ಕುದುರೆ ವ್ಯಾಪಾರ ಮಾಡೋರು ನಮಗೆ ಬುದ್ಧಿ ಹೇಳ್ತಾರೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಾಗ್ದಾಳಿ

| Published : Jul 21 2025, 12:00 AM IST

ಸಾರಾಂಶ

ಮೊದಲು ೧೦ ಕೆಜಿ ಅಕ್ಕಿ ಕೊಡುತ್ತಿದ್ದುದನ್ನು ೫ ಕೆಜಿಗೆ ಇಳಿಸಿದ ಗಿರಾಕಿಗಳು ಬಿಜೆಪಿಯವರು. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಐದು ವರ್ಷಗಳಲ್ಲಿ ಒಂದು ಮನೆ ಕೊಟ್ಟಿಲ್ಲ. ಇನ್ನು ಬಡವರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಅವರಿಗೆ. ಎಸ್‌ಸಿಪಿ, ಟಿಎಸ್‌ಪಿ ಬಗ್ಗೆ ಮಾತನಾಡುತ್ತಾರೆ. ಬೇಕಿದ್ದರೆ ಚರ್ಚೆಗೆ ಬರಲಿ. ನಾನೇ ಅದರ ಅಧ್ಯಕ್ಷ. ಉತ್ತರ ಕೊಡುತ್ತೇನೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಜನರಿಂದ ಬಹುಮತ ಪಡೆದು ಅಧಿಕಾರಕ್ಕೆ ಬರಲಾಗದವರು, ಕುದುರೆ ವ್ಯಾಪಾರ ಮಾಡೋರು ಕಾಂಗ್ರೆಸ್‌ನವರಿಗೆ ಬುದ್ಧಿ ಹೇಳುವುದಕ್ಕೆ ಬರುತ್ತಾರೆ. ನಮ್ಮದು ಕಾಂಗ್ರೆಸ್ ಸಿದ್ಧಾಂತ, ಅದಾನಿ, ಅಂಬಾನಿ ಸಿದ್ಧಾಂತ ಅಲ್ಲ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸಮೀಪಿಸದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿರುಗೇಟು ನೀಡಿದ ಅವರು, ಬಿಜೆಪಿಯವರಿಗೆ ಬಹುಮತದ ಸರ್ಕಾರ ಮಾಡುವುದಕ್ಕೆ ಯೋಗ್ಯತೆ ಇಲ್ಲ. ಅದಕ್ಕಾಗಿ ಅವರು ನಮ್ಮನ್ನು ಟೀಕೆ ಮಾಡುತ್ತಾರೆ. ನಮ್ಮನ್ನು ಅತಂತ್ರ ಮಾಡುವುದಕ್ಕಾಗಿ ಸಿಎಂ ರಾಜೀನಾಮೆ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಲೇವಡಿ ಮಾಡಿದರು.

ನಮ್ಮ ಪಾರ್ಟಿಗೂ ಅವರಿಗೂ ಏನು ಸಂಬಂಧ?, ನಮ್ಮ ಸುದ್ದಿ ಮಾತನಾಡೊದಕ್ಕೆ ಅವರು ಯಾರು?, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತಿದೆ. ಅದರ ಬಗ್ಗೆ ವಿಜಯೇಂದ್ರ ಯೋಚನೆ ಮಾಡಲಿ. ನಮ್ಮ ಪಕ್ಷ, ಸರ್ಕಾರ ಸಧೃಡವಾಗಿದೆ. ನಮ್ಮ ಯೋಜನೆಗಳು ಜನಪರವಾಗಿವೆ ಎಂದು ದೃಢವಾಗಿ ಹೇಳಿದರು.

ಸಾಧನೆ ಮಾಡಿರೋದಕ್ಕೆ ಸಾಧನಾ ಸಮಾವೇಶ ಮಾಡ್ತಿರೋದು. ಸಾಧನೆ ಮಾಡದೆ ನಾವು ಮಾತನಾಡಲ್ಲ. ಮೈಸೂರು ಜಿಲ್ಲೆಯಲ್ಲಿ ಸರ್ಕಾರದ ಸಾಧನಾ ಸಮಾವೇಶ ನಡೆದಿದೆ. ಮಂಡ್ಯ ಜಿಲ್ಲೆಯಲ್ಲೂ ಸಮಾವೇಶ ಮಾಡುತ್ತೇವೆ. ಮಳವಳ್ಳಿ ಕ್ಷೇತ್ರದಲ್ಲಿ ಹಲವಾರು ಕಾಮಗಾರಿಗಳು ಉದ್ಘಾಟನೆಗೆ ಸಜ್ಜಾಗಿವೆ. ಸಿದ್ಧತೆ ಮಾಡಿಕೊಂಡು ದಿನಾಂಕ ಘೋಷಣೆ ಮಾಡುವುದಾಗಿ ಹೇಳಿದರು.

ಅಭಿವೃದ್ಧಿಯಲ್ಲಿ ಸಮತೋಲನವಾದ ವಾತಾವರಣ ನಿರ್ಮಾಣ ಮಾಡಿರೋದು ಕಾಂಗ್ರೆಸ್. ಇದು ನಮ್ಮ ಪಕ್ಷದ ಸಿದ್ಧಾಂತ. ಅದಾನಿ, ಅಂಬಾನಿಗೆ ಲಕ್ಷಾಂತರ ಕೋಟಿ ದುಡ್ಡು ಮಾಡುಕೊಡುವುದು ನಮ್ಮ ಸಿದ್ಧಾಂತವಲ್ಲ ಎಂದು ಬಿಜೆಪಿಗೆ ಕುಟುಕಿದ ನರೇಂದ್ರಸ್ವಾಮಿ, ಕಾಂಗ್ರೆಸ್ ಸರ್ಕಾರ ಉಳ್ಳವರ ಪರ ಅಲ್ಲ, ಜನರ ಪರ, ಅಭಿವೃದ್ಧಿ ಪರವಾಗಿದೆ ಎಂದು ದೃಢವಾಗಿ ಹೇಳಿದರು.

ಮೊದಲು ೧೦ ಕೆಜಿ ಅಕ್ಕಿ ಕೊಡುತ್ತಿದ್ದುದನ್ನು ೫ ಕೆಜಿಗೆ ಇಳಿಸಿದ ಗಿರಾಕಿಗಳು ಬಿಜೆಪಿಯವರು. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಐದು ವರ್ಷಗಳಲ್ಲಿ ಒಂದು ಮನೆ ಕೊಟ್ಟಿಲ್ಲ. ಇನ್ನು ಬಡವರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಅವರಿಗೆ. ಎಸ್‌ಸಿಪಿ, ಟಿಎಸ್‌ಪಿ ಬಗ್ಗೆ ಮಾತನಾಡುತ್ತಾರೆ. ಬೇಕಿದ್ದರೆ ಚರ್ಚೆಗೆ ಬರಲಿ. ನಾನೇ ಅದರ ಅಧ್ಯಕ್ಷ. ಉತ್ತರ ಕೊಡುತ್ತೇನೆ ಎಂದರು.

ಇಲ್ಲೊಬ್ಬ ಅರೆಬರೆ ತಿಳಿವಳಿಕೆ ಇರುವ ಅರೆ ಹುಚ್ಚ ಮಾತನಾಡ್ತಾನೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಅನ್ನದಾನಿ ಅವರನ್ನು ಅರೆಹುಚ್ಚ ಎಂದ ಶಾಸಕ ನರೇಂದ್ರಸ್ವಾಮಿ, ದಲಿತರನ್ನು ಶೋಷಣೆ ಮಾಡುತ್ತಿದ್ದಾರೆ ಅಂತಾರೆ. ದಲಿತರನ್ನು ಮಂತ್ರಿ ಮಾಡುವುದಕ್ಕೆ ಯೋಗ್ಯತೆ ಇಲ್ಲದ ಪಕ್ಷದವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲಿ. ಮಂಡ್ಯಕ್ಕೆ ೮ ಸಾವಿರ ಕೋಟಿ ರು. ತರುತ್ತೇವೆ ಎಂದಿದ್ದರು. ೮ ರುಪಾಯಿ ಬರಲಿಲ್ಲ. ಈಗ ಟೀಕೆ ಮಾಡ್ತಾರೆ. ಹಸಿವಿನ ಬಗ್ಗೆ ಅರಿವಿದ್ದವನು ಮಾತನಾಡಲಿ, ಹೊಟ್ಟೆತುಂಬಿದವನು, ಲೂಟಿ ಹೊಡೆಸುವವರು ಮಾತನಾಡುವುದಲ್ಲ ಎಂದು ವಾಕ್‌ಪ್ರಹಾರ ನಡೆಸಿದರು.ಅವಿವೇಕಿಗಳಿಗೆ ನಾನು ಉತ್ತರ ಕೊಡೋಲ್ಲ: ಅನ್ನದಾನಿ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ಮಳವಳ್ಳಿ

ಅವಿವೇಕಿಗಳ ಮಾತಿಗೆ ನಾನು ಏಕೆ ಉತ್ತರ ಕೊಡಲಿ. ಸಾಹಿತ್ಯ ಸಮ್ಮೇಳನಕ್ಕೆ ಖರ್ಚಾಗಿರುವ ಹಣಕ್ಕೆ ಲೆಕ್ಕ ಇದೆ. ಅದು ಸಮರ್ಪಕವಾಗಿಲ್ಲದಿದ್ದರೆ ಆರ್‌ಟಿಐ ಇದೆ. ಕೇಸು ದಾಖಲಿಸಲಿ. ಸುಮ್ಮನೆ ತೆವಲಿಗೆ ಮಾತನಾಡುವವರಿಗೆ ನಾನು ಉತ್ತರ ಕೊಡಬೇಕಾ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಿರುದ್ಧ ಹರಿಹಾಯ್ದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಮಾಜಿ ಶಾಸಕ ಅನ್ನದಾನಿ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರಿಗಂತೂ ಕೆಲಸ ಇಲ್ಲ ಪಾಪ. ಅದಕ್ಕಾಗಿ ಕೆಲಸಕ್ಕೆ ಬಾರದ್ದನ್ನು ಮಾತನಾಡುತ್ತಾರೆ. ನಾನು ಕೆಲಸ ಮಾಡುತ್ತಿದ್ದೇವೆ. ಇನ್ನೂ ಹೆಚ್ಚು ಕೆಲಸ ಮಾಡೋಣ. ಯಾವುದೇ ತನಿಖೆ ಮಾಡಿಸಿದರೂ ಸ್ವಾಗತಿಸುತ್ತೇನೆ ಎಂದರು.

ಮೈಗೆಲ್ಲ ಹೊಲಸು ಮೆತ್ತಿಕೊಂಡು ಕುಸ್ತಿಗೆ ಕರೆದರೆ ತಬ್ಬಿಕೊಳ್ಳುವಷ್ಟು ಮೂರ್ಖನಲ್ಲ. ಅದರ ಅವಶ್ಯಕತೆಯೂ ಇಲ್ಲ. ಸಮಯ ಬಂದಾಗ ಜನರೇ ಉತ್ತರ ಕೊಡ್ತಾರೆ. ನಾವು ಜನರ ಸೇವೆ ಮಾಡುತ್ತಿದ್ದೇವೆ. ಸೇವೆಯನ್ನು ಪರಿಗಣಿಸಿ ಜನರು ಉತ್ತರ ಕೊಡುತ್ತಾರೆ. ಮಾತು, ಆರೋಪ, ಅಪಪ್ರಚಾರ, ಅವಿವೇಕತನ ನೋಡಿ ಅಲ್ಲ ಎಂದರು.ಡಿಕೆಶಿ ಸಿಎಂ: ಸೂಕ್ತ ಸಮಯದಲ್ಲಿ ಹೈಕಮಾಂಡ್ ತೀರ್ಮಾನ

ಕನ್ನಡಪ್ರಭ ವಾರ್ತೆ ಮಳವಳ್ಳಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿಎಂ ಆಗುವ ತೀರ್ಮಾನ ಹೈಕಮಾಂಡ್ ಹಂತದಲ್ಲಿದೆ. ಸೂಕ್ತ ಸಂದರ್ಭದಲ್ಲಿ ಆ ತೀರ್ಮಾನ ಹೊರಬೀಳಲಿದೆ ಎಂದು ಡಿಕೆಶಿ ಪರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಬ್ಯಾಟ್ ಬೀಸಿದರು.

ನಮ್ಮ ಪಕ್ಷದಲ್ಲಿ ಆ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸೂಕ್ತ ಸಂದರ್ಭದಲ್ಲಿ ಆ ತೀರ್ಮಾನಕ್ಕೆ ಪಕ್ಷದ ನಾಯಕರು ಬರಲಿದ್ದಾರೆ. ನಮ್ಮ ಪಕ್ಷದ ತೀರ್ಮಾನವನ್ನು ನಾವು ಒಪ್ಪಿಕೊಳ್ಳುತ್ತೇವೆ. ಹಲವಾರು ಸಂದರ್ಭದಲ್ಲಿ ನನಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತ ಹೇಳಿದ್ದೇನೆ. ಪಕ್ಷ ತೀರ್ಮಾನ ಮಾಡೋವರೆಗೂ ನಾನು ಕಾಯಬೇಕು. ಬಹಳಷ್ಟು ಜನರಿಗಿಂತ ನನಗೆ ಅರ್ಹತೆ ಇದ್ದರೂ ಅವಕಾಶ ಸಿಕ್ಕಿಲ್ಲ. ಹಾಗಂತ ನಮ್ಮ ಪಕ್ಷ, ನಮ್ಮ ಸಿದ್ಧಾಂತ ಬಿಡುವುದಕ್ಕೆ ಆಗೋಲ್ಲ. ನಮ್ಮ ಪಕ್ಷದಲ್ಲಿ ಯಾರಿಗೂ ಅನ್ಯಾಯ ಆಗುವುದಿಲ್ಲವೆಂಬ ಬಗ್ಗೆ ದೃಢ ವಿಶ್ವಾಸವಿದೆ ಎಂದರು.

ಡಿಕೆಶಿ ಪರ ವಿವಿಧ ಮಠದ ಸ್ವಾಮಿಗಳ ಬೆಂಬಲ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಮಠಾಧೀಶರು ಶ್ರೀಸಾಮಾನ್ಯರಿಗೆ ಮಾರ್ಗದರ್ಶಕರಾಗಿರಿ. ರಾಜಕೀಯ ವಿಚಾರವನ್ನು ದಯವಿಟ್ಟು ಗೌಣವಾಗಿಸಿ ಆಶೀರ್ವದಿಸುವಂತೆ ತಿಳಿಸಿದರು.