ಸಚಿವ ಸ್ಥಾನ ದೊರಕಿಸಿಕೊಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿದ್ದೇನೆ. ನಮ್ಮ ಬೇಡಿಕೆ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಪಕ್ಷಕ್ಕೆ ಕೆಲಸ ಮಾಡಿದವರಿಗೆ ಅವಕಾಶ ಕೊಡಿ ಎಂದು ಕೇಳಿದ್ದೇನೆ. ಜಾತಿಯನ್ನು ಆಧರಿಸಿ ಸಚಿವ ಸ್ಥಾನವನ್ನು ನೀಡದೆ ಅನುಭವವನ್ನು ಪರಿಗಣಿಸಿ ಕೊಡಿ.

ಮಂಡ್ಯ : ನಾನು ಸಚಿವನಾಗಲು ಫಿಟ್ ಇದ್ದೇನೆ. ಮೂರು ಬಾರಿ ಶಾಸಕನಾಗಿರುವ ನನಗೆ ಆಡಳಿತದ ಅನುಭವವಿದೆ. ಒಂದು ಅವಕಾಶ ಕೊಟ್ಟು ನೋಡಿ. ನನ್ನ ಅಭಿವೃದ್ಧಿಯ ಶೈಲಿಯನ್ನು ತೋರಿಸುತ್ತೇನೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿಶ್ವಾಸದಿಂದ ಹೇಳಿದರು.

50 ವರ್ಷಗಳಿಂದ ರಾಜಕಾರಣದಲ್ಲಿ

ನಮ್ಮ ಕುಟುಂಬ 50 ವರ್ಷಗಳಿಂದ ರಾಜಕಾರಣದಲ್ಲಿದೆ. ನಮ್ಮ ತಂದೆ ಬಂಡಿಸಿದ್ದೇಗೌಡರು ೬ ತಿಂಗಳಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ೧೯೮೬ರಲ್ಲಿ ನಮ್ಮ ತಾಯಿ ವಿಜಯಲಕ್ಷ್ಮಮ್ಮ ಅವರಿಗೆ ಸಚಿವರಾಗುವ ಅವಕಾಶವಿತ್ತು. ಕಾರಣಾಂತರದಿಂದ ಆಗಲಿಲ್ಲ. ೨೦೦೪ರಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ರಾಜಭವನಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಸಮಾಧಾನಪಡಿಸಿದರು. ನಾನೂ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅನುಭವ ಹಂಚಿಕೊಳ್ಳಲು ನನಗೂ ಒಂದು ಅವಕಾಶ ನೀಡುವಂತೆ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.

ಸಚಿವ ಸ್ಥಾನ ದೊರಕಿಸಿಕೊಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿದ್ದೇನೆ. ನಮ್ಮ ಬೇಡಿಕೆ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಪಕ್ಷಕ್ಕೆ ಕೆಲಸ ಮಾಡಿದವರಿಗೆ ಅವಕಾಶ ಕೊಡಿ ಎಂದು ಕೇಳಿದ್ದೇನೆ. ಜಾತಿಯನ್ನು ಆಧರಿಸಿ ಸಚಿವ ಸ್ಥಾನವನ್ನು ನೀಡದೆ ಅನುಭವವನ್ನು ಪರಿಗಣಿಸಿ ಕೊಡಿ. ನಾನು ಫಿಟ್ ಇದ್ದೇನೆ ಎಂದೆಲ್ಲಾ ಹೇಳಿರುವೆ. ಇನ್ನೂ ಒಂದು ತಿಂಗಳಿದೆ. ಅಲ್ಲಿಯವರೆಗೆ ಬೆಳವಣಿಗೆಗಳನ್ನು ಕಾದುನೋಡೋಣ ಎಂದರು.

ರಮೇಶ್ ಸಚಿವ ಸ್ಥಾನಕ್ಕಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ

ಮಂಡ್ಯ : ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರಿಗೆ ಸಚಿವ ಸ್ಥಾನ ಸಿಗಲೆಂದು ತಾಲೂಕಿನ ಸಂತೆಕಸಲಗೆರೆ ಸಮೀಪದ ಶ್ರೀಭೂಮಿ ಸಿದ್ದೇಶ್ವರ ಸ್ವಾಮಿಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಸಂತೆಕಸಲಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎಂ.ರುದ್ರಪ್ಪ ನೇತೃತ್ವದಲ್ಲಿ ಭಾನುವಾರ ದೇವರಿಗೆ ಅಭಿಷೇಕ, ಅಲಂಕಾರ ಮತ್ತು ವಿಶೇಷ ಪೂಜೆ ನೆರವೇರಿಸಿದರು. ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರೂ ಸಹ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ದೇವರಿಗೆ ವಿಶೇಷ ಅರ್ಚನೆ ಮಾಡಿಸುವುದರೊಂದಿಗೆ ಸಚಿವ ಸ್ಥಾನ ದೊರಕಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ, ಉಪಹಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

ಮುಖಂಡ ಎಸ್.ಎಂ.ರುದ್ರಪ್ಪ ಮಾತನಾಡಿ, ಕ್ಷೇತ್ರದ ಶಾಸಕರಾಗಿ ರಮೇಶ್ ಬಂಡಿಸಿದ್ದೇಗೌಡ ಅವರು ಮೂರು ಬಾರಿ ಆಯ್ಕೆಯಾಗಿದ್ದಾರೆ. ಅವರಿಗೆ ಸಚಿವರಾಗುವ ಎಲ್ಲಾ ಅರ್ಹತೆಗಳಿವೆ. ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನೆರವಾಗುವಂತೆ ವರಿಷ್ಠರನ್ನು ಒತ್ತಾಯಿಸಿದರು.

ತಗ್ಗಹಳ್ಳಿ ಕೃಷ್ಣ ಮಾತನಾಡಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವ ವೇಳೆ ಚಲುವರಾಯಸ್ವಾಮಿ ಅವರಿಗೆ ಮಂತ್ರಿಸ್ಥಾನ ಕೊಡುವಂತೆ ರಮೇಶ್ ಬಂಡಿಸಿದ್ದೇಗೌಡರು ಬಲವಾಗಿ ಒತ್ತಾಯಿಸಿದ್ದರು. ಮೂರು ವರ್ಷ ಮಂತ್ರಿಯಾಗಿ ಆಡಳಿತ ನಡೆಸಿರುವ ಚಲುವರಾಯಸ್ವಾಮಿ ಅವರು ರಮೇಶ್ ಬಂಡಿಸಿದ್ದೇಗೌಡರಿಗೆ ಸಚಿವ ಸ್ಥಾನಕ್ಕೆ ಒತ್ತಡ ಹಾಕಬೇಕು. ಅದೇ ರೀತಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ರಮೇಶ್ ಬಂಡಿಸಿದ್ದೇಗೌಡರ ಪರ ಧ್ವನಿ ಎತ್ತುವಂತೆ ಮನವಿ ಮಾಡಿದರು.

ಜಿಪಂ ಮಾಜಿ ಸದಸ್ಯ ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಧು, ಪಲ್ಲವಿ, ಮುಖಂಡರಾದ ತಾಪಂ ಮಾಜಿ ಸದಸ್ಯ ನಾಗಣ್ಣ, ಕೆ.ಎಚ್.ನಾಗರಾಜು,, ಕಾಳೇನಹಳ್ಳಿ ಮಂಜುನಾಥ, ಮನೋಹರ್, ಸಿದ್ದರಾಜು ಸುಂಡಹಳ್ಳಿ, ಲವ, ಶ್ರೀ ಭೂಮಿಸಿದ್ದೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸಿದ್ದರಾಮು, ಅಂಕರಾಜು ಇತರರಿದ್ದರು.