು ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಮತದಾರರು ಇದ್ದಾರೆ.
ರಾಜ್ಯದಲ್ಲಿ ಐದು ಕ್ಷೇತ್ರಗಳಲ್ಲಿ ಶೇ.90ಕ್ಕೂ ಹೆಚ್ಚು ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಮತ್ತು ದಲಿತರು ಇದ್ದಾರೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.ವರದಿಯಲ್ಲಿ ಪ್ರತಿ ಕ್ಷೇತ್ರದಲ್ಲೂ ಯಾವ್ಯಾವ ಮತದಾರರು ಎಷ್ಟಿದ್ದಾರೆ ಎಂಬ ವಿವರ ನೀಡಲಾಗಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ದಲಿತ ಮತ ಬ್ಯಾಂಕ್ ಗಟ್ಟಿ ಇದೆ. ಈ ವರ್ಗದ ಮೇರು ನಾಯಕ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಚ್ಯುತಿ ತಂದರೆ ಸಮಸ್ಯೆಯಾಗಲಿದೆ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ವರದಿಯಲ್ಲಿ ಏನಿದೆ?
- ರಾಜ್ಯದ 224 ಕ್ಷೇತ್ರಗಳಲ್ಲಿ 42ರಲ್ಲಿ ಶೇ.80ರಷ್ಟು ಅಹಿಂದ ಮತದಾರರಿದ್ದಾರೆ
- 83ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶೇ.70ರಷ್ಟು ಮತದಾರರು ಅಹಿಂದ ವರ್ಗದವರು
- 49 ಕ್ಷೇತ್ರದಲ್ಲಿ ಶೇ.60ಕ್ಕಿಂತ ಹೆಚ್ಚು, 22 ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಹೆಚ್ಚಿದ್ದಾರೆ
- 5 ಕ್ಷೇತ್ರದಲ್ಲಿ ಬಹುತೇಕ ಅಂದ್ರೆ ಶೇ.90ಕ್ಕೂ ಅಹಿಂದ ಮತದಾರರೇ ಇದ್ದಾರೆ
