ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಮತ್ತೆ ಜಾರಿಗೆ ಬಂದರೆ ಅದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ಶಾಲೆಗೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಮೂಲಕ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ, ಹಿಂದೂಪರ ಸಂಘಟನೆಗಳ ಮುಖಂಡರು ನೇರ ಸವಾಲು ಹಾಕಿದ್ದಾರೆ.ತಾಕತ್ತಿದ್ದರೆ ಹಿಜಾಬ್ ವಾಪಸ್ ತನ್ನಿ ನೋಡೋಣ ಎಂದು ಹಿಂದೂ ಸಂಘಟನೆ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸವಾಲು ಹಾಕಿದರೆ, ಹಿಜಾಬ್ ಹಿಂದೆ ತಿರುಗುವ ಸಿದ್ದರಾಮಯ್ಯ ತಾಕತ್ತಿದ್ದರೆ ಭಾರತ ಹಿಂದೂ ರಾಷ್ಟ್ರ ಆಗುವುದನ್ನು, ನಮ್ಮ ಮಕ್ಕಳು ಕೇಸರಿ ಶಾಲು ಹಾಕುವುದನ್ನು ತಡೆಯಲಿ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಇದೇ ವೇಳೆ, ಬಿಜೆಪಿ, ಹಿಂದೂ ಪರ ಸಂಘಟನೆಗಳ ಮುಖಂಡರ ಹೇಳಿಕೆಗೆ ಕಿಡಿ ಕಾರಿರುವ ಕಾಂಗ್ರೆಸ್ ಮುಖಂಡ, ಶಾಸಕ ಬಿ.ಕೆ.ಹರಿಪ್ರಸಾದ್, ಬಿಜೆಪಿ ಬಹುಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದ್ದು, ಸುಳ್ಳಿನ ಅಪಪ್ರಚಾರ ನಡೆಸುತ್ತಿದೆ. ಶಾಲಾ ಕಾಂಪೌಂಡ್‌ವರೆಗೂ ಬುರ್ಖಾ ಇರಲಿ. ನಂತರ ಹಿಜಾಬ್ ಇರಬೇಕು ಎನ್ನುವುದು ನನ್ನ ಕಲ್ಪನೆ ಎಂದಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿ ಅಂಗವಾಗಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಶ್ರೀರಾಮ ವಿದ್ಯಾಸಂಸ್ಥೆ ಸ್ಥಾಪಕ ಕಲ್ಲಡ್ಕ ಪ್ರಭಾಕರ್ ಭಟ್, ಸರ್ಕಾರ ಹಿಬಾಜ್ ಧರಿಸಲು ಅವಕಾಶ ನೀಡಿದರೆ ನಾವು ಕೇಸರಿ ಶಾಲು ಧರಿಸುತ್ತೇವೆ, ಟೋಪಿ ಧರಿಸಿ ಶಾಲೆಗೆ ಬರುತ್ತೇವೆ. ಅಲ್ಲಾ ಹೊ ಅಕ್ಬರ್ ಎಂದರೆ, ಶಾಲೆಗಳಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುತ್ತೇವೆ. ತಾಕತ್ತಿದ್ದರೆ ತಡೆಯಿರಿ ನೋಡೋಣ. ಹಿಜಾಬ್ ತರುವ ತಾಕತ್ ನಿಮಗಿದೆಯಾ? ತಾಕತ್ತಿದ್ದರೆ ತರುವ ಪ್ರಯತ್ನ ಮಾಡಿ ಎಂದು ಸವಾಲು ಹಾಕಿದ್ದಾರೆ. ಹಿಜಾಬ್ ವಿಚಾರವಾಗಿ ಧ್ವನಿ ಎತ್ತಿದ್ದ ಮುಸ್ಕಾನ್‌ಗೆ ಹಣ, ಶಹಬ್ಬಾಸ್‌ಗಿರಿ ಕೊಟ್ಟಿದ್ದು ಅಲ್ ಖೈದಾ ಭಯೋತ್ಪಾದಕ ಸಂಘಟನೆ. ಆ ಸಂಘಟನೆ ಜೊತೆ ಸಂಪರ್ಕದಲ್ಲಿರುವ ಹೆಣ್ಣು ಮಗಳು ಆಕೆ ಎಂದು ಆರೋಪಿಸಿದ್ದಾರೆ.ಇದೇ ವೇಳೆ, ಶಿರಸಿಯಲ್ಲಿ ಮಾತನಾಡಿದ ಸಂಸದ ಅನಂತಕುಮಾರ ಹೆಗಡೆ, ಸಿದ್ದು ಹೇಳಿಕೆ ಭವಿಷ್ಯದಲ್ಲಿ ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡಲಿದೆ. ಹಿಜಾಬ್ ಹಿಂದೆ ತಿರುಗುವ ಸಿದ್ದರಾಮಯ್ಯ, ತಾಕತ್ತಿದ್ದರೆ ಭಾರತ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ, ಹಿಜಾಬ್‌ಗೆ ಅವಕಾಶ ನೀಡಿದರೆ, ನಮ್ಮ ಮಕ್ಕಳು ಕೇಸರಿ ಶಾಲು ಹಾಕಿಕೊಂಡು ಬರುತ್ತಾರೆ ಎಂದಿದ್ದಾರೆ.
ಈ ಮಧ್ಯೆ, ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಹಿಜಾಬ್ ವಿಷಯದಲ್ಲಿ ಸಿದ್ದರಾಮಯ್ಯ ಮೂರ್ಖರಂತೆ ಮಾತನಾಡುತ್ತಿದ್ದಾರೆ. ಇಲ್ಲದ ಹಿಜಾಬ್ ಆದೇಶವನ್ನು ಹಿಂದಕ್ಕೆ ಪಡೆಯುತ್ತೇವೆ ಎನ್ನುತ್ತಿದ್ದಾರೆ. ಇದು ಅವರ ಮುಠ್ಠಾಳತನವನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ. ಮದ್ದೂರಿನಲ್ಲಿ ಮಾತನಾಡಿದ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಗಳು, ಹಿಜಾಬ್ ನಿಷೇಧ ವಿಷಯದಲ್ಲಿ ಮುಖ್ಯಮಂತ್ರಿಯವರ ನಿರ್ಧಾರ ಸಮಾಜದಲ್ಲಿ ಶೋಭೆ ತರುವಂತದ್ದಲ್ಲ. ಇದು ಸಮಾಜದಲ್ಲಿ ಪರಸ್ಪರ ಸಂಘರ್ಷಕ್ಕೆ ಎಡೆ ಮಾಡಿಕೊಡಲಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.ಚಿಕ್ಕಮಗಳೂರಿನಲ್ಲಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗಿರುವ ಸಿದ್ದರಾಮಯ್ಯ, ಶಾಲಾ- ಕಾಲೇಜುಗಳಲ್ಲಿ ಇರುವ ಯೂನಿಫಾರಂ ಕಿತ್ತು ಹಾಕಿ, ಹಿಜಾಬ್ ಹಾಕಿಕೊಂಡು ಬರಲು ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಈ ಮಧ್ಯೆ, ಹಿಂದೂಪರ ಸಂಘಟನೆಗಳ ಮುಖಂಡರ ಹೇಳಿಕೆಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದು, ಹಿಜಾಬ್ ಮತ್ತು ಬುರ್ಖಾದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಶಾಲಾ ಕಾಂಪೌಂಡ್ ವರೆಗೂ ಬುರ್ಖಾ ಇರಲಿ, ನಂತರ ಹಿಜಾಬ್ ಇರಬೇಕು ಎನ್ನುವುದು ನನ್ನ ಕಲ್ಪನೆ. ಬಹುಸಂಖ್ಯಾತರ ತುಷ್ಟೀಕರಣಕ್ಕಾಗಿ ಬಿಜೆಪಿ ಸುಳ್ಳು ಪ್ರಚಾರ ಕೈಗೊಂಡಿದೆ ಎಂದು ಕಾಂಗ್ರೆಸ್ ಮುಖಂಡ, ಶಾಸಕ ಬಿ.ಕೆ.ಹರಿಪ್ರಸಾದ್ ಹರಿಹಾಯ್ದಿದ್ದಾರೆ.ಇದೇ ವೇಳೆ, ಮಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಹಿಜಾಬ್ ನಿಷೇಧ ಆದೇಶ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದಾರೆ. ಒಂದು ವೇಳೆ ಮಾಡಿದ್ದರೆ ಪರಿಶೀಲನೆ ಮಾಡುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಏನೇ ಮಾಡಿದರೂ ಸಂವಿಧಾನದ ಚೌಕಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಬಿಜೆಪಿಯವರು ವಿನಾಕಾರಣ ಈ ಬಗ್ಗೆ ಗಲಾಟೆ ಮಾಡುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ.