ಕಾಂಗ್ರೆಸ್‌ ಸೇರಲು ರಾಮುಲುಗೆ ನಾನು ಆಹ್ವಾನ ಕೊಟ್ಟಿಲ್ಲ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

| N/A | Published : Jan 25 2025, 12:56 PM IST

dk shivakumar

ಸಾರಾಂಶ

ಚುನಾವಣೆಗೆ ಮುಂಚಿತವಾಗಿ ಬಿಜೆಪಿಯ ಶ್ರೀರಾಮುಲು ಅವರನ್ನು ಕಾಂಗ್ರೆಸ್‌ ಸೇರುವಂತೆ ಆಹ್ವಾನಿಸಿದ್ದು ನಿಜ. ಆದರೆ, ಈಗ ನಾನು ಅವರಿಗೆ ಯಾವುದೇ ಆಹ್ವಾನ ನೀಡಿಲ್ಲ. ಮಾಜಿ ಸಚಿವ ಜನಾರ್ದನ ರೆಡ್ಡಿ ಬಾಯಿ ಚಪಲಕ್ಕೆ ಇಂತಹ ಆರೋಪ ಮಾಡುತ್ತಿದ್ದಾನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರು : ಚುನಾವಣೆಗೆ ಮುಂಚಿತವಾಗಿ ಬಿಜೆಪಿಯ ಶ್ರೀರಾಮುಲು ಅವರನ್ನು ಕಾಂಗ್ರೆಸ್‌ ಸೇರುವಂತೆ ಆಹ್ವಾನಿಸಿದ್ದು ನಿಜ. ಆದರೆ, ಈಗ ನಾನು ಅವರಿಗೆ ಯಾವುದೇ ಆಹ್ವಾನ ನೀಡಿಲ್ಲ. ಮಾಜಿ ಸಚಿವ ಜನಾರ್ದನ ರೆಡ್ಡಿ ಬಾಯಿ ಚಪಲಕ್ಕೆ ಇಂತಹ ಆರೋಪ ಮಾಡುತ್ತಿದ್ದಾನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಚುನಾವಣೆಗೆ ಮುನ್ನ ಪಕ್ಷಕ್ಕೆ ಆಹ್ವಾನಿಸಿದಾಗ ಶ್ರೀರಾಮುಲು ಬರುವುದಿಲ್ಲ, ಬಿಜೆಪಿಯಲ್ಲಿಯೇ ಉಳಿದುಕೊಳ್ಳುತ್ತೇನೆ ಎಂದು ಹೇಳಿದ್ದರು. ಆ ರೀತಿ ಆಗ ಸುಮಾರು 50 ಜನಕ್ಕೆ ಕೇಳಿದ್ದೇನೆ. ಆದರೆ, ಈಗ ನನಗೆ ಶ್ರೀರಾಮುಲು ಸಿಕ್ಕಿಯೂ ಇಲ್ಲ, ನನ್ನ ಬಳಿ ಮಾತನಾಡಿಯೂ ಇಲ್ಲ. ಪಕ್ಷಕ್ಕೆ ಬರುವಂತೆ ಅವರಿಗೆ ನಾನು ಆಹ್ವಾನವನ್ನೂ ನೀಡಿಲ್ಲ. ಈ ವಿಚಾರದಲ್ಲಿ ನನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಜನಾರ್ದನ ರೆಡ್ಡಿ ಬಾಯಿ ಚಪಲಕ್ಕೆ ಈ ರೀತಿ ಮಾತನಾಡುತ್ತಿದ್ದಾನೆ ಎಂದರು.

ನಾನು ಶ್ರೀರಾಮುಲು ಸಂಪರ್ಕದಲ್ಲಿರುವುದನ್ನು ಆತ ನೋಡಿದ್ದಾನೆಯೇ? ಆತ ಯಾರ ಜೊತೆ ಸಂಪರ್ಕದಲ್ಲಿ ಇದ್ದ ಎಂಬುದನ್ನು ಈಗ ಚರ್ಚೆ ಮಾಡುವುದು ಬೇಡ. ನಾನು ಯಾವುದನ್ನು ಬಹಿರಂಗಗೊಳಿಸಲು ಹೋಗುವುದಿಲ್ಲ. ಆತ ಆ ಪಕ್ಷಕ್ಕೆ(ಬಿಜೆಪಿ) ಕಾಲಿಟ್ಟು ಆ ಮನೆಯನ್ನೇ ಒಡೆಯುವ ಪ್ರಯತ್ನ ಮಾಡುತ್ತಿದ್ದಾನೆ. ನಾನು ಆತನ ಹೆಸರು ಹೇಳಿ ಅವನನ್ನು ಏಕೆ ದೊಡ್ಡ ಮನುಷ್ಯನನ್ನಾಗಿ ಮಾಡಲಿ ಎಂದು ಜನಾರ್ದನ ರೆಡ್ಡಿಗೆ ತಿರುಗೇಟು ನೀಡಿದರು.

ಕೆಲವು ಸಚಿವರು ಶ್ರೀರಾಮುಲು ಪಕ್ಷಕ್ಕೆ ಬಂದರೆ ಸ್ವಾಗತ ಎನ್ನುತ್ತಿದ್ದಾರಲ್ಲ ಎಂದು ಕೇಳಿದಾಗ, ನನ್ನ ಮುಂದೆ ಈ ವಿಚಾರ ಪ್ರಸ್ತಾಪವಾಗಲಿ, ಆಗ ಚರ್ಚೆ ಮಾಡೋಣ ಎಂದರು.