ಸಾರಾಂಶ
. ನಾನು ಹೋರಿ ಇದ್ದಂತೆ. ಏನೇ ಬಂದರೂ ಗೂಳಿಯಂತೆ ಅದನ್ನು ಎದುರಿಸುವೆ. ಅಗತ್ಯ ಬಿದ್ದರೆ ಪ್ರಾಣತ್ಯಾಗಕ್ಕೂ ಸಿದ್ಧ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ರಬಕವಿ-ಬನಹಟ್ಟಿ : ರೈತರ, ಮಠ-ಮಾನ್ಯಗಳ ಆಸ್ತಿ ವಕ್ಫ್ ಪಾಲಾಗುವುದನ್ನು ತಡೆಯಲು ನಾನು ಹೋರಾಟ ಮಾಡುತ್ತಿದ್ದೇನೆ. ಈ ಹೋರಾಟ ಯಾರ ವಿರುದ್ಧವೂ ಅಲ್ಲ. ನನ್ನ ವಿರುದ್ಧ ಹಲವೆಡೆ ಪ್ರಕರಣಗಳು ದಾಖಲಾಗಿವೆ. ಆದರೆ, ನಾನು ಹೆದರುವುದಿಲ್ಲ. ನಾನು ಹೋರಿ ಇದ್ದಂತೆ. ಏನೇ ಬಂದರೂ ಗೂಳಿಯಂತೆ ಅದನ್ನು ಎದುರಿಸುವೆ. ಅಗತ್ಯ ಬಿದ್ದರೆ ಪ್ರಾಣತ್ಯಾಗಕ್ಕೂ ಸಿದ್ಧ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಬನಹಟ್ಟಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್ ನಿಂದ ರೈತರಿಗೆ, ಮಠಮಾನ್ಯಗಳಿಗೆ ಅನ್ಯಾಯವಾಗದಂತೆ ಹೋರಾಡಲು ಜನಾಂದೋಲನ ಕೈಗೊಂಡಿದ್ದೇವೆ. ಇದಕ್ಕೆ ಎಲ್ಲ ಮಠಾಧೀಶರು ಸಾಥ್ ನೀಡಿ ಧರ್ಮದ ಉಳಿವಿಗೆ ಮುಂದೆ ಬರಬೇಕು. ನಾನು ನಡೆಸುತ್ತಿರುವ ಹೋರಾಟ ಪಕ್ಷದ ವಿರುದ್ಧವಲ್ಲ. ಹೋರಾಟದ ವಿಷಯದಲ್ಲಿ ಬಿಜೆಪಿಯಲ್ಲಿ ಬಣಗಳಿಲ್ಲ. ಕೆಲವರು ಸ್ವಪ್ರತಿಷ್ಠೆಗಾಗಿ ನಮ್ಮ ಹೋರಾಟವನ್ನು ಭಿನ್ನವಾಗಿ ನೋಡುವುದು ತರವಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ವಿಜಯೇಂದ್ರ ಅವರು ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲು ದೆಹಲಿಗೆ ಹೋಗಿರಬಹುದು. ಆದರೆ, ನನ್ನ ವಿರುದ್ಧ ಹೈಕಮಾಂಡ್ ಕ್ರಮ ಜರುಗಿಸದು. ಏಕೆಂದರೆ, ನಾನು ಪ್ರಧಾನಿಯ ಇಚ್ಛೆಯಂತೆ ಕಾರ್ಯ ಮಾಡುತ್ತಿರುವೆ. ನಮ್ಮಲ್ಲಿ ಯಾವುದೇ ಬಣಗಳಿಲ್ಲ ಎಂದರು.
ಯತ್ನಾಳ್‌ರನ್ನು ಉಚ್ಚಾಟನೆ ಮಾಡಬೇಕು ಎಂಬ ರೇಣುಕಾಚಾರ್ಯರ ಆಗ್ರಹಕ್ಕೆ ಪ್ರತಿಕ್ರಿಯಿಸಿ, ನಾನು ಯಾರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಜೊತೆ ನಮ್ಮದೇನು ಕೆಲಸ? ನಮ್ಮ ಹೋರಾಟ ಏನಿದ್ದರೂ ವಕ್ಫ್ ಬಗ್ಗೆ ಎಂದರು. ಶತ್ರುಗಳ ನಾಶಕ್ಕೆ ಪೂಜೆ ಮಾಡಿದ್ದೇವೆ ಎಂಬ ರೇಣುಕಾಚಾರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಕೆಲವರು ಕೇರಳಕ್ಕೆ ಹೋಗಿ ಪೂಜೆ ಮಾಡುತ್ತಾರೆ. ನಾವೇನು ಮಾಡಲು ಸಾಧ್ಯ? ನಾವು ಬಸವಣ್ಣನವರ ವಿಚಾರದವರು. ಬಸವಣ್ಣನನ್ನು ನಂಬಿದವರು ಎಂದರು.