ಪಟ್ಟಣದ ನಗರಸಭೆಯಲ್ಲಿ ಇ- ಸ್ವತ್ತು ವಿಳಂಭ ಖಂಡಿಸಿ ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಮಧುಚಂದ್ರರವರು ಜಿಲ್ಲಾಧಿಕಾರಿ ಕಚೇರಿಯವರೆಗೂ ನಡೆಸುತ್ತಿದ್ದ ಪಾದಯಾತ್ರೆಗೆ ಪೊಲೀಸರು ತಡೆಯೊಡ್ಡಿ ನಗರಸಭೆ ಆಯುಕ್ತರನ್ನು ಸ್ಥಳಕ್ಕೇ ಕರೆಸಿದ ಘಟನೆ ಜರುಗಿತು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ನಗರಸಭೆಯಲ್ಲಿ ಇ- ಸ್ವತ್ತು ವಿಳಂಭ ಖಂಡಿಸಿ ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಮಧುಚಂದ್ರರವರು ಜಿಲ್ಲಾಧಿಕಾರಿ ಕಚೇರಿಯವರೆಗೂ ನಡೆಸುತ್ತಿದ್ದ ಪಾದಯಾತ್ರೆಗೆ ಪೊಲೀಸರು ತಡೆಯೊಡ್ಡಿ ನಗರಸಭೆ ಆಯುಕ್ತರನ್ನು ಸ್ಥಳಕ್ಕೇ ಕರೆಸಿದ ಘಟನೆ ಜರುಗಿತು.ಮಧುಚಂದ್ರ ಅವರು ಕಳೆದ 15 ದಿನಗಳ ಹಿಂದೆ ಇ- ಸ್ವತ್ತು ವಿತರಣೆ ವಿಳಂಭ ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಆಯುಕ್ತರು ಕಾಲಾವಕಾಶ ಕೋರಿ ಪ್ರತಿಭಟನೆ ಹಿಂಪಡೆಯುವಲ್ಲಿ ಮನವೊಲಿಸಿದ್ದರು. ಆದರೆ ಸಕಾಲದಲ್ಲಿ ಇ- ಸ್ವತ್ತುಗಳನ್ನು ವಿತರಿಸದ ಹಿನ್ನೆಲೆ ಮಧುಚಂದ್ರ ಕೊಳ್ಳೇಗಾಲ ನಗರಸಭೆಯಿಂದ ಪಾದಯಾತ್ರೆ ನಡೆಸುವುದಾಗಿ ಮನವಿ ಸಲ್ಲಿಸಿದ್ದರು.
ಶುಕ್ರವಾರ ಡಾ. ಬಿ .ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಿದ್ದರು. ನಗರಸಭೆ ಮಾರ್ಗವಾಗಿ ದೇವಲ ಮಹರ್ಷಿ ವೃತ್ತದ ಬಳಿ ಮಹರ್ಷಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಮುಂದುವರಿಸಲು ಅಣಿಯಾದರು. ಇವರ ಪಾದಯಾತ್ರೆಗೆ ನಿವೃತ್ತ ರೈಲ್ವೆ ಇಲಾಖೆ ನೌಕರ ನಿಂಗರಾಜು, ನಗರಸಭೆ ಮಾಜಿ ಸದಸ್ಯ ಕೆ.ಕೆ. ಮೂರ್ತಿ, ಸೋಮು, ವಾಸಿಕ್, ಬಾಸ್ಕರ್, ಲಿಂಗರಾಜು, ಮರಿಸಿದ್ದಯ್ಯ, ಶಂಕರ್, ಕರಣ್ ಸೇರಿ ಇನ್ನಿತರರು ಸಾಥ್ ನೀಡಿದರು. ಮಹರ್ಷಿ ವೃತ್ತದಿಂದ ಪಾದಯಾತ್ರೆ ಮುಂದುವರಿಸಲು ರೇಷ್ಮೆ ಇಲಾಖೆ ಬಳಿ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ಪಾದಯಾತ್ರೆಗೆ ಅನುಮತಿ ಇಲ್ಲ, ಸ್ಥಳಕ್ಕೆ ನಗರಸಭೆ ಆಯುಕ್ತರು ಬರುತ್ತಾರೆ, ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ, ಸ್ವಲ್ಪ ಕಾಲಾವಕಾಶ ನೀಡಿ ಎಂದು ಪೊಲೀಸರು ಪ್ರತಿಭಟನಾಕಾರರರ ಜೊತೆ ಚರ್ಚಿಸುತ್ತಿದ್ದಂತೆ ಸ್ಥಳಕ್ಕೆ ನಗರಸಭೆ ಆಯುಕ್ತೆ ರುದ್ರಮ್ಮ ಶರಣಯ್ಯ ಆಗಮಿಸಿದರು. 1 ತಿಂಗಳೊಳಗೆ ಪ್ರಾಮಾಣಿಕವಾಗಿ ಸಮರ್ಪಕ ಇ- ಸ್ವತ್ತು ವಿತರಣೆಗೆಕ್ರಮವಹಿಸುವೆ, ಬಾಕಿ ಉಳಿದಿರುವ ಇ- ಸ್ವತ್ತು ತುರ್ತು ವಿತರಣೆಗೂ ಹಂತ ಹಂತವಾಗಿ ಕ್ರಮವಹಿಸುವುದಾಗಿ ಭರವಸೆ ನೀಡಿದ ಹಿನ್ನೆಲೆ ಪಾದಯಾತ್ರೆ ಮೊಟಕುಗೊಳಿಸಲಾಯಿತು.
ಕೊಳ್ಳೇಗಾಲ ನಗರಸಭೆಯಲ್ಲಿ ಸಮರ್ಪಕ ಇ- ಸ್ವತ್ತು ವಿತರಣೆಯಾಗುತ್ತಿಲ್ಲ, ಸಾಕಷ್ಟು ವಿಳಂಭ ಹಿನ್ನೆಲೆ ನಾಗರಿಕರು ದಿನಂಪ್ರತಿ ಅಲೆಯುವಂತಾಗಿದೆ. ಜಿಲ್ಲಾಡಳಿತ, ಸ್ಥಳೀಯ ನಗರಸಭೆ ಆಡಳಿತ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು, ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನ ಸೆಳೆವ ರೀತಿ ವಿನೂತನ ಪ್ರತಿಭಟನೆ ನಡೆಸಬೇಕಾಗುತ್ತದೆ. 1 ತಿಂಗಳ ಕಾಲ ಕಾದು ನೋಡುತ್ತೇವೆ.ಮಧುಚಂದ್ರ, ನಗರಸಭೆ ನಾಮನಿರ್ದೇಶನ ಮಾಜಿ ಸದಸ್ಯ